Karnataka Budget: ಬಜೆಟ್‌ನಲ್ಲಿ ಹಿಂದುಳಿದ ವರ್ಗಕ್ಕೆ ಕೊಡುಗೆ: ಸಿಎಂ ಭರವಸೆ
* ಹಿಂದುಳಿದ ವರ್ಗದ ಸ್ವಾಮೀಜಿಗಳ ಮನವಿಗೆ ಬೊಮ್ಮಾಯಿ ಸ್ಪಂದನೆ
* ಹಿಂದುಳಿದ ವರ್ಗಗಳ ಮಠಗಳಿಗೆ ವಿಶೇಷ ಅನುದಾನ
* ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಆದ್ಯತೆ
ಬೆಂಗಳೂರು(ಫೆ.01): ಈ ಬಾರಿಯ ಬಜೆಟ್‌ನಲ್ಲಿ(Budget) ಹಿಂದುಳಿದ ವರ್ಗಗಳ ಮತ್ತು ದಲಿತ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಭರವಸೆ ನೀಡಿದ್ದಾರೆ. ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಜೆಟ್‌ನಲ್ಲಿ ಅನುದಾನ ನೀಡುವ ಸಂಬಂಧ ಮನವಿ ಸಲ್ಲಿಸಲಾಯಿತು.
ಹಿಂದುಳಿದ ವರ್ಗಗಳ ಮಠಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇದ್ದು, ಎಲ್ಲ ಮಠಗಳು ಅರ್ಥಿಕ ಅಭದ್ರತೆಯಲ್ಲಿವೆ. ಅದಕ್ಕಾಗಿ ಹಿಂದುಳಿದ ದಲಿತ ಸಮಾಜದ ವಿವಿಧ ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ತಲಾ 5 ಕೋಟಿ ರು. ಅನುದಾನ ನೀಡಬೇಕು. ಜತೆಗೆ ಬೆಂಗಳೂರು(Bengaluru) ನಗರದಲ್ಲಿ ತಲಾ ಎಕರೆ ಭೂಮಿ ಮಂಜೂರು ಮಾಡುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
Bengaluru: ಕಾನೂನನ್ನು ಸರಳೀಕರಿಸುತ್ತೇವೆ: ಸಿಎಂ ಬೊಮ್ಮಾಯಿ
ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸ್ವಾಮೀಜಿಗಳ ನಿಯೋಗವು ಹಲವು ಬೇಡಿಕೆಗಳ ಮನವಿ ಸಲ್ಲಿಸಿದೆ. ಹಿಂದುಳಿದ ಸಮುದಾಯಗಳ ಯುವಕರಿಗೆ, ಯುವತಿಯರಿಗೆ ವಿದ್ಯೆ, ಉದ್ಯೋಗದಲ್ಲಿ(Jobs) ಅವಕಾಶ ನೀಡಬೇಕು. ಸಮುದಾಯಗಳಿಗೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು. ಒಕ್ಕೂಟ ರೂಪಿಸಿಕೊಂಡು ಹೋರಾಟ ನಡೆಸುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ಸಮುದಾಯದ ಆಶೋತ್ತರಗಳು ಇಲ್ಲಿಯವರೆಗೆ ಎಷ್ಟರ ಮಟ್ಟಿಗೆ ಸಾಕಾರಗೊಳ್ಳಬೇಕೋ, ಅದು ಆಗಿಲ್ಲ. ಹೀಗಾಗಿ ಈಗ ಹೆಚ್ಚಿನ ಒತ್ತು ನೀಡಿ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿಪಡಿಸಿಕೊಡಬೇಕು ಸಮಾಜದ ಕಳಕಳಿಯಿಂದ ಸ್ವಾಮೀಜಿಗಳು ಮನವಿ ಮಾಡಿದ್ದಾರೆ. ಮಠದಿಂದ ಹಿಂದುಳಿದವರಿಗೆ, ದಲಿತರಿಗೆ, ಮಕ್ಕಳಿಗೆ ಶಿಕ್ಷಣ, ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳು ಮತ್ತು ಅನ್ನದಾಸೋಹ ಜತೆಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠಗಳ ಕೊಡುಗೆ ನೀಡಲು ನಮ್ಮ ಸರ್ಕಾರದಿಂದ ಅನುದಾನವನ್ನು ಕೊಡಬೇಕು. ಅಲ್ಲದೇ, ಎಲ್ಲ ಮಠಗಳಿಗೆ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಮಾಡುವ ಸಲುವಾಗಿ ಅವರಿಗೆ ನಿವೇಶನ ನೀಡಬೇಕೆಂದು ಬಹಳ ಹಿಂದೆಯೇ ಬೇಡಿಕೆಯನ್ನು ಹಿಂದಿನ ಸರ್ಕಾರದಲ್ಲಿ ನೀಡಿದ್ದರು. ಆದರೆ, ಸ್ವಲ್ಪ ಕಾನೂನು ತೊಡಕು ಇರುವುದರಿಂದ ಅದು ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ವಿಷಯವನ್ನೂ ಕೂಡ ನಮ್ಮ ಗಮನಕ್ಕೆ ತಂದಿದ್ದಾರೆ. ಅದಕ್ಕೂ ಕೂಡ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಬೊಮ್ಮಾಯಿ ಆಶ್ವಾಸನೆ ನೀಡಿದರು.
ಬಿಎಸ್‌ವೈ ರೀತಿ ನೆರವು:
ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ(Niranjanandapuri Swamiji) ಮಾತನಾಡಿ, ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಅವರು ಒಕ್ಕೂಟದ ಶ್ರೇಯೋಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮುಂದಾಳತ್ವದಲ್ಲಿ 90 ಕೋಟಿ ರು. ಮಂಜೂರು ಮಾಡಿಸಿ ನಮ್ಮ ಮಠಗಳಿಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಸಹಕಾರ ನೀಡಿದ್ದರು. ಹಿಂದುಳಿದ ಸಮಾಜದ ಏಳ್ಗೆಗಾಗಿ ಸಾಕಷ್ಟು ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹೋರಾಟದ ಒಂದು ಫಲವಾಗಿ ನಾವು ಒಕ್ಕೂಟ ರಚಿಸಿಕೊಂಡು ನಮ್ಮ ಬೇಡಿಕೆಗಳನ್ನು ಸರ್ಕಾರ ಮುಂದೆ ಮಂಡಿಸಿದ್ದೇವೆ ಎಂದರು.
ಸಂಚಾರ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ: ಟೋಯಿಂಗ್ ವ್ಯವಸ್ಥೆ ಪುನರ್‌ಪರಿಶೀಲನೆಗೆ ಸಿಎಂ ಸಭೆ
ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಹಿಂದುಳಿದ ವರ್ಗಗಳ(Backward Classes) ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಉಪ್ಪಾರ, ಮಡಿವಾಳ ಸ್ವಾಮೀಜಿಗಳು ಸೇರಿದಂತೆ ಹಲವು ಹಿಂದುಳಿದ, ದಲಿತ ಮಠಾಧೀಶರು ಉಪಸ್ಥಿತರಿದ್ದರು.
ಮನವಿಯಲ್ಲಿ ಏನಿದೆ?
ಹಿಂದುಳಿದ ವರ್ಗಗಳ ಮಠಗಳಿಗೆ ವಿಶೇಷ ಅನುದಾನ
ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರಕ್ಕೆ ತಲಾ 5 ಕೋಟಿ
ಎಲ್ಲಾ ಮಠಗಳಿಗೂ ಬೆಂಗಳೂರಲ್ಲಿ 1 ಎಕರೆ ಜಾಗ
ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಆದ್ಯತೆ
ಸಮುದಾಯಕ್ಕೆ ರಾಜಕೀಯಲ್ಲಿ ಹೆಚ್ಚಿನ ಅವಕಾಶ