Asianet Suvarna News Asianet Suvarna News

ಸಂಚಾರ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ: ಟೋಯಿಂಗ್‌ ವ್ಯವಸ್ಥೆ ಪುನರ್‌ಪರಿಶೀಲನೆಗೆ ಸಿಎಂ ಸಭೆ

*ಅತಿರೇಕದ ವರ್ತನೆ ಸರಿಯಲ್ಲ: ಜನಸ್ನೇಹಿ ಮಾಡಲಿದ್ದೇವೆ: ಸಿಎಂ
*ಬೈಕ್‌ ಬಿಡಿಸಿಕೊಳ್ಳಲು ಟೋಯಿಂಗ್‌ ವಾಹನದ ಹಿಂದೆ ಓಟ!
*ಡೆಲಿವರಿ ಬಾಯ್‌ ಅಂಗಲಾಚುವ ವಿಡಿಯೋ ವೈರಲ್‌
*ಸಂಚಾರ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ
 

Karnataka CM Basavaraj Bommai to review existing Vehicle towing system on Mondau
Author
Bengaluru, First Published Jan 31, 2022, 8:35 AM IST | Last Updated Jan 31, 2022, 8:35 AM IST

ಬೆಂಗಳೂರು (ಜ. 31): ಆನ್‌ಲೈನ್‌ನಲ್ಲಿ ಬುಕ್‌ ಮಾಡುವ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಡೆಲಿವರಿ ನೀಡುವ ಯುವಕ ತನ್ನ ದ್ವಿಚಕ್ರ ವಾಹನ ಬಿಡಿಸಿಕೊಳ್ಳಲು ಟೋಯಿಂಗ್‌ ವಾಹನದ (Towing Vehicle) ಹಿಂದೆ ಓಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಚಾರ ಪೊಲೀಸರು ಹಾಗೂ ಟೋಯಿಂಗ್‌ ವಾಹನ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೀವನಬಿಮಾನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಆನ್‌ಲೈನ್‌ ವಸ್ತುಗಳ ಡೆಲಿವರಿ ಮಾಡುವ ಯುವಕ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ, ವಸ್ತುಗಳನ್ನು ಮನೆಯೊಂದಕ್ಕೆ ಡೆಲಿವರಿ ನೀಡಲು ಹೋಗಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಸಂಚಾರ ಪೊಲೀಸರ ಟೋಯಿಂಗ್‌ ವಾಹನ, ಈ ದ್ವಿಚಕ್ರ ವಾಹನವನ್ನು ಎತ್ತಿಕೊಂಡು ಹೋಗಲು ಮುಂದಾಗಿದೆ.

ಈ ವೇಳೆ ದ್ವಿಚಕ್ರ ವಾಹನದತ್ತ ಯುವಕ ಓಡಿ ಬಂದಿದ್ದಾನೆ. ಟೋಯಿಂಗ್‌ ಸಿಬ್ಬಂದಿ ತನ್ನ ದ್ವಿಚಕ್ರವಾಹನ ಎತ್ತಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ಆ ಟೋಯಿಂಗ್‌ ವಾಹನದ ಹಿಂದೆ ಓಡಿದ್ದಾನೆ. ದ್ವಿಚಕ್ರ ವಾಹನ ಬಿಟ್ಟು ಕೊಟ್ಟು ಬಿಡಿ ಎಂದು ಓಡುತ್ತಲ್ಲೇ ಅಂಗಲಾಚಿದ್ದಾನೆ. ಆದರೂ ಟೋಯಿಂಗ್‌ ಸಿಬ್ಬಂದಿ ವಾಹನ ನಿಲ್ಲಿಸದೆ ಮುಂದೆ ಸಾಗಿದ್ದಾರೆ.

ಇದನ್ನೂ ಓದಿ: Bengaluru: ವಿಕಲಾಂಗ ಮಹಿಳೆಯನ್ನು ಥಳಿಸಿದ ಎಎಸ್‌ಐ ನಾರಾಯಣ ಗೌಡ ಅಮಾನತು

ಪೊಲೀಸರೇ ನಿಯಮ ಪಾಲಿಸುತ್ತಿಲ್ಲ?: ಯುವಕ ತನ್ನ ದ್ವಿಚಕ್ರ ವಾಹನಕ್ಕಾಗಿ ಟೋಯಿಂಗ್‌ ಸಿಬ್ಬಂದಿ ಬಳಿ ಅಂಗಲಾಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೀಕ್ಷಿಸಿರುವ ನೆಟ್ಟಿಗರು, ಸಂಚಾರ ಪೊಲೀಸರು ಹಾಗೂ ಟೋಯಿಂಗ್‌ ವಾಹನ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. 

ನೋ ಪಾರ್ಕಿಂಗ್‌ನಲ್ಲಿ ವಾಹನಗಳನ್ನು ನಿಲುಗಡೆ ಮಾಡಿದ್ದಲ್ಲಿ, ಟೋಯಿಂಗ್‌ ಮಾಡುವ ಮುನ್ನ ಧ್ವನಿವರ್ಧಕದಲ್ಲಿ ಅನೌನ್ಸ್‌ ಮಾಡಬೇಕು. ಆಗಲೂ ವಾಹನ ಸವಾರರು ಬಾರದಿದ್ದಲ್ಲಿ ಮಾತ್ರ ಟೋಯಿಂಗ್‌ ಮಾಡಬೇಕು. ಆದರೆ, ಸಂಚಾರ ಪೊಲೀಸರು ಹಾಗೂ ಟೋಯಿಂಗ್‌ ಸಿಬ್ಬಂದಿ ನಿಯಮ ಪಾಲಿಸುತ್ತಿಲ್ಲ. ಏಕಾಏಕಿ ವಾಹನಗಳನ್ನು ಟೋಯಿಂಗ್‌ ಮಾಡಿ ವಾಹನ ಸವಾರರ ಸುಲಿಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸಿಎಂ ಸಭೆ: ನಗರದಲ್ಲಿ ನೋ ಪಾರ್ಕಿಂಗ್‌ ಸ್ಥಳದಲ್ಲಿನ ವಾಹನಗಳನ್ನು ಟೋಯಿಂಗ್‌ (Vehicle Towing) ಮಾಡುವ ವ್ಯವಸ್ಥೆ ಪುನರ್‌ಪರಿಶೀಲನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸೋಮವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಕರೆದಿದ್ದಾರೆ. ಭಾನುವಾರ ಟೋಯಿಂಗ್‌ ವಿಚಾರದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಉಂಟಾಗುತ್ತಿರುವ ಘರ್ಷಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಯಿಂಗ್‌ ನಡೆಸುವ ವೇಳೆ ಅತಿರೇಕದ ವರ್ತನೆಯ ದೂರುಗಳು ಬರುತ್ತಿವೆ. ಈ ಹಿಂದೆ ಟೋಯಿಂಗ್‌ ವ್ಯವಸ್ಥೆ ಪೊಲೀಸ್‌ ಇಲಾಖೆಯ ಬಳಿಯೇ ಇತ್ತು. ಈಗಿರುವ ವ್ಯವಸ್ಥೆ ಪುನರ್‌ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿBengaluru Traffic Police: ಹಾಫ್‌ ಹೆಲ್ಮೆಟ್‌ ವಿರುದ್ಧ ಪೊಲೀಸರ ಗದಾ ಪ್ರಹಾರ..!

ಟೋಯಿಂಗ್‌ ವ್ಯವಸ್ಥೆಯನ್ನು ಮೊದಲು ಇಲಾಖೆಯೇ ನಡೆಸುತ್ತಿತ್ತು. ಈಗ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಇತ್ತೀಚೆಗೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆಯುವ ಹಲವು ಘಟನೆಗಳನ್ನು ನಾನೂ ಗಮನಿಸಿದ್ದೇನೆ. ಹೀಗಾಗಿ ವ್ಯವಸ್ಥೆ ಪುನರ್‌ ಪರಿಶೀಲನೆ ನಡೆಸಿ ಸಾರ್ವಜನಿಕ ಸ್ನೇಹಿಯಾಗಿ ಮಾಡಲು ಸೋಮವಾರ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದರು.

ಸಾರ್ವಜನಿಕರು ಸಹ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಅದರಂತೆ ಕಾನೂನು ರಕ್ಷಣೆ ಮಾಡುವವರು ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಅತಿರೇಕದ ವರ್ತನೆ ಮಾಡುವುದು ಸರಿಯಲ್ಲ. ಈ ಬಗ್ಗೆ ಸೋಮವಾರ ಪೊಲೀಸ್‌ ಆಯುಕ್ತರು, ಪೊಲೀಸ್‌ ಮಹಾನಿರ್ದೇಶಕರು, ಸಂಚಾರಿ ಪೊಲೀಸ್‌ ಅಧಿಕಾರಿಗಳ ಸಭೆ ಕರೆದು ಸಂಪೂರ್ಣ ಪುನರ್‌ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಹಲವು ಬದಲಾವಣೆ ತಂದು ಜನಸ್ನೇಹಿಯಾಗಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ವಿಚಾರಣೆಗೆ ಆದೇಶ: ರವಿಕಾಂತೇಗೌಡ: ಟೋಯಿಂಗ್‌ ವಾಹನದ ಹಿಂದೆ ಯುವಕನೊಬ್ಬ ತನ್ನ ವಾಹನ ಬಿಡಿಸಿಕೊಳ್ಳಲು ಓಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಜೀವನಬಿಮಾನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ವಿಚಾರಣೆಗೆ ಆದೇಶಿಸಲಾಗಿದೆ. ಈ ವಿಚಾರಣೆ ಮುಕ್ತಾಯದವರೆಗೂ ಆ ಟೋಯಿಂಗ್‌ ವಾಹನದ ಸೇವೆ ಅಮಾನತಿನಲ್ಲಿರಿಸಲಾಗಿದೆ. ಸಂಬಂಧ ಎಎಸ್‌ಐ ಅವರನ್ನು ಟೋಯಿಂಗ್‌ ಸೇವೆಯಿಂದ ಹಿಂಪಡೆಯಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios