ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಭರತ್ ಎತ್ತಿನಮನೆ ಹಾಸ್ಟೆಲ್‌ನಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷಾ ಒತ್ತಡವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ನಿನ್ನೆ ಇದೇ ಕಾಲೇಜಿನ 3 ನರ್ಸಿಂಗ್ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಮಂಡ್ಯ (ಜು.21): ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಹಾಸ್ಟೆಲ್‌ನಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ನಿನ್ನೆ ಇದೇ ಮೆಡಿಕಲ್ ಕಾಲೇಜಿನ 3 ನರ್ಸಿಂಗ್ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆಯ ಶಾಕ್‌ನಿಂದ ಹೊರಬರುವ ಮುನ್ನವೇ ಮತ್ತೊಬ್ಬ ವಿದ್ಯಾರ್ಥಿ ಸಾವಿಗೆ ಶರಣಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇನ್ನು ಸಾವಿಗೆ ಶರಣಾಗಿರುವ ವಿದ್ಯಾರ್ಥಿ ಕೊಪ್ಪಳ ಮೂಲದ ಭರತ್ ಎತ್ತಿನಮನೆ (ವಯಸ್ಸು 20), ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ. ಭರತ್ ಭಾನುವಾರ ರಾತ್ರಿ ತನ್ನ ಹಾಸ್ಟೆಲ್ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ಸ್ನೇಹಿತರು ಆತನ ರೂಮಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯದ ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ ಪ್ರತಿಕ್ರಿಯೆ ನೀಡಿದ್ದು, 'ರಾತ್ರಿ 12 ಗಂಟೆಯವರೆಗೆ ಭರತ್ ಪಕ್ಕದ ರೂಮಿನಲ್ಲಿ ಸ್ನೇಹಿತರೊಂದಿಗೆ ಇದ್ದ. ನಂತರ ತನ್ನ ರೂಮಿಗೆ ತೆರಳಿದ್ದಾನೆ. ಆತನೊಂದಿಗೆ ಹಾಸ್ಟೆಲ್ ರೂಮಿನಲ್ಲಿ ಉಳಿದುಕೊಂಡಿದ್ದ ಆತನ ಇಬ್ಬರು ಸಹಪಾಠಿಗಳು ನಿನ್ನೆ ಭಾನುವಾರ ರಜಾ ದಿನವಾಗಿದ್ದರಿಂದ ಊರಿಗೆ ಹೋಗಿದ್ದರು. ಹೀಗಾಗಿ, ಸೋಮವಾರ ಬೆಳಗ್ಗೆ ಕಾಲೇಜಿಗೆ ಹೋಗುವ ಮುನ್ನ ತಿಂಡಿ ಸಮಯವಾದರೂ ಹೊರಬರದ ಭರತ್‌ನನ್ನು ಮಾತನಾಡಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿ ಕೋಣೆಯ ಬಾಗಿಲು ತೆರೆದು ನೋಡಿದಾಗ ಸಾವಿಗೆ ಶರಣಾದ ವಿಚಾರ ಬೆಳಕಿಗೆ ಬಂದಿದೆ' ಎಂದು ತಿಳಿಸಿದ್ದಾರೆ.
ಪರೀಕ್ಷಾ ಒತ್ತಡವೇ ಕಾರಣ?
ಭರತ್ ಕಾಲೇಜಿನಲ್ಲಿ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದನು. ಹೀಗಾಗಿ, ಕಳೆದ ಸೆಮಿಸ್ಟರ್‌ನಲ್ಲಿ ಹೆಚ್ಚಾಗಿ ಕಾಲೇಜಿಗೆ ಹಾಜರಾಗದ ಕಾರಣದಿಂದ ಪರೀಕ್ಷೆ ಬರೆಯಲು ಆತನಿಗೆ ಅವಕಾಶ ಸಿಗಲಿಲ್ಲ. ಈ ವರ್ಷ ಪರೀಕ್ಷೆಗಳನ್ನು ಕ್ಲಿಯರ್ ಮಾಡಿಕೊಳ್ಳಬೇಕಾದ ಎಂಬ ಒತ್ತಡದಲ್ಲಿ ಸಿಲುಕಿದ್ದನು. ಹೀಗಾಗಿ, ಎಲ್ಲ ಬಾಕಿ ಉಳಿದ ವಿಷಯಗಳ ಪರೀಕ್ಷಾ ಶುಲ್ಕವನ್ನು ಪಾವತಿಸಲು ಭರತ್ ಹಾಸ್ಟೆಲ್‌ಗೆ ಆಗಮಿಸಿದ್ದನು. ಆದರೆ, ನಿನ್ನೆ ಆತನ ಇತರೆ ರೂಮೇಟ್‌ಗಳು ರೂಮಿನಲ್ಲಿರದ ಕಾರಣ ಪರೀಕ್ಷೆಯ ಆತಂಕ ಹೆಚ್ಚಾಗಿ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ.
ಪೋಷಕರಿಗೆ ಕೂಡ ಈಗಾಗಲೇ ಮಾಹಿತಿ ನೀಡಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರೆದಿದೆ. ಇಂತಹ ಘಟನೆಗಳು ವಿದ್ಯಾರ್ಥಿಗಳಲ್ಲಿ ಅತಿಯಾದ ಮಾನಸಿಕ ಒತ್ತಡ ಮತ್ತು ನಿರಾಶೆಯನ್ನು ತೋರಿಸುತ್ತವೆ. ವೈದ್ಯಕೀಯ ಅಥವಾ ಇತರೆ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಸಮಾಲೋಚನೆ (ಕೌನ್ಸೆಲಿಂಗ್), ಮಾನಸಿಕ ಆರೋಗ್ಯದ ಮೇಲಿನ ಜಾಗೃತಿ ಹಾಗೂ ಬೆಂಬಲ ವ್ಯವಸ್ಥೆ ಅಗತ್ಯವಾಗಿದೆ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ.
ಇದೇ ಕಾಲೇಜಿನ 3 ವಿದ್ಯಾರ್ಥಿಗಳು ನಿನ್ನೆ ಸಾವು:
ಮಂಡ್ಯದ ಮಿಮ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ನರ್ಸಿಂಗ್ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಭಾನುವಾರ ರಜಾ ದಿನದ ನಿಮಿತ್ಯ ಕಾವೇರಿ ಹಿನ್ನೀರಿನ ಜಾಗಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಒಟ್ಟು 6 ಜನ ಸ್ನೇಹಿತರು ಪ್ರವಾಸಕ್ಕೆ ಹೋಗಿದ್ದು, ಅದರಲ್ಲಿ ಪ್ರಶಾಂತ್, ಸಿದ್ದೇಶ್ ಮತ್ತು ಕೃಷ್ಣ ಎಂಬ ಮೂವರು ವಿದ್ಯಾರ್ಥಿಗಳು ನೀರಿನ ಆಳಕ್ಕೆ ಹೋಗಿ ಮುಳುಗಿ ಸಾವನ್ನಪ್ಪಿದ್ದರು. ಬೆಳಗ್ಗೆ ಘಟನೆ ನಡೆದಿದ್ದು, ಮಧ್ಯಾಹ್ನದ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ನುರಿತ ಈಜುಗಾರರ ಸಹಾಯದಿಂದ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಕಾಲೇಜಿನಲ್ಲಿ ಈ ಘಟನೆ ಮಾಸುವ ಮುನ್ನವೇ ಇದೀಗ ಮೆಡಿಕಲ್ ವಿದ್ಯಾರ್ಥಿ ಸಾವು ಸಂಭವಿಸಿದೆ.


