ರಾಜ್ಯದಲ್ಲಿ ಕಳೆದ ವಾರದಿಂದ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕೊರೋನಾ ಸೋಂಕು ಪರೀಕ್ಷೆಗೆ ಆರೋಗ್ಯ ಇಲಾಖೆ ಚಾಲನೆ ನೀಡಿದೆ.
ಬೆಂಗಳೂರು (ಮೇ.25): ರಾಜ್ಯದಲ್ಲಿ ಕಳೆದ ವಾರದಿಂದ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕೊರೋನಾ ಸೋಂಕು ಪರೀಕ್ಷೆಗೆ ಆರೋಗ್ಯ ಇಲಾಖೆ ಚಾಲನೆ ನೀಡಿದೆ. ಹೀಗಾಗಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಹೊಂದಿರುವವರು ಹಾಗೂ ಉಸಿರಾಟ, ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುವಂತೆ ಆದೇಶ ಮಾಡಲಾಗಿದೆ. ಕೊರೋನಾ ಸೋಂಕು ಕುರಿತ ಪರೀಕ್ಷೆಗೆ ಭಾನುವಾರದಿಂದ ಚಾಲನೆ ನೀಡಲಿದ್ದು, ಇದಕ್ಕಾಗಿ ತಿಂಗಳಿಗೆ ತಲಾ 5,000 ಆರ್‌ಟಿಪಿಸಿಆರ್ ಹಾಗೂ ಆ್ಯಂಟಿಜೆನ್ ಪರೀಕ್ಷಾ ಕಿಟ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜತೆಗೆ ಪ್ರಯೋಗಾಲಯಗಳನ್ನೂ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಜತೆಗೆ ಬಾಣಂತಿಯರು, ಗರ್ಭಿಣಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಹೊಂದಿರುವ 35 ಜನರಲ್ಲಿ ಸೋಂಕು ಗಂಭೀರವಾಗಿಲ್ಲ. ಸೌಮ್ಯ ಸ್ವಭಾವದ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಸಾರ್ವಜನಿಕರು ಆತಂಕಗೊಳ್ಳದೆ ಮುನ್ನೆಚ್ಚರಿಕೆ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಬಗ್ಗೆ ಶನಿವಾರ ಸುದ್ದಿಗಾರರೊಮದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಟ್ಟು 35 ಮಂದಿ ಕೋವಿಡ್ ಪಾಸಿಟಿವ್ ಹೊಂದಿದ್ದಾರೆ. ಬೆಂಗಳೂರಿನಲ್ಲೇ 32 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಅಗತ್ಯ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಹೇಳಿದರು.
ಶುಕ್ರವಾರ ಕೋವಿಡ್ ತಾಂತ್ರಿಕ ಸಮಿತಿ ಸಭೆ ನಡೆಸಿದ್ದು, ಕೇಂದ್ರ ಸರ್ಕಾರದ ಜೊತೆ ಕೂಡ ಸಂಪರ್ಕದಲ್ಲಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕೋವಿಡ್ ಪಾಸಿಟಿವ್ ಹೊಂದಿದವರಿಗೆ ಸೌಮ್ಯ ಸ್ವಭಾವದ ಲಕ್ಷಣ ಬಿಟ್ಟರೆ ಗಂಭೀರವಾದ ಸಮಸ್ಯೆಗಳು ಕಂಡುಬಂದಿಲ್ಲ. ಆದರೂ ಉಸಿರಾಟದ ತೀವ್ರ ತೊಂದರೆ (ಸಾರಿ) ಹೊಂದಿರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರು ಆಸ್ಪತ್ರೆಗಳಲ್ಲಿ ದಾಖಲಾದರೆ ಅಲ್ಲೇ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಎಲ್ಲರಿಗೂ ಮಾಸ್ಕ್ ಕಡ್ಡಾಯವಿಲ್ಲ: ಬಾಣಂತಿಯರು ಜನ ಹೆಚ್ಚಿರುವ ಕಡೆ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ತಕ್ಷಣಕ್ಕೆ ಮಾಸ್ಕ್ ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಸ್ವಚ್ಛತೆ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸುವುದು ಉತ್ತಮ. ಸಾರ್ವಜನಿಕರು ಪ್ರಯಾಣ ಮಾಡಲು ಯಾವುದೇ ಅಡ್ಡಿಯಿಲ್ಲ. ಈ ಬಗ್ಗೆ ಅನಗತ್ಯ ಆತಂಕಕ್ಕೆ ಒಳಗಾಗದೆ ಜಾಗೃತಿ ಹರಡಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.
ತಿಂಗಳಿಗೆ ಆಗುವಷ್ಟು ಪರೀಕ್ಷಾ ಕಿಟ್: ಕೊರೋನಾ ಪರೀಕ್ಷೆಗೆ ಅಗತ್ಯವಾಗಿರುವ ಪರೀಕ್ಷಾ ಕಿಟ್‌ಗಳನ್ನು ಒಂದು ತಿಂಗಳಿಗೆ ಆಗುವಷ್ಟು ದಾಸ್ತಾನು ಮಾಡಲು ಸೂಚಿಸಲಾಗಿದೆ. ಒಂದು ತಿಂಗಳಿಗೆ ಬೇಕಾಗುವ 5 ಸಾವಿರ ಆರ್‌ಟಿಪಿಸಿಆರ್ ಹಾಗೂ 5 ಸಾವಿರ ವಿಡಿಆರ್‌ಎಲ್ ಆ್ಯಂಟಿಜೆನ್ ಪರೀಕ್ಷೆ ಕಿಟ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.
