ದೇಶ-ವಿದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಜೆಎನ್.1 ಪತ್ತೆಯಾಗುತ್ತಿದ್ದರೂ ಆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಜೆಎನ್.1 ತಳಿ ಗಂಭೀರವಲ್ಲ, ಸೋಂಕಿತರಲ್ಲಿ ಸೌಮ್ಯ ಸ್ವರೂಪದ ರೋಗಲಕ್ಷಣ ಮಾತ್ರ ಕಂಡುಬರುತ್ತದೆ’ ಎಂದು ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ (ಮೇ.25): ದೇಶ-ವಿದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಜೆಎನ್.1 ಪತ್ತೆಯಾಗುತ್ತಿದ್ದರೂ ಆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಜೆಎನ್.1 ತಳಿ ಗಂಭೀರವಲ್ಲ, ಸೋಂಕಿತರಲ್ಲಿ ಸೌಮ್ಯ ಸ್ವರೂಪದ ರೋಗಲಕ್ಷಣ ಮಾತ್ರ ಕಂಡುಬರುತ್ತದೆ’ ಎಂದು ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ದೆಹಲಿಯಲ್ಲಿನ ಉದಾಹರಣೆ ನೀಡಿರುವ ಅವರು, ‘ದೆಹಲಿಯಲ್ಲಿ 23 ಮಂದಿ ಕೊರೋನಾ ಸೋಂಕಿತರಿದ್ದು, ಅವರಲ್ಲಿ ಸೌಮ್ಯ ಲಕ್ಷಣಗಳಷ್ಟೇ ಕಂಡುಬಂದಿವೆ. ಅವರ ಪೈಕಿ 22 ಜನರು ಆಸ್ಪತ್ರೆಗೆ ದಾಖಲಾಗದೆ, ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಕಿರಿಯ ವೈದ್ಯರ ನೆಟ್‌ವರ್ಕ್‌ನ ರಾಷ್ಟ್ರೀಯ ವಕ್ತಾರ ಡಾ। ಧೃವ್ ಚೌಹಾಣ್ ಮಾತನಾಡಿ, ‘ಇದು ರೂಪಾಂತರಿ ವೈರಸ್. ಮಾರಕವಲ್ಲ. ಆದರೂ ಮುನ್ನೆಚರಿಕೆ ಕ್ರಮವಾಗಿ ಕೈಗಳ ಸ್ವಚ್ಛತೆ, ಆಸ್ಪತ್ರೆ, ಜನಜಂಗುಳಿ ಇರುವಂತಹ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ, ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಅಂತೆಯೇ, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ರೋಗಕ್ಕಿಂತ ಜಾಸ್ತಿ ದಿಗಿಲಿಂದಲೇ ಆರೋಗ್ಯ ಸಮಸ್ಯೆಗಳಾಗುತ್ತವೆ’ ಎಂದು ಮನವಿ ಮಾಡಿದ್ದಾರೆ. ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸಹಾಯಕ ಸಲಹೆಗಾರ ಡಾ। ಅವಿರಳ ಮಾಥುರ್ ಅವರು, ‘ಈ ರೂಪಾಂತರಿಯು ಬೇಗ ಹರಡುತ್ತದೆ. ಆದರೆ ಲಕ್ಷಣಗಳು ಮಾತ್ರ ಸೌಮ್ಯವಾಗಿರುತ್ತವೆ. ಆದರೂ 2ನೇ ಡೋಸ್, ಬೂಸ್ಟರ್ ಡೋಸ್ ಪಡೆಯುವುದು ಅಗತ್ಯ’ ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ತಯಾರಿ ಚುರುಕು: ಸರ್ಕಾರದಿಂದ ಆದೇಶ ಬಂದ ಬೆನ್ನಲ್ಲೇ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಆಸ್ಪತ್ರೆಗಳು ಆಮ್ಲಜನಕ ಸಿಲಿಂಡರ್, ರೋಗನಿರೋಧಕ, ಪರೀಕ್ಷಾ ಯಂತ್ರ, ಲಸಿಕೆ, ವೆಂಟಿಲೇಟರ್, ಹಾಸಿಗೆಗಳಂತಹ ಅಗತ್ಯತೆಗಳ ವ್ಯವಸ್ಥೆಯನ್ನು ಚುರುಕುಗೊಳಿಸಿವೆ.
ಮಹಾರಾಷ್ಟ್ರ ಸಾವಿನ ಸಂಖ್ಯೆ ಈಗ 4ಕ್ಕೇರಿಕೆ: ದೇಶಾದ್ಯಂತ ಕೋರೊನಾ ಕೇಸು ಸಂಖ್ಯೆ ಹೆಚ್ಚಳ ಆತಂಕ ನಡುವೆ ಮಹಾರಾಷ್ಟ್ರದ ಥಾಣೆಯಲ್ಲಿ 21 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಸ ಕೊರೋನಾ ಅಲೆ ಆರಂಭವಾದ ನಂತರ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೇರಿದೆ. ಈ ಮುಂಚಿನ 3 ಸಾವು ಮುಂಬೈನಲ್ಲಿ ಸಂಭವಿಸಿವೆ. ಈ ನಡುವೆ, ಶನಿವಾರ ರಾಜ್ಯದಲ್ಲಿ 8 ಹೊಸ ಕೇಸು ಪತ್ತೆ ಆಗಿದ್ದು, ಸಕ್ರಿಯ ಪ್ರಕರಣ 18ಕ್ಕೇರಿಕೆಯಾಗಿದೆ. ಮಧುಮೇಹದಿಂದ ಬಳಲುತ್ತಿದ್ದ 21 ವರ್ಷದ ಯುವಕ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಗೆ ದಾಖಲಾಗಿದ್ದ. ಪರೀಕ್ಷೆ ವೇಳೆ ಶುಕ್ರವಾರ ರಾತ್ರಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆದರೆ ಆತ ಮಧುಮೇಹ ಕಾಯಿಲೆಯಿಂದ ಮೃತ ಪಟ್ಟಿದ್ದಾನೆ ಎಂದು ಥಾಣೆ ಮಹಾನಗರಪಾಲಿಕೆ ಹೇಳಿದೆ.
