ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಮಲೇಷ್ಯಾ ಕನ್ನಡ ಸಂಘದ (MAKASA) ಅಧಿಕೃತ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಈ ವೆಬ್‌ಸೈಟ್ ಕನ್ನಡಿಗರಿಗೆ ಪಾಸ್‌ಪೋರ್ಟ್, ವೀಸಾ, ಉದ್ಯೋಗದ ಮಾಹಿತಿ ಜೊತೆಗೆ ಸಂಸ್ಕೃತಿ ಉಳಿಸುವ ಕಾರ್ಯ ಮಾಡಲಿದೆ. ರವಿ ಹೆಗಡೆ ಮತ್ತು ಭಾವನಾ ಅವರು ಈ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಕೌಲಾಲಂಪುರ: ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ಮಹತ್ವದ ಹೆಜ್ಜೆಯಾಗಿ ಮಲೇಷ್ಯಾ ಕನ್ನಡ ಸಂಘದ (MAKASA) ಅಧಿಕೃತ ವೆಬ್‌ಸೈಟ್ http://www.malaysiakannadasangha.com ಗೆ ಚಾಲನೆ ನೀಡಿದೆ,

ಕೌಲಾಲಂಪುರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌ನ ಸಮೂಹ ಸಂಪಾದಕರಾದ ರವಿ ಹೆಗಡೆ ಅವರು ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌ ನಿರೂಪಕಿ ಭಾವನಾ ಅವರು ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ವೆಬ್‌ಸೈಟ್‌ ಉದ್ದೇಶ:

ಈ ವೆಬ್‌ಸೈಟ್ ಕೇವಲ ಒಂದು ಸಂಘದ ವೆಬ್‌ಸೈಟ್ ಅಲ್ಲ. ಮಲೇಷ್ಯಾದಲ್ಲಿರುವ ಸಮಸ್ತ ಕನ್ನಡಿಗರ ಸಮುದಾಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.

  • ಮಲೇಷ್ಯಾಕ್ಕೆ ಹೊಸದಾಗಿ ಬರುವ ಕನ್ನಡಿಗರಿಗೆ ಮಾರ್ಗದರ್ಶನ
  • ಪಾಸ್‌ಪೋರ್ಟ್, ವೀಸಾ, ಇನ್ಶೂರೆನ್ಸ್, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾಹಿತಿ ಮತ್ತು ನೆರವು
  • ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡ ಸಂಘ ಸಂಸ್ಥೆಗಳ ಮಾಹಿತಿ ಒಂದೇ ಸೂರಿನಡಿ
  • ನಮ್ಮ ಭಾಷೆ, ಸಂಸ್ಕೃತಿ, ಹಬ್ಬಗಳು ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು
  • ನಮ್ಮ ಭಾಷೆ - ನಮ್ಮ ಸಂಸ್ಕೃತಿ - ನಮ್ಮ ಹೆಮ್ಮೆ ಎಂಬ ಧ್ಯೇಯದೊಂದಿಗೆ ಎಲ್ಲರನ್ನು ಒಗ್ಗೂಡಿಸುವುದು.

ಈ ಸಂದರ್ಭದಲ್ಲಿ ಮಾತನಾಡಿದ ರವಿ ಹೆಗಡೆ ಅವರು, ‘ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡ ಒಕ್ಕೂಟಗಳನ್ನು ಸೇರಿಸಿ ವೆಬ್‌ಸೈಟ್ ಮಾಡಿರುವುದು ಬಹಳ ಸಂತೋಷದ ವಿಷಯ. ಹಲವು ವರ್ಷಗಳ ಹಿಂದೆ ನಾನು ಕನ್ನಡಪ್ರಭ ವೆಬ್‌ಸೈಟ್‌ನ ಅನಾವರಣ ಮಾಡಿದ್ದೆ, ಇಂದು ಮಲೇಷ್ಯಾದ ಕನ್ನಡಿಗರ ವೆಬ್‌ಸೈಟ್ ಲಾಂಚ್ ಮಾಡುತ್ತಿರುವುದು ಹೆಮ್ಮೆ. ಮಲೇಷ್ಯಾದ ಎಲ್ಲ ಕಡೆ ಇರುವ ಕನ್ನಡಿಗರು ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಕನ್ನಡದ ಪತಾಕೆಯನ್ನು ಹಾರಿಸಬೇಕು’ ಎಂದರು.

ಭಾವನಾ ಅವರು ಮಾತನಾಡಿ, ‘ಮಲೇಷ್ಯಾಗೆ ನಾನು ಎರಡನೇ ಬಾರಿ ಬರುತ್ತಿರುವುದು. ಈ ವೆಬ್‌ಸೈಟ್‌ನಲ್ಲಿ ನನಗೆ ಇಂಟರೆಸ್ಟಿಂಗ್ ಅನಿಸಿದ್ದು ಎಂದರೆ - ಪಾಸ್‌ಪೋರ್ಟ್ ಸಮಸ್ಯೆ, ಇನ್ಶೂರೆನ್ಸ್ ಸಮಸ್ಯೆ ಸೇರಿದಂತೆ ಎಲ್ಲ ಅಗತ್ಯಕ್ಕೂ ಇಲ್ಲಿ ಪರಿಹಾರ ಸಿಗುತ್ತದೆ. ಇದು ಇಲ್ಲಿರುವ ಪುಟ್ಟ ಕನ್ನಡಿಗರ ಕುಟುಂಬಕ್ಕೆ ಮಾತ್ರವಲ್ಲ, ಕರ್ನಾಟಕದಿಂದ ಮಲೇಷ್ಯಾಕ್ಕೆ ಬರುವ ಪ್ರತಿಯೊಬ್ಬರಿಗೂ ಸಹಾಯವಾಗುತ್ತದೆ. ಎಲ್ಲರೂ ಇದರ ಲಾಭ ಪಡೆದುಕೊಳ್ಳಿ’ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮಲೇಷ್ಯಾ ಕನ್ನಡ ಸಂಘದ ಪ್ರಮುಖ ಸದಸ್ಯರಾದ ಕಿರಣ್ ಕುಮಾರ್ ರೋಣದ್, ಮಹಿ ದಳವಾಯಿ, ಸಿದ್ದು ಮಠ, ಪ್ರಸನ್ನ ಕುಮಾರ್, ಶ್ರೀಕಾಂತ್ ಪೂಜಾರಿ, ಮೊಹಮ್ಮದ್ ಗೌಸ್ ಆಕ್ಕಿ, ಮಂಜು ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡಿಗರು www.malaysiakannadasangha.com ಗೆ ಭೇಟಿ ನೀಡಿ ಉಚಿತವಾಗಿ ನೋಂದಾಯಿಸಿಕೊಳ್ಳಬೇಕೆಂದು ಸಂಘದ ವತಿಯಿಂದ ವಿನಂತಿಸಲಾಗಿದೆ.