Asianet Suvarna News Asianet Suvarna News

ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಏಕಾಂಗಿಯಾಗಿ ಸೈಕಲ್ ಜಾಥಾ ಹೊರಟ ಯುವತಿ

ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಆಶಾ ಮಾಲ್ವಿಯಾ ಭಾರತ ದೇಶ ಮಹಿಳೆಯರಿಗೆ ಸುರಕ್ಷಿತವಾಗಿದೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಸಂಪೂರ್ಣ ಭಾರತ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದಾಳೆ. ಸದ್ಯ ಈಕೆ ಉತ್ತರ ಕನ್ನಡದ ಕಾರವಾರದಲ್ಲಿದ್ದು, ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

madhya pradesh mountaineer  Asha Malviya india solo ride gow
Author
First Published Dec 12, 2022, 10:26 PM IST

ವರದಿ: ಭರತ್‌ರಾಜ್‌ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಡಿ.12): ದೇಶದ ವಿವಿಧೆಡೆ ನಡೆಯುತ್ತಿದ್ದ ಕೆಲವೊಂದು ಅಮಾನವೀಯ ಘಟನೆಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಪ್ರತಿನಿತ್ಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇತರ ಮಹಿಳೆಯರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಆದರೆ, ಭಾರತ ದೇಶ ಮಹಿಳೆಯರಿಗೆ ಸುರಕ್ಷಿತವಾಗಿದೆ ಅನ್ನೋದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಯುವತಿಯೋರ್ವಳು ಏಕಾಂಗಿಯಾಗಿ ಸೈಕಲ್ ಮೇಲೆ ದೇಶ ಪರ್ಯಟನೆಗೆ ಹೊರಟಿದ್ದಾರೆ. ಬರೋಬ್ಬರಿ ಒಟ್ಟು 20 ಸಾವಿರ ಕಿ.ಮೀ. ಸೈಕಲ್ ಯಾತ್ರೆಯನ್ನು ಮಾಡುವ ಮೂಲಕ ನೋಡುಗರ ಹುಬ್ಬೇರುವಂತೆ ಮಾಡುತ್ತಿದ್ದಾಳೆ.  

ಒಂದೆಡೆ ಏಕಾಂಗಿಯಾಗಿ ಸೈಕಲ್ ತುಳಿಯುತ್ತಾ ಹೆದ್ದಾರಿಯಲ್ಲಿ ಸಾಗುತ್ತಿರುವ ಯುವತಿ. ಇನ್ನೊಂದೆಡೆ ರಸ್ತೆಯಲ್ಲಿ ಸಿಕ್ಕ ಜನರೊಂದಿಗೆ ಮಾತನಾಡುತ್ತಾ ಜಾಗೃತಿ ಮೂಡಿಸುತ್ತಿರುವ ಈ ಸೈಕಲ್ ಯಾತ್ರಿ. ಮತ್ತೊಂದೆಡೆ ಜಿಲ್ಲೆಗೆ ಆಗಮಿಸಿರುವ ಸೈಕ್ಲಿಸ್ಟ್ ಯುವತಿಯನ್ನು ಅಭಿನಂದಿಸುತ್ತಿರುವ ಅಧಿಕಾರಿ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. ಹೀಗೆ ಸೈಕಲ್ ಏರಿ ಏಕಾಂಗಿ ಯಾತ್ರೆ ಮಾಡುತ್ತಿರುವ ಯುವತಿಯ ಹೆಸರು ಆಶಾ ಮಾಲ್ವಿಯಾ . ಮಧ್ಯಪ್ರದೇಶದ ರಾಜಗಢ ಜಿಲ್ಲೆಯವಳಾದ ಈಕೆ, ಭಾರತ ದೇಶ ಮಹಿಳೆಯರಿಗೆ ಸುರಕ್ಷಿತವಾಗಿದೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಸಂಪೂರ್ಣ ಭಾರತ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದಾಳೆ. 

ನವೆಂಬರ್ 1 ರಂದು ಮಧ್ಯಪ್ರದೇಶದ ಭೋಪಾಲ್‌ನಿಂದ ತಮ್ಮ ಯಾತ್ರೆಯನ್ನ ಆರಂಭಿಸಿದ್ದು, ಬರೋಬ್ಬರಿ 20,000 ಕಿ.ಮೀ ಮಾರ್ಗವನ್ನು ಸೈಕಲ್ ಮೇಲೆ ಏಕಾಂಗಿಯಾಗಿ ಪೂರೈಸಲು ಮುಂದಾಗಿದ್ದಾಳೆ. ಈಗಾಗಲೇ ಸುಮಾರು 3,700 ಕಿ.ಮೀ ಸೈಕಲ್ ತುಳಿದು ಗೋವಾ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿ ಈಗಾಗಲೇ  ಕಾರವಾರವನ್ನು ತಲುಪಿ ಜಿಲ್ಲೆಯಲ್ಲಿ ಪ್ರವಾಸ ಮುಂದುವರಿಸಿದ್ದಾಳೆ. ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯರಿಗೆ ದೇಶದಲ್ಲಿ ಸುರಕ್ಷತೆಯಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ.

ಈ ನಿಟ್ಟಿನಲ್ಲಿ ಏಕಾಂಗಿಯಾಗಿ ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿ ಹೊಂದಿರುವುದಾಗಿ ಯುವತಿ ಆಶಾ ತಿಳಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹ ಭೇಟಿಯಾಗುವ ಆಶಾ, ಅವರಿಗೆ ತನ್ನ ಉದ್ದೇಶವನ್ನು ತಿಳಿಸಿ ಅವರ ಅಭಿಪ್ರಾಯವನ್ನು ಪಡೆದುಕೊಂಡು ಮುಂದೆ ಸಾಗುತ್ತಿದ್ದು, ತನ್ನ ಯಾತ್ರೆಯನ್ನು ದೆಹಲಿಯಲ್ಲಿ ಪೂರ್ಣಗೊಳಿಸಲಿದ್ದಾರೆ. ಯಾತ್ರೆ ಮುಗಿಸುವ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಬೇಕೆನ್ನುವುದು ಆಶಾ ಅವರ ಆಸೆ.

ಇನ್ನು ಆಶಾ ಈಗಾಗಲೇ ಮಧ್ಯಪ್ರದೇಶ, ಗುಜರಾತ್, ದಾದರ್ ಮತ್ತು ನಗರಹವೇಲಿ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ತಮ್ಮ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸಿ ಇದೀಗ ಕರ್ನಾಟಕಕ್ಕೆ ಆಗಮಿಸಿದ್ದಾರೆ. ತಾವು ತೆರಳುವ ಪ್ರದೇಶಗಳಲ್ಲಿ ಶಾಲೆ, ಕಾಲೇಜುಗಳಿಗೆ ಭೇಟಿ ನೀಡುವ ಆಶಾ ಮಾಲ್ವಿಯಾ , ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎನ್ನುವುದು ಬೇರೆ ದೇಶಗಳ ಅಭಿಪ್ರಾಯವಾಗಿದೆ. ಆದರೆ, ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದು, ಮಹಿಳೆಯರ ರಕ್ಷಣೆಯ ಕಾಳಜಿಯನ್ನು ಭಾರತ ಹೊಂದಿದೆ ಎನ್ನುವ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಮಣ್ಣಿನ ಉಳಿವಿಗಾಗಿ ಉದ್ಯಾನನಗರಿಯಲ್ಲಿ ಸದ್ಗುರು ಬೃಹತ್ ಬೈಕ್ ಜಾಥಾ

ಜತೆಗೆ ಮಾರ್ಗಮಧ್ಯೆ ಸಿಗುವ ಜನಸಾಮಾನ್ಯರಿಗೂ ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತಾ ಸೈಕಲ್ ಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಅದರಂತೆ ಕಾರವಾರಕ್ಕೆ ಆಗಮಿಸಿದ ಅವರನ್ನು ಇಲ್ಲಿನ ತಹಶೀಲ್ದಾರ್ ಭೇಟಿಯಾಗಿ ಅಭಿನಂದಿಸಿದ್ದಾರೆ. ಯುವತಿಯೋರ್ವಳು ಏಕಾಂಗಿಯಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಅವರ ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಪರಿಸರ ಜಾಗೃತಿಗಾಗಿ ಗದಗದ 52ರ ವೃದ್ಧನಿಂದ 300 ಕಿ.ಮೀ ಸೈಕಲ್ ಜಾಥಾ!

ಒಟ್ಟಿನಲ್ಲಿ ದೇಶದ ಮಹಿಳೆಯರ ಸುರಕ್ಷತೆ ಕುರಿತು ವಿಶ್ವಕ್ಕೇ ಸಂದೇಶ ಸಾರಲು ಯುವತಿಯೋರ್ವಳು ಏಕಾಂಗಿ ಸೈಕಲ್ ಯಾತ್ರೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅವರ ಯಾತ್ರೆ ಉತ್ತಮವಾಗಿ ಪೂರ್ಣಗೊಂಡು ನೆನೆಸಿದಂತೆ ಉದ್ದೇಶ ಈಡೇರಲಿ ಅನ್ನೋದು ನಮ್ಮ ಆಶಯ.

Follow Us:
Download App:
  • android
  • ios