ಶಾಸಕ ಮುನಿರತ್ನರನ್ನು 'ಕರಿ ಟೋಪಿ' ಎಂದು ಕರೆದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಶ್ಲಾಘಿಸಿದ್ದಾರೆ. ಆರೆಸ್ಸೆಸ್ ದೇಶದಲ್ಲಿ ಕೋಮುಗಲಭೆ ಹರಡಿಸುತ್ತಿದ್ದು, ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಅದನ್ನು ನಿಷೇಧಿಸುವುದಾಗಿ ಅವರು ಘೋಷಿಸಿದ್ದಾರೆ.

ಕೊಡಗು (ಅ.12): 'ಏಯ್ ಕರಿ ಟೋಪಿ ಬಾ ಇಲ್ಲಿ' ಎಂದ ಡಿಸಿಎಂ ಡಿಕೆ ಶಿವಕುಮಾರ ಅವರ ಹೇಳಿಕೆಯನ್ನು ನಾನು ವೈಯಕ್ತಿಕವಾಗಿ ಶ್ಲಾಘಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದರು.

ಶಾಸಕ ಮುನಿರತ್ನ ಅವರನ್ನುದ್ದೇಶಿಸಿ 'ಏಯ್‌ ಕರಿ ಟೋಪಿ ಬಾ ಇಲ್ಲಿ' ಎಂದು ಕರೆದಿರುವ ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆ ವಿಚಾರವಾಗಿ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಎಂ ಲಕ್ಷ್ಮಣ್, ಈ ಅರೆಸ್ಸೆಸ್ ಮಹಾತ್ಮ ಗಾಂಧಿಯವರನ್ನ ಕೊಂದ ಸಂಘ, ಇಡೀ ದೇಶದಲ್ಲಿ ಕೋಮುಗಲಭೆ ಹರಡಿಸುತ್ತಿರುವ ಸಂಘ ಅದು ತೀವ್ರವಾಗಿ ಟೀಕಿಸಿದರು.

ನಮ್ಮ ಸರ್ಕಾರ ಬಂದ್ರೆ ಆರೆಸ್ಸೆಸ್ ಬ್ಯಾನ್ ಮಾಡೇ ಮಾಡ್ತೀವಿ:

ಆ ಸಂಸ್ಥೆಯನ್ನ ಬ್ಯಾನ್ ಮಾಡುವ ಕೆಲಸ ಆಗಬೇಕಾಗಿತ್ತು. ಈಗಿರುವ ಕೇಂದ್ರ ಸರ್ಕಾರ ಅರೆಸ್ಸೆಸ್‌ನದೇ ಇನ್ನೊಂದು ಮುಖ. ಆದರೆ ಮುಂದೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಾಗ ನೂರಕ್ಕೆ ನೂರರಷ್ಟು ಆರೆಸ್ಸೆಸ್ ಸಂಘವನ್ನು ಬ್ಯಾನ್ ಮಾಡೇ ಮಾಡುತ್ತೇವೆ ಎಂದು ಘೋಷಿಸಿದರು.

ದೇಶದಲ್ಲಿ ವೋಟ್ ಚೋರಿ ಮೂಲಕ ಚುನಾವಣೆ ಗೆಲ್ಲುವಂತಹ ಕೆಲಸ ಮಾಡುತ್ತಿರುವುದೇ ಆರ್ ಎಸ್ ಎಸ್. ಹೀಗಾಗಿ ಆರೆಸ್ಸೆಸ್‌ ಕರಿಟೋಪಿ, ಕಳ್ಳ ಅಂತಾ ಕರೆದರೂ ನಾನು ಒಪ್ಪಿಕೊಳ್ಳುತ್ತೇನೆ. ಇಡೀ ದೇಶವನ್ನು ಹಾಳುಮಾಡುತ್ತಿರುವುದೇ ಆರೆಸ್ಸೆಸ್. ಡಿಕೆ ಶಿವಕುಮಾರ ಅವರು ಹಾಗೆ ಕರೆದಿದ್ದರೆ, ನಾನು ವೈಯಕ್ತಿಕವಾಗಿ ಶ್ಲಾಘಿಸುತ್ತೇನೆ ಎಂದರು.

ಶಾಸಕ ಮುನಿರತ್ನ ವಿರುದ್ಧ ಎಂ ಲಕ್ಷ್ಮಣ್ ಕಿಡಿ:

ಮುನಿರತ್ನ ವ್ಯಾಪಾರಕ್ಕೋಸ್ಕರ ಬಿಜೆಪಿಗೆ ಸೇರಿಕೊಂಡರು. ಅಲ್ಲಿಗೆ ಹೋಗಿ ಚಡ್ಡಿ ಹಾಕಿಕೊಂಡು ಕರಿಟೊಪ್ಪಿ ಹಾಕಿಕೊಂಡು ಸುತ್ತುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಹಲವು ಮುಖಂಡರಿಗೆ ಏಡ್ಸ್ ಇಂಜೆಕ್ಷನ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಅವರ ನಾಯಕರು, ಹೆಣ್ಣುಮಕ್ಕಳೇ ಬಂದು ದೂರು ಕೊಟ್ಟಿದ್ದಾರೆ. ಅದರ ವಿರುದ್ಧ ಈಗಲೂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಮುನಿರತ್ನನ ವಿಚಾರವನ್ನು ನಾವು ಮಾತನಾಡಬೇಕಾಗಿಲ್ಲ ಎಂದು ಟೀಕಿಸಿದರು.