ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದು, ಇದು ಅವರ 17ನೇ ಬಜೆಟ್ ಆಗಿರಲಿದೆ. ಜ.14 ರಿಂದ ಬಜೆಟ್‌ ಪೂರ್ವಭಾವಿ ಸಭೆಗಳನ್ನು ಆರಂಭ

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ಮೊದಲ ವಾರದಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದು, ಜ.14 ರಿಂದ ಬಜೆಟ್‌ ಪೂರ್ವಭಾವಿ ಸಿದ್ಧತಾ ಸಭೆಗಳನ್ನು ಆರಂಭಿಸುವ ನಿರೀಕ್ಷೆಯಿದೆ.

14 ರಂದು ಹಣಕಾಸು ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬಜೆಟ್‌ ಪೂರ್ವಭಾವಿ ಮೊದಲ ಸಭೆ ನಡೆಸಲಿದ್ದಾರೆ. ಬಳಿಕ ಇಲಾಖಾವಾರು ಸಭೆ, ರೈತರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳು ಸೇರಿ ಕ್ಷೇತ್ರವಾರು ತಜ್ಞರ ಜತೆ ಸಭೆ ನಡೆಸಲಿದ್ದಾರೆ. ಬಳಿಕ ಮಾರ್ಚ್‌ ಮೊದಲ ವಾರದಲ್ಲಿ ಬಜೆಟ್‌ ಮಂಡನೆ ಮಾಡುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಜಂಟಿ ಅಧಿವೇಶನ ಶುರುವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ 17ನೇ ಬಜೆಟ್‌:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ದಾಖಲೆಯ 16 ಬಜೆಟ್‌ ಮಂಡಿಸಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ್ದ ರಾಮಕೃಷ್ಣ ಹೆಗಡೆ (14) ದಾಖಲೆಯನ್ನು 2023ರಲ್ಲೇ ಸಿದ್ದರಾಮಯ್ಯ ಮುರಿದಿದ್ದಾರೆ. ಮಾರ್ಚ್‌ ಮೊದಲ ವಾರದಲ್ಲಿ ಮಂಡಿಸುವ ಬಜೆಟ್‌ ಅವರ ಪಾಲಿಗೆ 17ನೇ ಬಜೆಟ್‌ ಆಗಿರಲಿದೆ.

ದೇಶದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡನೆ

ದೇಶದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ (18) ಮಂಡಿಸಿರುವ ಗುಜರಾತ್‌ನ ವಜುಭಾಯಿ ವಾಲಾ (ವಿ.ಆರ್‌. ವಾಲಾ) ಅವರ ದಾಖಲೆ ಸರಿಗಟ್ಟಲು ಇನ್ನೊಂದೇ ಬಜೆಟ್‌ ಮಂಡನೆ ಬಾಕಿ ಇದೆ. ಇನ್ನು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಫೆ.1 ರಂದು ಭಾನುವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.