ಡಿಕೆ ಶಿವಕುಮಾರ್-ಮುನಿರತ್ನ ವಿವಾದವು ಸಲುಗೆಯಿಂದ ಆಗಿದ್ದು ಎಂದ ಯತೀಂದ್ರ ಸಿದ್ದರಾಮಯ್ಯ, ಆರ್. ಅಶೋಕ್ ಮತ್ತು ಪ್ರತಾಪ್ ಸಿಂಹರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ನವೆಂಬರ್ ಕ್ರಾಂತಿ ಹಾಗೂ ಅಧಿಕಾರ ಹಸ್ತಾಂತರದ ಚರ್ಚೆಗಳು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದ್ದಾರೆ.
ರಾಯಚೂರು (ಅ.12): 'ಏರ್ ಕರಿ ಟೋಪಿ ಬಾ ಇಲ್ಲಿ' ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಮುನಿರತ್ನರನ್ನ ಕರೆದ ವಿಚಾರ ಸಂಬಂಧ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ ಅವರ, ಡಿಕೆ ಶಿವಕುಮಾರ್ ಏನು ಪ್ರೋಟೋಕಾಲ್ ಫಾಲೋ ಮಾಡಬೇಕು ಅದು ಮಾಡಿರುತ್ತಾರೆ. ಇದರ ಬಗ್ಗೆ ಮುನಿರತ್ನ ಆಕ್ಷೇಪಣೆ ಮಾಡಬೇಕಾಗಿಲ್ಲ. ಮುನ್ನಿರತ್ನ ಅವರು ಹಿಂದೆ ನಮ್ಮ ಪಕ್ಷದಲ್ಲಿಯೇ ಇದ್ದವರು. ಹಿಂದೆ ಎಲ್ಲಾ ಆತ್ಮೀಯವಾಗಿ ಮಾತನಾಡಿಸಿ ಅಭ್ಯಾಸ ಇರುತ್ತೆ. ಹಾಗಾಗಿ ಆ ಸಲುಗೆ ಮೇಲೆ ಕರೆದಿರಬಹುದು. ಅದನ್ನೇ ಅವರು ದೊಡ್ಡದಾಗಿ ಮಾಡುವುದು ಅವಶ್ಯಕತೆ ಇಲ್ಲ ಎಂದರು.
ಬೆಂಗಳೂರಿನಲ್ಲಿ ಏನು ಸಮಸ್ಯೆಗಳಿವೆ ಎಂಬುದನ್ನು ತಿಳಿಯಲು ಡಿಕೆ ಶಿವಕುಮಾರ ಪ್ರವಾಸ ಮಾಡುತ್ತಿದ್ದಾರೆ. ಹಾಳಾದ ರಸ್ತೆಗಳನ್ನು ನೋಡಲು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ ಹೋಗಿದ್ದಾರೆ. ಶಾಸಕರು, ಸಂಸದರಿಗೆ ಕರೆಯಬೇಕು ಅಂತೇನೂ ಇಲ್ಲ, ನಿಜವಾಗಿಯೂ ಅವರ ಕ್ಷೇತ್ರದ ಕಾಳಜಿ ಇದ್ದರೆ ಜನರ ಮೇಲೆ ಕಾಳಜಿ ಇದ್ದರೆ ಕರೆಯಲಿ ಬಿಡಲಿ ಹೋಗಬೇಕಿತ್ತು ಎಂದರು.
ಸಿಎಂ ಔತಣಕೂಟದ ಬಗ್ಗೆ ಆರ್ ಅಶೋಕ್ ಟೀಕೆಗೆ ಯತೀಂದ್ರ ತಿರುಗೇಟು:
ಸಿಎಂ ಸಿದ್ದರಾಮಯ್ಯ ಔತಣಕೂಟದ ಬಗ್ಗೆ ಆರ್.ಅಶೋಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತೀಂದ್ರ, ನಮ್ಮ ಪಕ್ಷದೊಳಗಿನ ವಿಚಾರ ಅವರಿಗೆ ಹೇಗೆ ಗೊತ್ತು? ಅವರು ಏನಾದ್ರೂ ಹೇಳುತ್ತಿರ್ತಾರೆ. ಅವರು ಹೇಳಿದ್ದು ನಿಜ ಆಗುತ್ತಾ?
ಅವರು ಏನಾದರೂ ಹೇಳುತ್ತಾರೆ ಸಿಎಂ ಸಿದ್ದರಾಮಯ್ಯ ಆಗಾಗ ಔತಣಕೂಟ ಕರೆಯುತ್ತಾ ಇರುತ್ತಾರೆ. ಎಷ್ಟೋ ಬಾರಿ ಸಿಎಲ್ ಪಿ ಮೀಟಿಂಗ್ ಮಾಡಿದ್ದಾರೆ. ಅವಾಗೆಲ್ಲ ಔತಣಕೂಟ ಏರ್ಪಡಿಸಿದ್ದರು. ಮನೆಯಲ್ಲಿ ಕೂಡ ಎಷ್ಟೋ ಬಾರಿ ಕರೆದಿದ್ದಾರೆ. ಔತಣಕೂಟದಲ್ಲಿ ಬಿಹಾರ ಚುನಾವಣೆಯೂ ಚರ್ಚೆ ಆಗಬಹುದು. ದುಡ್ಡಿಗೋಸ್ಕರ ಅಂತಾ ಅಲ್ಲ. ಎಲ್ಲ ಸಚಿವರು, ಶಾಸಕರಿಗೂ ಕರೆದು ಈಗಿನ ರಾಜಕೀಯ ಸ್ಥಿತಿಗತಿ, ಇಲಾಖೆಗಳು ಹೇಗೆ ನಡೆಯುತ್ತಿವೆ, ಏನಾದರೂ ಸಮಸ್ಯೆ ಇದೆಯೇ? ಅದರ ಜೊತೆಗೆ ಬಿಹಾರ ಚುನಾವಣೆ ಬಗ್ಗೆಯೂ ಚರ್ಚೆ ಮಾಡ್ತಾರೆ ಇದರಲ್ಲೇನು ವಿಶೇಷ ಇಲ್ಲ ಎಂದರು.
ವರ್ಗಾವಣೆ ಕಮಿಷನ್: ಪ್ರತಾಪ್ ಸಿಂಹ ಆರೋಪಕ್ಕೆ ಯತೀಂದ್ರ ಹೇಳಿದ್ದೇನು?
ಯಾರು ಈ ಪ್ರತಾಪ್ ಸಿಂಹ? ಆತ ರಾಜಕೀಯದಲ್ಲಿ ಪ್ರಸಿದ್ಧಿಯಾಗಿರಬೇಕು. ಸುಮ್ಮನೆ ಸಾಕ್ಷಿ ಇಲ್ಲದೇ ಆಧಾರವಿಲ್ಲದೇ ಬಾಯಿಗೆ ಬಂದಂತೆ ಆರೋಪ ಮಾಡುತ್ತಿರುತ್ತಾರೆ. ಅವರ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳಲು ಆಗುತ್ತಾ? ಅವರ ಪಕ್ಷವೇ ಅವರನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಲೇವಡಿ ಮಾಡಿದರು.
ನವೆಂಬರ್ ಕ್ರಾಂತಿ ಬಗ್ಗೆ ಯತೀಂದ್ರ ಹೇಳಿದ್ದೇನು?
ನವೆಂಬರ್- ಡಿಸೆಂಬರ್ ನಲ್ಲಿ ಸಂಪುಟ ಪುನಾರಚನೆ ಆಗುತ್ತೆ ಆಗುತ್ತೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಕೆಲ ಹಿರಿಯ ಸಚಿವರು ಹೇಳಿದ್ದಾರೆ, ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಭವಿಷ್ಯ ಸಚಿವ ಸಂಪುಟ ಡಿಸೆಂಬರ್‌ನಲ್ಲಿ ಆಗಬಹುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಇದುವರೆಗೂ ನನಗೆ ಮಂತ್ರಿ ಮಾಡಲ್ಲ ಅಂತಾ ಹೇಳಿದ್ದಾರೆ. ಎಂದರು. ಇದೇ ವೇಳೆ ನವೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನವೆಂಬರ್ ಕ್ರಾಂತಿ ಎಲ್ಲ ಏನೂ ಇಲ್ಲ. ನಿಜವಾಗಲೂ ಮಾತುಕತೆ ಏನು ನಡೆದಿದೆ ಎಂದು ಯಾರಿಗೂ ಗೊತ್ತಿಲ್ಲ. ಎಲ್ಲರೂ ಊಹಾಪೋಹದ ಮೇಲೆ ಮಾತನಾಡುತ್ತಿದ್ದಾರೆ. ನನಗೆ ಗೊತ್ತಿರುವಂತೆ ಅಧಿಕಾರ ಹಸ್ತಾಂತರದ ಚರ್ಚೆ ಆಗಿಲ್ಲ ಅನ್ನಿಸುತ್ತೆ. ಹಾಗಾಗಿ ಊಹಾಪೋಹದ ಮೇಲೆ ಎಲ್ಲರೂ ಏನೇನೂ ಹೇಳುತ್ತಿರುತ್ತಾರೆ. ಮುಖ್ಯಮಂತ್ರಿ ಪದವಿಗೆ ಬೇಕಾದಷ್ಟು ಜನರು ನಮ್ಮ ಪಕ್ಷದಲ್ಲಿ ಇದ್ದಾರೆ ಎಂದರು.
ಕುರುಬ ಎಸ್‌ಟಿ ಸೇರ್ಪಡೆ: ಯತೀಂದ್ರ ಹೇಳಿದ್ದೇನು?
ಕುರುಬರಿಗೆ ಎಸ್ ಟಿ ಸೇರ್ಪಡೆ ವಿಚಾರವಾಗಿ ಈಗಾಗಲೇ ಮಾತುಕತೆ ಆಗಿದೆ. ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಕಲಬುರಗಿ.. ಈ ಭಾಗದ ಜನರಿಗೆ ಎಸ್‌ಟಿಗೆ ಸೇರ್ಪಡೆ ಬಗ್ಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಈ ಪ್ರಸ್ತಾಪ ಈಗ ಕೇಂದ್ರ ಸರ್ಕಾರದ ಮುಂದೆ ಇದೆ. ಕೇಂದ್ರ ಸರ್ಕಾರ ತೀರ್ಮಾನ ಮಾಡಿ ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದರು.
