ವರದಾ-ಬೇಡ್ತಿ ನದಿ ಜೋಡಣೆ ಯೋಜನೆಗೆ ಹಾವೇರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದು, ಜನಜಾಗೃತಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಉತ್ತರ ಕನ್ನಡದಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶ ನಡೆದಿದೆ.
ಹಾವೇರಿ: ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಕುರಿತು ಜನಾಭಿಪ್ರಾಯ ರೂಪಿಸಲು ಹಾವೇರಿ ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಪ್ರಸ್ತಾವನೆ 1994ರಿಂದಲೇ ಇದೆ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೇಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುತ್ತಿದ್ದು ಯಾವುದೇ ನೀರಿನ ನಷ್ಟ ಆಗುವುದಿಲ್ಲ. ರಾಜ್ಯ ಸರ್ಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಹೇಳಿದರು.
ಈ ವಿಚಾರವಾಗಿ ಮುಕ್ತವಾಗಿ ಚರ್ಚಿಸಲು ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆಯಲಿ. ನಮ್ಮ ಕಡೆ ಬರಗಾಲ ಇದೆ. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ ಎಂದರು.
ನದಿ ಜೋಡಣೆ ಆಗಲೇಬೇಕು, ಚರ್ಚೆಗೆ ಸಿದ್ಧ: ಮಾಜಿ ಸಿಎಂ
ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದ್ದು, ಅದು ಆದ ಬಳಿಕ ಸಭೆ ಕರೆಯಲಿ. ಯಾವುದೇ ನದಿ ನಿಂತ ನೀರಲ್ಲ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಹರಿಯುತ್ತದೆ. ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ. ವರದಾ-ಬೇಡ್ತಿ ಯೋಜನೆ ಆಗಲೇಬೇಕಿದ್ದು, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲವನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಅದಕ್ಕಾಗಿ ನಾವು ಹಾವೇರಿಯಲ್ಲಿ ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ ಎಲ್ಲರನ್ನೊಳಗೊಂಡ ಸಭೆ ಕರೆದು ಸಮಾವೇಶ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬೇಡ್ತಿ-ವರದಾ ಜೋಡಣೆ ವಿರುದ್ಧ ಜನಾಂದೋಲನ
ಪರಿಸರ ಪೂರಕ ಅಭಿವೃದ್ಧಿ ನಮ್ಮ ಜಿಲ್ಲೆಗೆ ಅವಶ್ಯವಾಗಿದೆ. ಭಗವಂತನ ಸೃಷ್ಟಿಯಲ್ಲಿ ನದಿಗಳು ಜೀವಿಗಳು. ಅವುಗಳನ್ನು ದೇವತೆಯ ಸ್ಥಾನದಲ್ಲಿ ಕಾಣುತ್ತೇವೆ. ಅದಕ್ಕಾಗಿ ಹರಿಯುವ ಸ್ವಾತಂತ್ರ್ಯ ನೀಡಲಾಗಿದೆ. ನದಿಗಳಿಗೂ ಬದುಕುವ ಸ್ವಾತಂತ್ರ್ಯವಿದೆ ಎಂಬ ಕಾನೂನು ಆಗಬೇಕು ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಭಾನುವಾರ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ಜಿಲ್ಲೆ ಉಳಿಸಿ; ಬೇಡ್ತಿ, ಅಘನಾಶಿನಿ, ಶರಾವತಿ ಕಣಿವೆ ಉಳಿಸಿ ಬೃಹತ್ ಜನ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜಿಲ್ಲೆಯ ಜನಪ್ರತಿನಿಧಿಗಳು ನದಿ ತಿರುವ ಯೋಜನೆ ವಿರೋಧಿ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡದಿದ್ದರೆ ಜಿಲ್ಲೆಯ ಜನತೆ ಸಾಮೂಹಿಕ ಚುನಾವಣೆ ಬಹಿಷ್ಕಾರ ಮಾಡುವ ಕಾಲ ಬರಬಹುದು ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಗೆ ಮಾರಕವಾದ, ಜಿಲ್ಲೆಯ ಜನತೆಗೆ ಬೇಡವಾದ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದರು. ಜೈನಮಠದ ಸ್ವಸ್ತಿಶ್ರೀ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಶಿರಳಗಿ ಚೈತನ್ಯ ರಾಜಾರಾಮಾಶ್ರಮದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪರಿಸರ ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಸಮಾವೇಶಕ್ಕೆ ಹರಿದು ಬಂದ ಜನಸಾಗರ
ಸಮಾವೇಶಕ್ಕೆ ಸುಮಾರು 20 ಸಾವಿರಕ್ಕೂ ಅಧಿಕ ಜನ ಸ್ವಯಂಪ್ರೇರಿತರಾಗಿ ಆಗಮಿಸಿ ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು. ಇದೊಂದು ಐತಿಹಾಸಿಕ ಅಭೂತಪೂರ್ವ ಸಮಾವೇಶವಾಗಿ ಗೋಚರಿಸಿತು.ಸಾವಿರಾರು ಸಂಖ್ಯೆಯಲ್ಲಿದ್ದ ಮಹಿಳೆಯರು, ಯುವಕರು ಯೋಜನೆ ವಿರುದ್ಧ ಘೋಷಣೆ ಮೊಳಗಿಸುತ್ತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕಲಾವಿದರಿಂದ ಮೊಳಗಿದ ಪರಿಸರಗೀತೆಗಳಿಗೆ ಜನತೆ ತಾಳ ಹಾಕುತ್ತ ದನಿಗೂಡಿಸಿದರು. ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಬೇರೆ, ಬೇರೆ ಕಡೆಗಳಿಂದ ಆಗಮಿಸಿದ ಶ್ರೀಗಳು ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದು ಯೋಜನೆಯ ವಿರುದ್ಧ ಕಹಳೆ ಮೊಳಗಿತು.
ಸಮಾವೇಶದ ನಿರ್ಣಯಗಳು:
1. ಪಶ್ಚಿಮಘಟ್ಟದಲ್ಲಿ ನದಿ ತಿರುವು, ಶರಾವತಿ ಪಂಪ್ಡ್ ಸ್ಟೋರೇಜ್ ಸೇರಿದಂತೆ ಬೃಹತ್ ಜಲವಿದ್ಯುತ್ ಯೋಜನೆ ಜಾರಿ ಮಾಡಬಾರದು.
2. ವನವಾಸಿಗಳು, ರೈತರು, ವನ್ಯಜೀವಿಗಳು, ನದಿ ಹಾಗೂ ಅರಣ್ಯಗಳಿಗೆ ಬೇಡ್ತಿ-ಅಘನಾಶಿಸಿ ನದಿ ತಿರುವು ಯೋಜನೆ ಕುತ್ತು ತರಲಿದ್ದು, ಯೋಜನೆ ಜಾರಿ ಬೇಡ.
3. ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಮುಗಿದಿದೆ ಎಂಬ ತಜ್ಞರ ವರದಿ ಹಾಗೂ ಜನಾಭಿಪ್ರಾಯ ಪರಿಗಣಿಸಿ ಸರ್ಕಾರ ನದಿ ತಿರುವು ಯೋಜನೆಗಳನ್ನು ಶಾಶ್ವತವಾಗಿ ಕೈ ಬಿಡಬೇಕು.
4. ಮುಖ್ಯಮಂತ್ರಿ ನೀಡಿದ ಭರವಸೆಯಂತೆ ತಜ್ಞರು, ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖರ ಸಭೆಯ ದಿನಾಂಕ ಪ್ರಕಟಿಸಬೇಕು.
5. ಬೇಡ್ತಿ-ಅಘನಾಶಿಸಿ ಕೊಳ್ಳ ಸಂರಕ್ಷಣಾ ಸಮಿತಿ ನಿಯೋಗ ಕೇಂದ್ರ ಪರಿಸರ-ಅರಣ್ಯ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡುವ ದಿನಾಂಕವನ್ನು ಜನಪ್ರತಿನಿಧಿಗಳ ಶೀಘ್ರ ನಿರ್ಧರಿಸಬೇಕು.
6. ನದಿ ತಿರುವು ಯೋಜನೆಗಳ ಬಗ್ಗೆ ಡಿಪಿಆರ್ ತಯಾರಿಕೆ ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು.
7. ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು.
8. ಬೇಡ್ತಿ-ಅಘನಾಶಿನಿ ತೀರ ಪ್ರದೇಶದಲ್ಲಿ ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆ ಕೈಗೊಳ್ಳಬೇಕು.
9. ನದಿಗಳಿಗೂ ಜೀವಿಸುವ ಹಕ್ಕು ಹಾಗೂ ನೈಸರ್ಗಿಕ ಹರಿವು ಉಳಿಸಿಕೊಳ್ಳುವ ಹಕ್ಕು ನೀಡುವ ಕಾನೂನು ಜಾರಿಗೆ ಕೇಂದ್ರ, ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು.
10. ಇನ್ನಷ್ಟು ಪ್ರಬಲವಾಗಿ ಅಹಿಂಸಾತ್ಮಕವಾಗಿ ಪಶ್ಚಿಮ ಘಟ್ಟ ಉಳಿಸಿ ಚಳವಳಿ ನಡೆಸಲು ನಿರ್ಧಾರ.
ವರದಾ-ಬೇಡ್ತಿ ಜೋಡಣೆಗಾಗಿ ಸಭೆ: ಬೊಮ್ಮಾಯಿ
ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಕುರಿತು ಜನಾಭಿಪ್ರಾಯ ರೂಪಿಸಲು ಹಾವೇರಿ ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಪ್ರಸ್ತಾವನೆ 1994ರಿಂದಲೇ ಇದೆ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೇಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುತ್ತಿದ್ದು ಯಾವುದೇ ನೀರಿನ ನಷ್ಟ ಆಗುವುದಿಲ್ಲ. ರಾಜ್ಯ ಸರ್ಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಹೇಳಿದರು.
ಈ ವಿಚಾರವಾಗಿ ಮುಕ್ತವಾಗಿ ಚರ್ಚಿಸಲು ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆಯಲಿ. ನಮ್ಮ ಕಡೆ ಬರಗಾಲ ಇದೆ. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ ಎಂದರು.
ನದಿ ಜೋಡಣೆ ಆಗಲೇಬೇಕು, ಚರ್ಚೆಗೆ ಸಿದ್ಧ
ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದ್ದು, ಅದು ಆದ ಬಳಿಕ ಸಭೆ ಕರೆಯಲಿ. ಯಾವುದೇ ನದಿ ನಿಂತ ನೀರಲ್ಲ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಹರಿಯುತ್ತದೆ. ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ. ವರದಾ-ಬೇಡ್ತಿ ಯೋಜನೆ ಆಗಲೇಬೇಕಿದ್ದು, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲವನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಅದಕ್ಕಾಗಿ ನಾವು ಹಾವೇರಿಯಲ್ಲಿ ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ ಎಲ್ಲರನ್ನೊಳಗೊಂಡ ಸಭೆ ಕರೆದು ಸಮಾವೇಶ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


