ಎಪಿಎಲ್ ಕಾರ್ಡ್ ಇದ್ರೂ ಗೃಹಲಕ್ಷ್ಮೀ ಹಣ ಬರುತ್ತೆ, ತೆರಿಗೆ ಪಾವತಿ ಮಾಡೋರಿಗೆ ಸಿಗಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ಎಪಿಎಲ್ ಕಾರ್ಡ್ ಇದ್ದವರಿಗೂ ಗೃಹಲಕ್ಷ್ಮೀ ಹಣ ಬರುತ್ತದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ (ನ.20): ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಪಡಿತರ ಚೀಟಿ ಹೊಂದಿರುವ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂಪಾಯಿ ಹಣ ಪಡೆಯಲಿದ್ದಾರೆ. ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಇವರುಗಳು ಆದಾಯ ತೆರಿಗೆ ಪಾವತಿ ಮಾಡುವ ವ್ಯಕ್ತಿಗಳಾಗಿರಬಾರದು. ಆದಾಯ ತೆರಿಗೆ ಪಾವತಿ ಮಾಡುತ್ತಿರುವವರಿಗೆ ಗೃಹಲಕ್ಷ್ಮೀ ಹಣ ಸಿಗೋದಿಲ್ಲ ಎಂದು ಬುಧವಾರ ತಿಳಿಸಿದ್ದಾರೆ. ಗೃಹಲಕ್ಷ್ಮೀ ಹಣದ ವಿಚಾರದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಅನ್ನೋ ವಿಚಾರ ಲೆಕ್ಕಕ್ಕೆ ಬರೋದಿಲ್ಲ. ಆದಾಯ ತೆರಿಗೆ ಪಾವತಿ ಮಾಡುವವರು ಆಗಿರಬಾರದು ಎನ್ನುವ ನಿಯಮವಿದೆ ಎಂದು ತಿಳಿಸಿದ್ದಾರೆ.
ಬುಧವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮಹಿಳೆಯರು ತಮ್ಮ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಿದರೂ ಗೃಹಲಕ್ಷ್ಮಿ ಕಂತುಗಳನ್ನು ಪಡೆಯುವುದು ಮುಂದುವರಿಯುತ್ತದೆ. ಪರಿಶೀಲನಾ ಪ್ರಕ್ರಿಯೆಯ ಬಳಿಕ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗೆ ಶಿಫ್ಟ್ ಆದ ಕುಟುಂಬದ ಮನೆಯ ಯಜಮಾನಿ ಕೂಡ 2 ಸಾವಿರ ರೂಪಾಯಿ ಮಾಸಿಕ ಕಂತು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ವದಂತಿಗಳಿಗೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, "ಬಿಜೆಪಿಯಿಂದ ಇದು ದೇಶಾದ್ಯಂತ ನಡೆಯುತ್ತಿದೆ, ಆದರೆ, ಕಾಂಗ್ರೆಸ್ ಶಾಸಕರು ಪ್ರಬಲರಾಗಿದ್ದಾರೆ ಮತ್ತು ಕೇಸರಿ ಪಕ್ಷದ ಬಲಿಪಶುಗಳಾಗೋದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುರಕ್ಷಿತ, ಮತ್ತು ಯಾರೂ ಅದನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ." ಸಚಿವ ಸಂಪುಟ ಪುನಾರಚನೆ ಅಥವಾ ಖಾತೆ ಬದಲಾವಣೆ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ರಿಲೀಸ್ ಆದ ಮೂರೇ ವಾರಕ್ಕೆ ಒಟಿಟಿಗೆ ಬಂದ ಬಘೀರ, ಕನ್ನಡ ಸಿನಿ ಅಭಿಮಾನಿಗಳ ಬೇಸರ!
ಇದೇ ವೇಳೆ ಡಿ.9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿ ವಿಭಾಗದ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಬಹಿರಂಗಪಡಿಸಿದ ಅವರು, ಈ ಕುರಿತು ಈಗಾಗಲೇ ಶಾಸಕರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ, ಅಧಿವೇಶನದಲ್ಲಿ ಹೆಚ್ಚಿನ ಚರ್ಚೆ ನಡೆಸಲಾಗುವುದು' ಎಂದಿದ್ದಾರೆ.
ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 7 ನಗರಗಳಲ್ಲಿ ಮನೆ ಖರೀದಿ ದುಬಾರಿ!
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ಒಳಗೊಂಡ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಮೂರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.