ಶಕ್ತಿ ಯೋಜನೆಯಡಿ ಉಂಟಾಗಿರುವ ಅನುದಾನದ ಕೊರತೆ ನೀಗಿಸಲು ಸಾರಿಗೆ ನಿಗಮಗಳು ಸರ್ಕಾರಕ್ಕೆ ₹5,313.22 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿವೆ. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಲಿರುವ ರಾಜ್ಯ ಬಜೆಟ್ ಅನ್ನು ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ

5313 ಕೋಟಿ ಬಿಡುಗಡೆಗೆ KSRTC ಎಂಡಿಯಿಂದ ಸರ್ಕಾರಕ್ಕೆ ಪತ್ರ

ಬೆಂಗಳೂರು: ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಅಡಿ ನೀಡಬೇಕಾದ ಹೆಚ್ಚುವರಿ ಅನುದಾನ 5,313.22 ಕೋಟಿ ರು. ಬಿಡುಗಡೆಗೆ 2025-26ರ ಪೂರಕ ಆಯವ್ಯಯದಲ್ಲಿ ಸೇರ್ಪಡೆ ಮಾಡಿ ಬಿಡುಗಡೆ ಮಾಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಕ್ತಿ ಯೋಜನೆ ಜಾರಿ ನಂತರದಿಂದ ಫಲಾನುಭವಿಗಳ ಟಿಕೆಟ್ ಮೊತ್ತವನ್ನು ಸರ್ಕಾರವೇ ಭರಿಸುತ್ತಿದೆ. ಮೂರೂ ವರ್ಷಗಳಿಂದ ಸರ್ಕಾರ ಶಕ್ತಿ ಯೋಜನೆಗಾಗಿ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡುತ್ತಿದೆ. ಆದರೆ, ಪ್ರತಿ ವರ್ಷ ಅನುದಾನ ನಿಗದಿಗಿಂತ ಶಕ್ತಿ ಫಲಾನುಭವಿಗಳ ಟಿಕೆಟ್ ಮೊತ್ತ ಹೆಚ್ಚಾಗಿದೆ. ಅಲ್ಲದೆ ಸಾರಿಗೆ ನಿಗಮಗಳಿಗೆ ಆ ಹೆಚ್ಚುವರಿ ಮೊತ್ತವನ್ನು ಸರ್ಕಾರ ನೀಡಿಲ್ಲ. ಅದರಿಂದಾಗಿ 2023-24 ರಿಂದ 2024- 2025ರವರೆಗೆ ಸರ್ಕಾರದಿಂದ ಹೆಚ್ಚುವರಿಯಾಗಿ 5,313.22 ಕೋಟಿ ರು. ನೀಡಬೇಕಿದ್ದು, ಅದನ್ನು ನೀಡುವಂತೆ ಕೆಎಸ್ಸಾರ್ಟಿಸಿ ಎಂಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ: ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ

2023-24ರಲ್ಲಿ ಶಕ್ತಿ ಫಲಾನುಭವಿಗಳ ಟಿಕೆಟ್ ಮೊತ್ತ 4,380.37 ಕೋಟಿ ರು. ಆಗಿದ್ದರೆ, ಸರ್ಕಾರದಿಂದ 3,199.75 ಕೋಟಿ ರು. ಬಿಡುಗಡೆ ಮಾಡಿತ್ತು. ಆ ವರ್ಷ 1,180.62 2. ಕೊರತೆ ಕಾಣಿಸಿಕೊಂಡಿತ್ತು. 2024-25ರಲ್ಲಿ ಟಿಕೆಟ್ ಮೊತ್ತ 6,185.46 ರು. ಆಗಿದ್ದರೆ ಸರ್ಕಾರ 5,015 ಕೋಟಿ ರು. ಬಿಡುಗಡೆ ಮಾಡಿತ್ತು, 1,170.46 ಕೋಟಿ ರು. ಕಡಿಮೆ ನೀಡಲಾಗಿತ್ತು. 2025-2026ರಲ್ಲಿ (ವರ್ಷಾಂತ್ಯದ ಅಂದಾಜು) ಟಿಕೆಟ್ ಮೊತ್ತ 8,262.14 ಕೋಟಿ ರು. ಆಗಿದ್ದರೆ 5,300 ಕೋಟಿ ರು. ಬಿಡುಗಡೆ ಮಾಡಲಾಗುತ್ತಿದೆ. 2,962.14 ಕೊರತೆ ಕಾಣಿಸಿಕೊಳ್ಳುತ್ತಿದೆ.

ಬಸ್‌ನಿಲ್ದಾಣಗಳಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆ ನೇರ ಪ್ರಸಾರ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ಟೀವಿ ವ್ಯವಸ್ಥೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು ಇದೇ ಮೊದಲ ಬಾರಿಗೆ ರಾಜ್ಯದ ಆಯ್ದ ಬಸ್ ನಿಲ್ದಾಣಗಳಲ್ಲಿನ ಟಿವಿ ಮತ್ತು ಎಲ್ ಇಡಿ ಪರದೆಗಳ ಮೂಲಕ ಪ್ರಸಾರ ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಂದಾಗಿದೆ.

ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆಯುತ್ತಿದ್ದಾರೆ. ಈ ಮಹತ್ವದ ಬಜೆಟ್ ಮಂಡನೆಯನ್ನು ರಾಜ್ಯದ ಜನ ನೇರವಾಗಿ ವೀಕ್ಷಿಸುವಂತೆ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. 230 ಸರ್ಕಾರಿ ಬಸ್ ನಿಲ್ದಾಣ ಗಳಲ್ಲಿ ಅಳವಡಿಸಲಾಗಿರುವ ಟಿವಿ ಮತ್ತು ಎಲ್‌ಇಡಿ ಪರದೆಗಳಲ್ಲಿ ಶುಕ್ರವಾರ ಬೆಳಗ್ಗೆ 10.15ರಿಂದ ಬಜೆಟ್ ಮಂಡನೆ ನೇರ ಪ್ರಸಾರ ಮಾಡಲಾಗುತ್ತಿದೆ. ಅದರ ಜತೆಗೆ ಬಜೆಟ್ ಮಂಡನೆ ನಂತರ ಮುಖ್ಯಮಂತ್ರಿ ಅವರ ಪತ್ರಿಕಾಗೋಷ್ಠಿಯನ್ನೂ ಪ್ರಸಾರ ಮಾಡಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಕೆಲಸದವರಾಗಿ ಬಂದು ಮನೆಮಂದಿಯನ್ನೇ ಮುಗಿಸಿದರು: IISC ವಿಜ್ಞಾನಿ ಹಾಗೂ ಕುಟುಂಬವನ್ನು ಕೊಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ