ವಾಹನಗಳ ಫಿಟ್‌ನೆಸ್‌ ಪ್ರಮಾಣಪತ್ರ (ಎಫ್‌ಸಿ) ನೀಡುವಲ್ಲಿನ ಅಕ್ರಮಗಳನ್ನು ತಡೆಯಲು, ರಾಜ್ಯದ ಎಲ್ಲಾ 66 ಆರ್‌ಟಿಒ ಕಚೇರಿಗಳಲ್ಲಿ ಜಿಯೋ ಫೆನ್ಸಿಂಗ್‌ ಆಧಾರಿತ 'ಎಂ-ವಾಹನ್‌ ಫಿಟ್ನೆಸ್‌' ಮೊಬೈಲ್‌ ಅಪ್ಲಿಕೇಷನ್‌ ಅನ್ನು ಜಾರಿಗೆ ತರಲಾಗಿದೆ. ಈ ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದು ತಿಳಿಯಿರಿ

ಕಠಿಣ ಕ್ರಮ - ಎಫ್‌ಸಿ ಅಕ್ರಮ ತಡೆಗೆ ಜಿಯೋ ಫೆನ್ಸಿಂಗ್‌ ಆಧಾರಿತ ಆ್ಯಪ್

 ಬೆಂಗಳೂರು (ಮಾ.6): ವಾಹನಗಳ ಫಿಟ್‌ನೆಸ್‌ ಪ್ರಮಾಣಪತ್ರ ನೀಡುವಲ್ಲಿ ಆಗುತ್ತಿದ್ದ ಅಕ್ರಮ ತಡೆಯಲು ರಾಜ್ಯದ ಎಲ್ಲ 66 ಆರ್‌ಟಿಒ ಕಚೇರಿಗಳಲ್ಲಿ ಜಿಯೋ ಫೆನ್ಸಿಂಗ್‌ ಆಧಾರಿತ ಎಂ-ವಾಹನ್‌ ಫಿಟ್ನೆಸ್‌ ಮೊಬೈಲ್‌ ಅಪ್ಲಿಕೇಷನ್‌ ಅನುಷ್ಠಾನಗೊಳಿಸಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ವಾಹನಗಳು ನೋಂದಣಿಯಾಗಿದ್ದು, ಅವುಗಳ ಫಿಟ್‌ನೆಸ್‌ ಪ್ರಮಾಣ ಪತ್ರ ನೀಡುವಲ್ಲಿ ಏಕರೂಪತೆ ಮತ್ತು ಪಾರದರ್ಶಕವಿಲ್ಲ ಎಂಬ ಆರೋಪ ಪದೇ ಪದೆ ಕೇಳಿ ಬರುತ್ತಿತ್ತು. ಅದಕ್ಕಾಗಿಯೇ ವಾಣಿಜ್ಯ ವಾಹನಗಳ ಫಿಟ್‌ನೆಸ್‌ ಪ್ರಮಾಣಪತ್ರ ನೀಡುವಲ್ಲಿ ಆಗುತ್ತಿರುವ ಲೋಪ ತಡೆಯಲು ಜಿಯೋ ಫೆನ್ಸಿಂಗ್‌ ಆಧಾರಿತ ಎಂ-ವಾಹನ್‌ ಫಿಟ್ನೆಸ್‌ ಮೊಬೈಲ್‌ ಅಪ್ಲಿಕೇಷನ್ ಅನುಷ್ಠಾನಗೊಳಿಸಲಾಗಿದೆ. ಇದರ ಮೂಲಕ ಆರ್‌ಟಿಒ ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸಲಾಗುತ್ತಿದೆ ಎಂದಿದ್ದಾರೆ.

ಕೇಂದ್ರದ ಎನ್‌ಐಸಿ ಈ ಹೊಸ ಎಂ-ವಾಹನ್‌ ಫಿಟ್ನೆಸ್‌ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಷನ್‌ ಮೂಲಕ ಪ್ರತಿ ಆರ್‌ಟಿಒ ಕಚೇರಿಗಳಲ್ಲಿ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸುವಾಗ ಪ್ರದೇಶಗಳನ್ನು ನಿಗದಿಪಡಿಸಿ ಜಿಯೋ ಫೆನ್ಸಿಂಗ್‌ ಮಾಡುವುದು ಕಡ್ಡಾಯ ಮಾಡಲಾಗಿದೆ. ನಿಗದಿತ ಪ್ರದೇಶದಲ್ಲಿ ವಾಹನಗಳು ಭೌತಿಕವಾಗಿ ಹಾಜರಾದ ನಂತರವೇ ಮೋಟಾರು ವಾಹನ ಕಾಯ್ದೆ ಮತ್ತು ನಿಯಮದಂತೆ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲನೆ ವೇಳೆ ವಾಹನದ ವಿವಿಧ ಆರು ಛಾಯಾಚಿತ್ರಗಳನ್ನು ಕಡ್ಡಾಯವಾಗಿ ತೆಗೆದು ಅಪ್ಲಿಕೇಷನ್‌ನಲ್ಲಿ ಅನುಮೋದನೆಗೊಂಡ ನಂತರವೇ ವಾಹನದ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತದೆ.

ಈಗಾಗಲೇ ನಿಗದಿಪಡಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ವಾಹನದ ಫಿಟ್‌ನೆಸ್‌ ಪ್ರಮಾಣಪತ್ರ ನೀಡಲು ಅವಕಾಶವಿರದಂತೆ ಮಾಡಲಾಗಿದೆ. ಇನ್ನು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನದ ಅರ್ಹತಾ ಪ್ರಮಾಣಪತ್ರ ಕೋರಿ ಬರುವ ವಾಹನಗಳ ಪೈಕಿ ಕನಿಷ್ಠ ಶೇ.20ರಷ್ಟು ವಾಹನಗಳನ್ನು ಮರು ತಪಾಸಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಎಲ್ಲ ಕ್ರಮಗಳಿಂದ ಫಿಟ್‌ನೆಸ್‌ ಪ್ರಮಾಣಪತ್ರ ನೀಡುವಲ್ಲಿನ ಅವ್ಯವಸ್ಥೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.