ಕಾವೇರಿ ಕೊಳ್ಳದ ನಾಲ್ಕೂ ಡ್ಯಾಂ ಭರ್ತಿ : ರೈತರ ಮುಖದಲ್ಲಿ ನಗು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Jul 2018, 8:37 AM IST
KRS Crest Gates Opened All Resarvoirs in Cauvery Basin Full
Highlights

 ರಾಜ್ಯದ ಮಲೆನಾಡು ಮತ್ತು ಕೇರಳದ ವಯನಾಡಿ ನಲ್ಲಿ ಸುರಿಯುತ್ತಿರುವ ಮಳೆಗೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ, ಹಾರಂಗಿ ಅಣೆಕಟ್ಟು ಗಳು ಜುಲೈಗೆ ಮೊದಲೇ ಸಂಪೂರ್ಣ ಭರ್ತಿಯಾಗಿದ್ದು ರೈತರ ಮುಖದಲ್ಲಿ ನಗುವರಳಿದೆ.

ಬೆಂಗಳೂರು : ರಾಜ್ಯದ ಮಲೆನಾಡು ಮತ್ತು ಕೇರಳದ ವಯನಾಡಿ ನಲ್ಲಿ ಸುರಿಯುತ್ತಿರುವ ಮಳೆಗೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ, ಹಾರಂಗಿ ಅಣೆಕಟ್ಟು ಗಳು ಜುಲೈಗೆ ಮೊದಲೇ ಸಂಪೂರ್ಣ ಭರ್ತಿಯಾಗಿದ್ದು ರೈತರ ಮುಖದಲ್ಲಿ ನಗುವರಳಿದೆ. ಹೀಗಾಗಿ ತಮಿಳುನಾಡಿಗೆ ಹರಿಸಬೇಕಾಗಿರುವ ನೀರು ಅಣೆ ಕಟ್ಟುಗಳಿಂದ ಯಥೇಚ್ಛವಾಗಿ ಹರಿಯುತ್ತಿದ್ದು ಈ ವರ್ಷ ಅಂತಾರಾಜ್ಯ ನದಿ ನೀರಿನ ಸಮಸ್ಯೆ ತಲೆದೋರುವ ಆತಂಕವೂ ದೂರವಾಗಿದೆ. 

ಕಾವೇರಿ ನದಿಯ ಪ್ರಮುಖ ಉಪನದಿ ಕಪಿಲಾಗೆ ಮೈಸೂರು ಜಿಲ್ಲೆಯಲ್ಲಿ ಕಟ್ಟಲಾಗಿರುವ ಕಬಿನಿ ಜಲಾಶಯ ಜೂನ್ ೧೮ರಂದೇ ಭರ್ತಿಯಾಗಿತ್ತು. ಕಾವೇರಿ ನದಿ ಹುಟ್ಟುವ ಕೊಡಗಿನ ಹಾರಂಗಿ ಜಲಾಶಯವೂ ಜುಲೈ 7ರಂದು ಭರ್ತಿಯಾಗಿತ್ತು. ಇದೀಗ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಮತ್ತು ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯಗಳೂ ಶನಿವಾರದಂದು ಭರ್ತಿಯಾಗುವುದರೊಂದಿಗೆ ನಾಲ್ಕೂ ಜಲಾಶಯಗಳು ಜುಲೈನಲ್ಲೇ ಭರ್ತಿಯಾಗಿವೆ. 

ಕೆಆರ್‌ಎಸ್‌ಗೆ ಅತ್ಯುತ್ತಮ ಒಳಹರಿವು: ಕೆಆರ್ ಎಸ್ ನಾಲ್ಕು ವರ್ಷದ ನಂತರ ಜುಲೈ ಎರಡನೇ ವಾರದಲ್ಲೇ ಭರ್ತಿಯಾಗಿದೆ. 124.8 ಅಡಿ ಗರಿಷ್ಠ ಮಟ್ಟವಿರುವ ಆಣೆಕಟ್ಟೆಯಲ್ಲಿ ಶನಿವಾರ ಸಂಜೆ ವೇಳೆಗೇ 123.65 ಅಡಿ ನೀರು ತುಂಬಿದೆ.  ಹಾರಂಗಿ ಮತ್ತು ಹೇಮಾವತಿ ಜಲಾಶಯ ಗಳಿಂದಲೂ ತಲಾ 14 ಸಾವಿರ ಕ್ಯುಸೆಕ್  ನೀರು ನದಿಯ ಮೂಲಕ ಕೆಆರ್‌ಎಸ್‌ಗೆ ಹರಿದು ಬರುತ್ತಿದೆ. ಹೀಗಾಗಿ ಶನಿವಾರ ಮಧ್ಯಾಹ್ನ 1.20 ಗಂಟೆಗೆ ಕೆಆರ್‌ಎಸ್ ಅಧಿಕಾರಿಗಳು ಕ್ರಸ್ಟ್ ಗೇಟ್‌ಗಳಿಗೆ ಪೂಜೆ ಸಲ್ಲಿಸಿ ನಂತರ ನೀರನ್ನು ನದಿಗೆ ಹರಿಸಿದರು. 

ಒಟ್ಟಾರೆ 43072 ಕ್ಯುಸೆಕ್‌ಗೂ ಅಧಿಕ ಪ್ರಮಾಣದ ಒಳಹರಿವು ಇದ್ದು ಸಂಜೆ ವೇಳೆಗೆ 11 ಗೇಟ್‌ಗಳ ಮೂಲಕ 40000 ಕ್ಯುಸೆಕ್  ನೀರನ್ನು ನದಿಗೆ ಹರಿಸಲಾಗಿದೆ. ಒಳಹರಿವಿನ ಪ್ರಮಾಣ ಹೆಚ್ಚಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು ಪ್ರವಾಹದ ಮುನ್ನೆಚ್ಚರಿಕೆಯನ್ನು ಈಗಾಗಲೇ ಸ್ಥಳೀಯರಿಗೆ ನೀಡಲಾಗಿದೆ.

ಹೇಮಾವತಿ ಅವಧಿಗೆ ಮುನ್ನ ಭರ್ತಿ: ಹಾಸನ ತಾಲೂಕಿನ ಗೊರೂರು ಸಮೀಪ ಇರುವ ಹೇಮಾವತಿ ಜಲಾಶಯ 20 ವರ್ಷಗಳ ಬಳಿಕ ಜುಲೈನಲ್ಲೇ ಸಂಪೂರ್ಣ ಭರ್ತಿಯಾ ಗಿದೆ. ಹಿಂದೆಲ್ಲಾ ಸೆಪ್ಟಂಬರ್ ಅಥವಾ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲಿ ಭರ್ತಿ ಯಾಗಿರುವುದು ವಿಶೇಷವಾಗಿದೆ. ಹೀಗಾಗಿ ಶನಿವಾರ ಜಲಾಶಯದ ಎಲ್ಲಾ 6 ಕ್ರೆಸ್ಟ್ ಗೇಟ್‌ಗಳಿಂದ 14 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಯಿತು. ಲೋಕೋಪ ಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ವಿಶೇಷ ಪೂಜೆಯನ್ನು ಸಲ್ಲಿಸಿ, ನಂತರ ಜಲಾಶಯದಲ್ಲಿನ ಕ್ರೆಸ್ಟ್ ಗೇಟ್‌ಗಳ ಬಟನ್ ಅನ್ನು ಒತ್ತುವ ಮೂಲಕ ನೀರು ಹೊರ ಬಿಡಲು ಚಾಲನೆ ನೀಡಿದರು. 

37.103 ಟಿಎಂಸಿ ಸಂಗ್ರಹವಾಗುವ ಸಾಮರ್ಥ್ಯ ಹೊಂದಿರುವ ಜಲಾಶಯ ಗರಿಷ್ಠ 2922.40 ಅಡಿಯಾಗಿದೆ. ಪ್ರಸ್ತುತ 2920 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 24,743 ಕ್ಯುಸೆಕ್ ಕ್ಕಿಂತ ಹೆಚ್ಚು ನೀರು ಈಗ ಹರಿದು ಬರುತ್ತಿದೆ. 

ಜೂನ್‌ನಲ್ಲೇ ಭರ್ತಿಯಾಗಿದ್ದ ಕಬಿನಿ: ಸಾಮಾನ್ಯವಾಗಿ ಜುಲೈ ತಿಂಗಳ ಮಧ್ಯ ಭಾಗ ದಲ್ಲಿ ಕಬಿನಿ ಜಲಾಶಯ ಭರ್ತಿಯಾಗುತ್ತದೆ. ಆದರೆ ಈ ಬಾರಿ ಪೂರ್ವ ಮುಂಗಾರು ಭರ್ಜರಿಯಾಗಿ ಆರಂಭವಾಗಿದ್ದರಿಂದ ಜೂನ್ ಮಧ್ಯಭಾಗದಲ್ಲಿಯೇ ಭರ್ತಿಯಾಯಿತು. ಮೂರ್ನಾಲ್ಕು ದಿನಗಳಲ್ಲಿಯೇ ಜಲಾಶಯ ಅಪಾಯದ ಮಟ್ಟ ತಲುಪಿತು. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಗರಿಷ್ಠ 50,000 ಕ್ಯುಸೆಕ್‌ವರೆಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಯಿತು. 

ಇದೀಗ ಒಳಹರಿವು 43,4000 ಕ್ಯುಸೆಕ್  ಇದ್ದು, ಜಲಾಶಯದಿಂದ 45,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಗರಿಷ್ಠ ಮಟ್ಟ 2,284 ಅಡಿಯಿರುವ ಜಲಾಶಯದಲ್ಲಿ ಶನಿವಾರ 2,281.46 ಅಡಿ ನೀರಿತ್ತು. ಜುಲೈ 7ಕ್ಕೆ ಹಾರಂಗಿ ಭರ್ತಿ: ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಜು.7 ರಂದೇ ಸಂಪೂರ್ಣ ಭರ್ತಿಯಾಗಿದೆ. ಜುಲೈ ಪ್ರಥಮ ವಾರದಲ್ಲೇ ಜಲಾಶಯ ಭರ್ತಿಯಾ ಗಿರುವುದು ಕಳೆದ 20 ವರ್ಷಗಳಲ್ಲಿ ಇದೇ ಮೊದಲು. ಈ ಮಳೆಗಾಲದಲ್ಲಿ ಕೊಡಗಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಒಟ್ಟು 14.5 ಟಿಎಂಸಿ ನೀರು ಹರಿದುಬಂದಿದೆ. 

ಇದರಲ್ಲಿ 5 ಟಿಎಂಸಿಯಷ್ಟು ನೀರನ್ನು ಹೆಚ್ಚು ವರಿಯಾಗಿ ನದಿಗೆ ಹರಿಸಲಾಗಿದೆ. ಜಲಾಶಯದಲ್ಲಿ ಈಗ 7.8 ಟಿಎಂಸಿ ನೀರು ಸಂಗ್ರಹ ಇದೆ. ಜಲಾಶಯದ ಒತ್ತಿನಲ್ಲೇ ಇರುವ ಎರಡು ಖಾಸಗಿ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಕಳೆದ 10 ವರ್ಷಗಳಲ್ಲೇ ಪ್ರಥಮ ಬಾರಿಗೆ ಇಷ್ಟು ಪುಷ್ಕಳವಾಗಿ ನೀರು ದೊಕರುತ್ತಿದ್ದು, ಸುಮಾರು 16 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ. 

loader