Asianet Suvarna News Asianet Suvarna News

ಮುಸ್ಲಿಮರಿಗೆ 150 ವರ್ಷ ಹಿಂದೆಯೇ ಮೈಸೂರು ಒಡೆಯರು ಮೀಸಲಾತಿ ಕೊಟ್ಟಿದ್ದರು; ದೇವರಾಜು ಅರಸು ಒಬಿಸಿ ಕೆಟಗರಿ ಕೊಟ್ಟರು

ರಾಜ್ಯದಲ್ಲಿ 150 ವರ್ಷಗಳ ಹಿಂದೆಯೇ ಮುಸ್ಲಿಮರಿಗೆ ಮೈಸೂರು ಒಡೆಯರು ಮೀಸಲಾತಿ ಕೊಟ್ಟಿದ್ದರು. ದೇವರಾಜು ಅರಸು ಸರ್ಕಾರದಲ್ಲಿ ಮುಸ್ಲಿಮರನ್ನು ಒಬಿಸಿ ವರ್ಗಕ್ಕೆ ಸೇರಿಸಿದರೆ,  ರಾಮಕೃಷ್ಣ ಹೆಗಡೆ ಸರ್ಕಾರ ಶೇ.4 ಮೀಸಲಾತಿ ಕೊಟ್ಟಿದೆ.

Mysuru wodeyar gave muslim reservation 150 years ago Devaraj arasu Govt given OBC reservation sat
Author
First Published Apr 25, 2024, 3:11 PM IST | Last Updated Apr 25, 2024, 3:11 PM IST

ಬೆಂಗಳೂರು (ಏ.25): ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ 150 ವರ್ಷಗಳಿಂದಲೂ ಮೀಸಲಾತಿ ಕೊಡಲಾಗಿದೆ. ದೇವರಾಜು ಅರಸು ಅವರು ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿಸಿದ್ದಾರೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಸ್ಲಿಮರಿಗೆ ಧರ್ಮಾಧಾರಿತವಾಗಿ ಮೀಸಲಾತಿ ಕೊಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಗುರುವಾರ ನಡೆದ ಕರ್ನಾಟಕ ಶೋಷಿತ ಸಮುದಾಯಗಳ ಮಹಾಮೈತ್ರಿಕೂಟದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ 150 ವರ್ಷಗಳ ಹಿಂದೆ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮೀಸಲಾತಿಯನ್ನು ನೀಡಿದ್ದರು. ಇದಾದ ನಂತರ ಸಂವಿಧಾನ ಜಾರಿಯಾದ ನಂತರ ಕರ್ನಾಟಕದಲ್ಲಿ ಹಾವನೂರು ಆಯೋಗದ ವರದಿ ಅನುಸಾರ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗದ ಮೀಸಲಾತಿ ಕಲ್ಪಿಸಿದ್ದರು. ನಂತರ ಬಂದ ರಾಮಕೃಷ್ಣ ಹೆಗಡೆ ಸರ್ಕಾರ ಮುಸ್ಲಿಮರಿಗೆ ಶೇ.4 ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರ, ಈಗ ಪ್ರಧಾನಮಂತ್ರಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲಾತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ಹೇಳಿಕೆ ನೀಡಿದ್ದಾರೆ. ಇದು ದೊಡ್ಡ ಸುಳ್ಳು. ಚುನಾವಣೆ ಸಂದರ್ಭದಲ್ಲಿ ತಪ್ಪು ದಾರಿಗೆ ಬರುವ ಪ್ರಯತ್ನ ನಡೆಯುತ್ತಿದೆ. ಮುಖ್ಯವಾಗಿ ದೇಶದಲ್ಲಿ 1874ರಲ್ಲಿ ಮೀಸಲಾತಿ ಬಂದಿತು. ಜಾತಿ ಗಣತಿಯನ್ನು 1876 ರಲ್ಲಿ ನಡೆಸಲಾಯಿತು. ಇದರ ಆಧಾರದ ಮೇಲೆ ಮೀಸಲಾತಿ ವಾರ್ಡನ್ ಮೀಸಲಾತಿ ನೀಡಿದರು. 1874ರಲ್ಲಿ, 10 ಹುದ್ದೆಗಳಲ್ಲಿ 2 ಹುದ್ದೆಗಳನ್ನು ಬ್ರಾಹ್ಮಣರಿಗೆ ನೀಡಲಾಯಿತು. ಉಳಿದ 8 ಹುದ್ದೆಗಳನ್ನು ಮುಸ್ಲಿಮರು ಮತ್ತು ಇತರರಿಗೆ ನೀಡಲಾಯಿತು. 1874 ರಿಂದ ಮುಸ್ಲಿಮರಿಗೆ ಮೀಸಲಾತಿ ಇದೆ ಎಂದು ಹೇಳಿದರು.

ಹಿಂಬಾಗಿಲ ಮೂಲಕ ಕರ್ನಾಟಕದಲ್ಲಿ ಮುಸ್ಲಿಂರಿಗೆ ಮೀಸಲು: ಮೋದಿ ಕಿಡಿ

ರಾಜ್ಯದಲ್ಲಿ ದೇವರಾಜ ಅರಸು ಅವರ ಸರ್ಕಾರ 1972ರಲ್ಲಿ ಹಾವನೂರು ಆಯೋಗ ಮಾಡಿತು. 1975ರಲ್ಲಿ ಆಯೋಗವು ತನ್ನ ವರದಿಯನ್ನು ಸಲ್ಲಿಸಿತು. ವರದಿಯು ಪರ-ವಿರೋಧ ಅಭಿಪ್ರಾಯವನ್ನು ಪಡೆಯಿತು. ನಂತರ 22-02-1977ರಂದು ಹಾವನೂರ ಆಯೋಗದ ವರದಿಯನ್ನು ಜಾರಿಗೊಳಿಸಲಾಯಿತು. ಇದರನ್ವಯ ದೇವರಾಜ್ ಅರಸು ಅವರು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದರು. ಅಲ್ಲದೆ, ಮುಸ್ಲಿಮರಿಗೆ ಹಿಂದುಳಿದ ಜಾತಿ ಎಂದು ಮೀಸಲಾತಿ ನೀಡಲಾಯಿತು. ಆದರೆ, ಇದರ ವಿರುದ್ದ ಕೋ ಚನ್ನಬಸಪ್ಪ ಮೊಕದ್ದಮೆ ಹೂಡಿ, ಲಿಂಗಾಯತ ಪರ ವಾದ ಮಂಡಿಸಿದರು. ಸೋಮಶೇಖರ್ ಎಂಬುವರು ವಾದಿಯಾಗಿದ್ದರಿಂದ ಸೋಮಶೇಖರ್ ಕೇಸ್ ಅಂತ ಕರೆಯಲಾಗ್ತಿದೆ. 1979ರಲ್ಲಿ ಹೈಕೋರ್ಟ್ ಮುಸ್ಲಿಂ ಮೀಸಲಾತಿ ಪರ ತೀರ್ಪು ಕೊಟ್ಟಿದೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಸುಪ್ರೀಂ ಕೋರ್ಟ್ ಸಹ ಮುಸ್ಲಿಂ ಮೀಸಲಾತಿ ಎತ್ತಿಹಿಡಿಯಿತು ಎಂದು ತಿಳಿಸಿದರು.

ನಂತರ ರಾಮಕೃಷ್ಣ ಹೆಗಡೆ ಸರಕಾರ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿದೆ. ಲಿಂಗಾಯತರಿಗೆ ಹಿಂದುಳಿದ 3ಬಿ ಅಡಿಯಲ್ಲಿ ಮೀಸಲಾತಿ ನೀಡಲಾಗಿದೆ. 2ಬಿ ಪ್ರಕಾರ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ಈಗಿನ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರ ಮಾಡಿದ್ದು, ಆಗ ದೇವೇಗೌಡರು  13/10/1986 ರಂದು 2B ಅಡಿಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಿ ಆದೇಶ ಮಾಡಿದ್ದಾರೆ. ನಂತರ ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಶೆಟ್ಟರ್ ಸರ್ಕಾರ ಈ ಮೀಸಲಾತಿಯನ್ನು ಮುಂದುವರಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಗಂಗಾರಾಮ್ ಅಹೀರ್ ಬಿಜೆಪಿ ಬಾಲಬುಡುಕ. ಚುನಾವಣೆಯಲ್ಲಿ ಸೋತವನು ಅವನು. ಆತನಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಈಗ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಆಗಿದ್ದಾರೆ. 1993ರಲ್ಲಿ ಈ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಯಾವತ್ತೂ ರಾಷ್ಟ್ರೀಯ ಆಯೋಗ ಕರ್ನಾಟಕ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ. ಮುಸ್ಲಿಂ ಹಿಂದುಗಳ ವಿಂಗಡಣೆ ಪ್ರಯತ್ನದ ಭಾಗವಾಗಿ ಈ ಹೇಳಿಕೆ ಕೊಟ್ಟಿದ್ದಾನೆ. ರಾಷ್ಟ್ರೀಯ ಆಯೋಗಕ್ಕೆ ರಾಜ್ಯದ ಜಾತಿ ಪಟ್ಟಿ ಬಗ್ಗೆ ಮಾತಾಡುವ ಅಧಿಕಾರ ಇಲ್ಲ. ಇದು ಆಯೋಗದ ತಿರ್ಮಾನ ಅಲ್ಲ. ಅಧ್ಯಕ್ಷರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಧರ್ಮದ ಆಧಾರದ ಮೇಲೆ ಮುಸ್ಲಿಂ ಮೀಸಲಾತಿ ನೀಡುವುದಿಲ್ಲ. ಅದೊಂದು ಸುಳ್ಳು ರಾಜಕೀಯ. ಈ ಮೀಸಲಾತಿಯನ್ನು ನ್ಯಾಯಾಂಗದಲ್ಲಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಶಾಕ್, ಏ.29ಕ್ಕೆ ಡೆಡ್‌ಲೈನ್!

ರಾಜ್ಯ ಸರ್ಕಾರಕ್ಕೆ ಹಿಂದುಳಿದ ಪಟ್ಟಿ ಮಾಡಲು ಅವಕಾಶ ಇದೆ ಅಂತ ಮೋದಿ ಸರ್ಕಾರ ತಿದ್ದುಪಡಿ ಮಾಡಿದೆ. 15/09/2021ರಲ್ಲಿ ಸಂವಿಧಾನಕ್ಕೆ 105ನೇ ತಿದ್ದುಪಡಿ ಮೂಲಕ ಆದೇಶ ಮಾಡಲಾಗಿದೆ. ಸಂವಿಧಾನದ ಸೆಕ್ಷನ್ 142/A/3 ಅನ್ವಯ ಆದೇಶ ಮಾಡಲಾಗಿದೆ. ಇಷ್ಟಾದರೂ ಆಯೋಗದ ಅಧ್ಯಕ್ಷ ಸುಳ್ಳು ಹೇಳಿಕೆ ನೀಡಿದ್ದಾನೆ. ಬಿಜೆಪಿ ಪರವಾಗಿ ಹೇಳಿಕೆ ನೀಡಿದ್ದಾನೆ. ಆಯೋಗದ ಅಧ್ಯಕ್ಷ ನ  ಹೇಳಿಕೆ ಖಂಡಿಸುತ್ತೇನೆ.ಅಧ್ಯಕ್ಷ ಸ್ಥಾನದಿಂದ ಆತನನ್ನು ತೆಗೆಯಬೇಕು. ಆತನ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಈ ಹೇಳಿಕೆ ಚುನಾವಣೆಗಾಗಿಯೇ ನೀಡಿದ ಹೇಳಿಕೆಯಾಗಿದೆ. ಆತನನ್ನು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಮುಸ್ಲಿಮರಿಗೆ ಕೊಟ್ಟ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಕಿತ್ತು ಹಾಕಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಈ ಪ್ರಕರಣದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ, ಮೀಸಲಾತಿ ಆದೇಶ ಜಾರಿ ಮಾಡಲ್ಲ ಅಂತ ಹೇಳಿತು. ಅದು ಇನ್ನೂ ಕೋರ್ಟ್ ನಲ್ಲಿದೆ. ಇನ್ನು ಆಯೋಗದ ಅಧ್ಯಕ್ಷನಾಗಿ ಆತ ಮುಂದುವರಿಯಬಾರದು. ಚುನಾವಣಾ ಆಯೋಗ ಎನು ಕ್ರಮ ಕೈಗೊಳ್ಳಲಿದೆ ಅಂತ ನೋಡ್ತೇನೆ. ಸೂಕ್ತ ಕಾನೂನು ಕ್ರಮವನ್ನು ಜರುಗಿಸುವ ಬಗ್ಗೆ ತಿರ್ಮಾನ ಮಾಡ್ತೇವೆ ಎಂದು ರವಿವರ್ಮ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios