ರಾಜ್ಯದ ರೈತರಿಗೆ ಗುಡ್‌ನ್ಯೂಸ್: ಕೃಷಿ ಭಾಗ್ಯ ಯೋಜನೆ ಮರುಜಾರಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ನಂತರ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಹತ್ವಾಕಾಂಕ್ಷಿ ಯೋಜನೆಯ ಮರುಜಾರಿಗೆ ಮುಂದಾಗಿದ್ದಾರೆ.

ಬೆಂಗಳೂರು(ನ.10): ಮಹತ್ವಾಕಾಂಕ್ಷಿ ‘ಕೃಷಿ ಭಾಗ್ಯ’ ಯೋಜನೆ ಮರು ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. 100 ಕೋಟಿ ರು. ವೆಚ್ಚದಲ್ಲಿ 106 ತಾಲೂಕುಗಳ ವ್ಯಾಪ್ತಿಯಲ್ಲಿ ಕೃಷಿ ಹೊಂಡ ನಿರ್ಮಾಣ ಸೇರಿದಂತೆ ವಿವಿಧ ಕೃಷಿ ಪ್ರೋತ್ಸಾಹ ಚಟುವಟಿಕೆಗಳನ್ನು ಒಳಗೊಂಡ ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ, ‘ಕೃಷಿ ಯಂತ್ರಧಾರೆ’ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯಾದ್ಯಂತ 100 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಘಟಕಕ್ಕೆ 1 ಕೋಟಿ ರು. ಮೀರದಂತೆ ಶೇ.70ರಷ್ಟು ಸಹಾಯಧನ ನೀಡಲಾಗುವುದು. ಹಾರ್ವೆಸ್ಟರ್ ಹಬ್ ಸ್ಥಾಪಿಸಿ ಹೈಟೆಕ್ ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡಲು ನಿರ್ಧಾರ ಮಾಡಲಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ನಂತರ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಹತ್ವಾಕಾಂಕ್ಷಿ ಯೋಜನೆಯ ಮರುಜಾರಿಗೆ ಮುಂದಾಗಿದ್ದಾರೆ.
ರೈತರ ಗಾಯದ ಮೇಲೆ ಬರೆ ಎಳೆದ ಸರ್ಕಾರ: ಸಂಸದ ಜೊಲ್ಲೆ
ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಹಿಂದಿನ ಅವಧಿಯಲ್ಲಿ (2013-18) ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿತ್ತು. ಈ ವರ್ಷವೂ 100 ಕೋಟಿ ರು. ವೆಚ್ಚದಲ್ಲಿ 24 ಜಿಲ್ಲೆಗಳ ವ್ಯಾಪ್ತಿಯ 106 ತಾಲೂಕುಗಳಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ.
106 ತಾಲೂಕುಗಳಲ್ಲಿ 16,062 ಕೃಷಿ ಹೊಂಡ ನಿರ್ಮಾಣ ಗುರಿ ಹೊಂದಿದ್ದು, ಕ್ಷೇತ್ರ ಬದು ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಕೆ, ಕೃಷಿ ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಪೂರೈಕೆ, ನೀರನ್ನು ಬೆಳೆಗೆ ಹಾಯಿಸಲು ತುಂತುರು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಕೆ ಸೇರಿದಂತೆ ಹಲವು ಘಟಕಗಳಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಹೈಟೆಕ್ ಕೃಷಿ ಯಂತ್ರಧಾರೆ:
ಈಗಾಗಲೇ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿ ಕೃಷಿ ಯಂತ್ರಗಳನ್ನು ರೈತರಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ 300 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಹಂತ-ಹಂತವಾಗಿ ಸ್ಥಾಪಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.
ಈ ವರ್ಷ 100 ಹಾರ್ವೆಸ್ಟರ್ ಹಬ್:
ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಟೋರ್ ಮಾಡಿ ಬಾಡಿಗೆ ಆಧಾರದ ಮೇಲೆ ಅಗತ್ಯವುಳ್ಳ ರೈತರಿಗೆ ಒದಗಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಶೇ.70ರಷ್ಟು ಸಹಾಯಧನದಲ್ಲಿ ಪ್ರತಿ ಘಟಕವನ್ನು 1 ಕೋಟಿಗೆ ಮೀರದಂತೆ ಅನುಷ್ಠಾನಗೊಳಿಸಲಾಗುವುದು. ಬಹು ಬೆಳೆ ಕಟಾವು ಮತ್ತು ಒಕ್ಕಣೆ ಯಂತ್ರ, ಕಬ್ಬು ಕಟಾವು ಯಂತ್ರ, ಟ್ರ್ಯಾಕ್ಟರ್ ಚಾಲಿತ ಬಾರು ಬೆಳೆಗಳನ್ನು ಒಕ್ಕಣೆ ಮಾಡುವ ಹೈಟೆಕ್ ಹೈ ವಾಲ್ಯೂಮ್ ಬಹು ಬೆಳೆ ಒಕ್ಕಣೆ ಯಂತ್ರದಂತಹ ಹೈಟೆಕ್ ಯಂತ್ರಗಳನ್ನು ಒದಗಿಸಲಾಗುವುದು ಎಂದರು.
ಕೃಷಿ ಸಿಂಚಾಯಿ ಯೋಜನೆ:
ರಾಜ್ಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು (ಜಲಾನಯನ ಅಭಿವೃದ್ಧಿ ಘಟಕ) ರಾಜ್ಯದ ಐದು ತಾಲೂಕುಗಳಲ್ಲಿ 38.12 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಯಿತು.
ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ 5.6 ಕೋಟಿ ರು., ಬೆಳಗಾವಿಯ ಚಿಕ್ಕೋಡಿಗೆ 9.8 ಕೋಟಿ ರು., ಮಂಡ್ಯ ತಾಲೂಕಿಗೆ 7.59 ಕೋಟಿ ರು., ಚನ್ನಪಟ್ಟಣದಲ್ಲಿ 6.60 ಕೋಟಿ ರು., ಶಿರಸಿಗೆ 8.53 ಕೋಟಿ ರು. ಸೇರಿ 38.12 ಕೋಟಿ ರು. ವೆಚ್ಚ ಮಾಡಲಾಗುವುದು. ಇದಕ್ಕೆ ಕೇಂದ್ರದಿಂದ 22.8 ಕೋಟಿ ರು. ಅನುದಾನ ಬಿಡುಗಡೆಯಾಗಲಿದ್ದು, ಉಳಿದ ಅನುದಾನ ರಾಜ್ಯ ಸರ್ಕಾರ ಒದಗಿಸುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಫಸಲ್ ಬಿಮಾ ಯೋಜನೆ:
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಕೃಷಿ ಬೆಳೆಗೆ) ಮುಂದುವರೆಸಲು ಕ್ಲಸ್ಟರ್‌ವಾರು ಅತಿ ಕಡಿಮೆ ಪ್ರೀಮಿಯಂ ದರ ನಮೂದಿಸಿರುವ ಬೆಳೆವಿಮಾ ಕಂಪನಿಗಳ ದರ ಒಪ್ಪಿಕೊಂಡು ಕೃಷಿ ಆಯುಕ್ತರು ಹೊರಡಿಸಿರುವ ಕಾರ್ಯಾದೇಶಕ್ಕೆ ಸಂಪುಟ ಘಟನೋತ್ತರ ಮಂಜೂರಾತಿ ನೀಡಿದೆ. 31 ಜಿಲ್ಲೆಗಳನ್ನು ಹತ್ತು ಕ್ಲಸ್ಟರ್ ಆಗಿ ವಿಭಜಿಸಿ ವಿವಿಧ ದರಗಳಿಗೆ ಮಂಜೂರಾತಿ ನೀಡಲಾಗಿದೆ.
ಕೃಷಿ ಜಮೀನಿಗೆ ರಸ್ತೆ ಇರುವಂತೆ ನೋಡಿಕೊಳ್ಳಿ: ಸಚಿವ ಕೃಷ್ಣ ಭೈರೇಗೌಡ
ಇನ್ನು ಕೃಷಿ ಪಂಪ್ ಸೆಟ್‌ಗಳಿಗೆ ಸೆ.22ರ ಬಳಿಕ ಪಡೆಯುವ ವಿದ್ಯುತ್ ಸಂಪರ್ಕಕ್ಕೆ ಮೂಲಸೌಕರ್ಯ ವೆಚ್ಚವನ್ನು ರೈತರೇ ಭರಿಸಬೇಕು ಎಂಬ ಆದೇಶ ಹಿಂಪಡೆಯುವ ಬಗ್ಗೆ ನಿರ್ಧಾರ ಆಯಿತೇ ಎಂಬ ಪ್ರಶ್ನೆಗೆ, ಆ ವಿಚಾರ ಚರ್ಚೆಗೆ ಬಂದಿಲ್ಲ ಎಂದು ಎಚ್.ಕೆ. ಪಾಟೀಲ್ ಹೇಳಿದರು.
ಏನಿದು ಕೃಷಿಭಾಗ್ಯ?
- ಒಣಭೂಮಿಯ ರೈತರು ಬೇಸಾಯಕ್ಕೆ ಮಳೆ ನೀರು ಸಂಗ್ರಹಿಸಲು ಅವಕಾಶ ಕಲ್ಪಿಸುವ ಯೋಜನೆ
- ಕೃಷಿ ಹೊಂಡ ನಿರ್ಮಿಸಿ, ನೀರು ಇಂಗದಂತೆ ಅದರಲ್ಲಿ ಪಾಲಿಥೀನ್ ಶೀಟು ಅಳವಡಿಸಲಾಗುತ್ತದೆ
- ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಅಳವಡಿಸಿ, ತುಂತುರು ನೀರಾವರಿ ಘಟಕ ಸ್ಥಾಪಿಸಲಾಗುತ್ತದೆ
- ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಕೆ ಮಾಡಲಾಗುತ್ತದೆ. ಇದಕ್ಕೆ ಸರ್ಕಾರ ನೆರವು ನೀಡುತ್ತದೆ
ರೈತರಿಗೇನು ಲಾಭ?
- 2013ರಿಂದ 18ರವರೆಗೆ ಸಿದ್ದು ಸಿಎಂ ಆಗಿದ್ದಾಗ ಯೋಜನೆ ಜಾರಿ ಆಗಿತ್ತು
- ರೈತರಿಂದ ಯೋಜನೆಗೆ ಉತ್ತಮವಾದ ಸ್ಪಂದನೆ ಕೂಡ ದೊರಕಿತ್ತು
- ನಂತರ ಬಂದ ಬಿಜೆಪಿ ಸರ್ಕಾರ ಯೋಜನೆಯನ್ನು ಸ್ಥಗಿತ ಮಾಡಿತ್ತು
- 16062 ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಈಗ ಗುರಿ
- ಇದರಿಂದ ಒಣಭೂಮಿಯಲ್ಲಿ ಬೇಸಾಯ ಮಾಡಲು ಅನುಕೂಲ