ಕೆಪಿಎಸ್‌ಸಿ ಮರುಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಎಡವಟ್ಟು ? ಇಲ್ಲಿದೆ ನೋಡಿ ಇಂಚಿಂಚು ಮಾಹಿತಿ..
ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಕೆಎಎಸ್ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಎಡವಟ್ಟುಗಳು ಕಂಡುಬಂದಿವೆ. ಕನ್ನಡ ಅನುವಾದದಲ್ಲಿ ಲೋಪಗಳಿಂದಾಗಿ ಅಭ್ಯರ್ಥಿಗಳು ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು (ಡಿ.29): ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ವತಿಯಿಂದ ರಾಜ್ಯದಾದ್ಯಂತ ನಡೆಸಲಾದ ಕೆಎಎಸ್ ಶ್ರೇಣಿಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿರುವುದು ಕಂಡುಬಂದಿದೆ. ಭಾನುವಾರ ರಾಜ್ಯದಲ್ಲಿ ನಡೆದ ಮರು ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯಲ್ಲಿ 3-5 ಪ್ರಶ್ನೆಗಳು ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದು ಮರು ಪರೀಕ್ಷೆ ಮಾಡುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ಲೋಕ ಸೇವಾ ಆಯೋಗದಿಂದ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ KAS ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆದರೆ, ಕೆಪಿಎಸ್‌ಸಿ ವತಿಯಿಂದ ಸಿದ್ಧಪಡಿಸಲಾದ ಕೆಎಎಸ್ ಪತ್ರಿಕೆಯಲ್ಲಿ ಎಡವಟ್ಟುಗಳು ಕಂಡುಬಂದಿವೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಈ ಹಿಂದೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳ ಭಾಷಾಂತರದಲ್ಲಿ ಎಡವಟ್ಟು, ವಾಸ್ತವಾಂಶಗಳ ತಪ್ಪುಗಳಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮರು ಪರೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿತ್ತು. ಇದೀಗ 2ನೇ ಬಾರಿಗೆ ನಡೆಸಲಾದ ಮರು ಪರೀಕ್ಷೆಯಲ್ಲಿಯೂ ಮತ್ತದೇ ದೋಷಗಳು ಕಂಡುಬಂದಿವೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ನಡೆಸುತ್ತಿದ್ದ ಕೆಎಎಸ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು; ಮತ್ತೊಮ್ಮೆ ಪರೀಕ್ಷೆ ಮಾಡ್ತೀರಾ?
ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ 3-5 ಪ್ರಶ್ನೆಗಳು ಕನ್ನಡ ಅನುವಾದ ಮಾಡುವಲ್ಲಿ ಲೋಪವಾಗಿವೆ. ಈ ಹಿಂದೆ ಆ.27ರಂದು ನಡೆದಿದ್ದ ಇದೇ ಪರೀಕ್ಷೆಯಲ್ಲಿ ಕನ್ನಡ ಲೋಪದೋಷವಾಗಿ ಪರೀಕ್ಷೆ ರದ್ದಾಗಿತ್ತು. ಇವತ್ತು ಬೆಳಗ್ಗೆ KAS ಪೂರ್ವಭಾವಿ ಮರು ಪರೀಕ್ಷೆ ನಡೆದಿತ್ತು. ಪೇಪರ್ 1 ಸಾಮಾನ್ಯ ಜ್ಞಾನ 1-ಬಿ ಸಿರೀಸ್ ನ ಪ್ರಶ್ನೆ ಪತ್ರಿಕೆಯಲ್ಲಿ ಲೋಪವಾಗಿದೆ.
ಅಭ್ಯರ್ಥಿಗಳ ಪ್ರಕಾರ ಯಾವೆಲ್ಲಾ ಪ್ರಶ್ನೆಗಳು ಲೋಪವಾಗಿವೆ?
ಪ್ರಶ್ನೆ 3- ತಪ್ಪದ ಪದ ಬಳಕೆ - ಅದು ತಪ್ಪಾದ ಆಗಬೇಕಿತ್ತು.
ಪ್ರಶ್ನೆ 45 - ವಿಧೇಯತ - ವಿಧೇಯಕ ಆಗಬೇಕಿತ್ತು.
ಪ್ರಶ್ನೆ 97- ಸ್ವಾಯಿಕ ಪುನರಂ- ಪುನರ್ ಪರಿಶೀಲನೆ ಆಗಬೇಕಿತ್ತು.
ಪ್ರಶ್ನೆ 85- ಅಮೇರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿ ಇರುವ ಮಸೂದೆಯನ್ನ ಇತ್ಯರ್ಥವಾಗದ ಅನಿರ್ಧಿಷ್ಟ ಕಾಲದ ವರೆಗೆ ಹಿಡಿದುಕೋಳ್ಳಬಹುದು- ಅನುವಾದ ತಪ್ಪಾಗಿದೆ. ಇದರಲ್ಲಿ ತಪ್ಪಾಗಿರುವ ಅಂಶವೇನೆಂದರೆ...ಅಮೇರಿಕಾದದಲ್ಲಿ ರಾಷ್ಟ್ರಪತಿ ಇಲ್ಲ.. ರಾಷ್ಟ್ರಾಧ್ಯಕ್ಷ ಇರುತ್ತಾರೆ.
ಇದನ್ನೂ ಓದಿ: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ ನೇಮಕಾತಿ: ಇಂದು ಮರು ಪರೀಕ್ಷೆ
ಪ್ರಶ್ನೆ ಪತ್ರಿಕೆಯಲ್ಲಿ ಉಂಟಾದ ಲೋಪದಿಂದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ ಎಂದು ನಾಗಣ್ಣ ಎನ್ನುವ ಅಭ್ಯರ್ಥಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತೊಮ್ಮೆ ಮರು ಪರೀಕ್ಷೆಯನ್ನು ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ.