5 ಲಕ್ಷ ರು. ಲಂಚ ಪಡೆದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿರುವ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಇಬ್ಬರು ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದ್ದಾರೆ.

ಬೆಂಗಳೂರು: ಗುತ್ತಿಗೆದಾರನಿಂದ 5 ಲಕ್ಷ ರು. ಲಂಚ ಪಡೆದ ಆರೋಪದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸೇರಿ ಮೂವರು ಆರೋಪಿಗಳು ಜಾಮೀನು ಕೋರಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಸಕ ಚಂದ್ರು ಲಮಾಣಿ ಸೇರಿ ಮೂವರು ಆರೋಪಿಗಳ ಪರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಕೀಲರು, ತುರ್ತಾಗಿ ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಗರಂ ಆದ ನ್ಯಾಯಾಧೀಶರು, ಟ್ರ್ಯಾಪ್‌ ಆಗಿರುವ ಪ್ರಕರಣದಲ್ಲಿ ಅರ್ಜಿ ತುರ್ತು ವಿಚಾರಣೆ ಮಾಡಬೇಕೆ? ನಿಮಗೆ ಯಾಕೆ ಜಾಮೀನು ನೀಡಬೇಕು ಎಂದು ಸಿಟ್ಟಾದರು.

ಈ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದ ನ್ಯಾಯಾಧೀಶರು, ಮುಂದಿನ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದರು.

ಪ್ರಕರಣದ ಹಿನ್ನೆಲೆ ಏನು?

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಯೊಂದರ ಸಂಬಂಧ ಶಾಸಕ ಚಂದ್ರು ಲಮಾಣಿ ಅವರು 11 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ ಆರೋಪದಡಿ ಪ್ರಥಮ ದರ್ಜೆ ಗುತ್ತಿಗೆದಾರ ವಿಜಯ್‌ ಪೂಜಾರ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಫೆ.21ರಂದು ಲಕ್ಷ್ಮೇಶ್ವರದ ಬಾಲಾಜಿ ಆಸ್ಪತ್ರೆಯಲ್ಲಿ 5 ಲಕ್ಷ ರು. ಲಂಚ ಸ್ವೀಕರಿಸುವಾಗ ಶಾಸಕ ಚಂದ್ರು ಲಮಾಣಿ, ಅವರ ಆಪ್ತ ಸಹಾಯಕ ಮಂಜುನಾಥ್‌ ವಾಲ್ಮೀಕಿ ಮತ್ತು ಖಾಸಗಿ ಆಪ್ತ ಸಹಾಯಕ ಗುರು ನಾಯ್ಕ್‌ ಗದಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಇದನ್ನೂ ಓದಿ: ಲಂಚ ಪಡೆದು ಶಾಸಕ ಲಮಾಣಿ ಜೈಲಿಗೆ, ಇದರ ಬೆನ್ನಲ್ಲೇ ಗುತ್ತಿಗೆದಾರನಿಗೆ ಧಮ್ಕಿ ಹಾಕೋ ಆಡಿಯೋ ವೈರಲ್, ಎಲ್ಲಾ ಬೀಪ್ ಸೌಂಡ್!

ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಚಂದ್ರು ಲಮಾಣಿ

ಬಳಿಕ ಲೋಕಾಯುಕ್ತ ಪೊಲೀಸರು ಮೂವರೂ ಆರೋಪಿಗಳನ್ನು ಫೆ.22ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮೂವರನ್ನೂ ಮಾ.3ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದರು. ಪ್ರಸ್ತುತ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಮೂವರು ಆರೋಪಿಗಳು ಇದೀಗ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ₹ 5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್‌ನಲ್ಲಿ ಲೋಕಾ ಖೆಡ್ಡಾಕ್ಕೆ!

YouTube video player