ಕೆಪಿಎಸ್‌ಸಿ ನಡೆಸುತ್ತಿದ್ದ ಕೆಎಎಸ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು; ಮತ್ತೊಮ್ಮೆ ಪರೀಕ್ಷೆ ಮಾಡ್ತೀರಾ?
ಓಎಂಆರ್ ಶೀಟ್‌ಗಳಲ್ಲಿ ನೋಂದಣಿ ಸಂಖ್ಯೆಗಳಲ್ಲಿನ ವ್ಯತ್ಯಾಸದಿಂದಾಗಿ ವಿಜಯಪುರದಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಗೊಂದಲದ ವಾತಾವರಣ ಶುರುವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ವಿಜಯಪುರ (ಡಿ.29): ರಾಜ್ಯಾದಾದ್ಯಂತ ಕರ್ನಾಟಕ ಲೋಕ ಸೇವಾ ಆಯೋಗದಿಂದ (ಕೆಪಿಎಸ್‌ಸಿ) ನಡೆಸಲಾಗುತ್ತಿರುವ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಶ್ರೇಣಿಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ನಡೆಸಲಾಗುತ್ತಿದ್ದ ಪರೀಕ್ಷೆಯಲ್ಲಿ ಭಾರೀ ಎಡವಟ್ಟು ನಡೆದಿದೆ. ಸುಮಾರು ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ನೀಡಲಾದ ಓಎಂಆರ್ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆಯೇ ಬದಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕಾರ ಮಾಡಿ ಎರಡು ಗಂಟೆಗಳ ಕಾಲ ಪರೀಕ್ಷೆ ಕೇಂದ್ರಗಳ ಹೊರಗೆ ಪ್ರತಿಭಟನೆ ಮಾಡಿದ್ದಾರೆ.
ವಿಜಯಪುರ ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಎಡವಟ್ಟು ನಡೆದು ಹೋಗಿದೆ. ಅಭ್ಯರ್ಥಿಗಳಿಗೆ ನೀಡಲಾದ ಓಎಂಅರ್ ಶೀಟ್ ನಲ್ಲಿ ನೋಂದಣಿ ಸಂಖ್ಯೆ ಅದಲು ಬದಲು ಆಗಿದ್ದು ಸಮಸ್ಯೆ ಉಲ್ಬಣಿಸಿದೆ. ನಗರದ ಸಿಕ್ಯಾಬ್ ಸಂಸ್ಥೆಯ ಎರಡು ಕೇಂದ್ರಗಳು, ಮರಾಠಿ ಮಹಾವಿದ್ಯಾಲಯ, ವಿಕಾಸ ವಿದ್ಯಾಲಯದಲ್ಲಿನ ನಾಲ್ಕು ಕೇಂದ್ರಗಳಲ್ಲಿ ಓಎಂಆರ್ ನಂಬರ್ ಹಾಗೂ ನೋಂದಣಿ ನಂಬರ್ ಬದಲಾವಣೆ ಆಗಿದೆ. ಇನ್ನು ಸಮಸ್ಯೆಯಾದ ಪರೀಕ್ಷಾ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ರಿಶಿ ಆನಂದ ಭೇಟಿ ಮಾಡಿ ಪರೀಕ್ಷಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ.
ಕೆಪಿಎಸ್‌ಸಿ ಅಧಿಕಾರಿಗಳ ಜೊತೆಗೆ ಮಾತನಾಡಿದ ಎಡಿಸಿ ಹಾಗೂ ಜಿಪಂ ಸಿಇಓ ಅವರಿಗೆ ಈಗ ಪರೀಕ್ಷೆಯನ್ನು ನಡೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳ ನೋಂದಣಿ ನಂಬರ್ ಅನ್ನು ಓಎಂಆರ್ ಶೀಟ್ ನಲ್ಲಿ ಪ್ರತ್ಯೇಕವಾಗಿ ಕೆಪಿಎಸ್‌ಸಿ ಅಧಿಕಾರಿಗಳು ನೋಂದಾಯಿಸಿಲು ಸಲಹೆ ನೀಡಿದ್ದಾರೆ. ಓಎಂಆರ್ ಶೀಟ್ ನಲ್ಲಿ ಪರೀಕ್ಷಾರ್ಥಿಗಳ ನೋಂದಣಿ ನಂಬರ್ ನಮೂದಿಸಲು ಸೂಚನೆ ನೀಡಿದ್ದಾರೆ. ಕೆಪಿಎಸ್‌ಸಿ ಅಧಿಕಾರಿಗಳು ನೀಡಿದ ಸಲಹೆಯನ್ನು ಪಾಲಿಸುವಂತೆ ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಪರೀಕ್ಷಾರ್ಥಿಗಳಿಗೆ ಹೇಳಿದ್ದಾರೆ. ಜೊತೆಗೆ, ಇನ್ನು ಪರೀಕ್ಷೆ ಎಷ್ಟು ಸಮಯದವರಗೆ ವಿಳಂಬ ಆಗಿದೆಯೋ ಅಷ್ಟು ಹೆಚ್ಚುವರಿ ಸಮಯ ನೀಡಲಾಗುವುದು ಎಂದು ಹೇಳುವ ಮೂಲಕ ಪರೀಕ್ಷಾರ್ಥಿಗಳ ಸಮಸ್ಯೆ ಬಗೆ ಹರಿಸಿ ಪರೀಕ್ಷೆ ಬರೆಯುವಂತೆ ಮನವೊಲಿಕೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ ನೇಮಕಾತಿ: ಇಂದು ಮರು ಪರೀಕ್ಷೆ
ಇನ್ನು ಜಿಲ್ಲಾಡಳಿತದ ಅಧಿಕಾರಿಗಳ ಸ್ಪಷ್ಟನೆಗೆ ಒಪ್ಪಿದ ಸಾವಿರಾರು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ತೆರಳಿದ್ದಾರೆ. ಗೆಜೆಟೆಡ್ ಪ್ರೋಫೇಷನರಿ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆಯಿಂದ ಹೊರಗೆ ಬಂದಿದ್ದ ಸಾವಿರಾರು ಪರೀಕ್ಷಾರ್ಥಿಗಳು ಇದೀಗ ಪುನಃ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಒಟ್ಟಾರೆ ವಿಜಯಪುರ ಜಿಲ್ಲೆಯಾದ್ಯಂತ 32 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳು ನಡೆಯುತ್ತಿದ್ದು, 12,741 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ನಾಲ್ಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವಾಗ ಎಡವಟ್ಟು ಸಂಭವಿಸಿದ್ದು, ಈ ಕೇಂದ್ರಗಳಲ್ಲಿ ಸುಮಾರು 2 ಗಂಟೆಗಳ ಕಾಲ ಪರೀಕ್ಷೆ ನಡೆಯುವುದು ವಿಳಂಬವಾಗಿದೆ.