ಒಟ್ಟು 2.109 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿಸಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದ ಕರ್ನಾಟಕ ಲೋಕಸೇವಾ ಆಯೋಗ
ಬೆಂಗಳೂರು(ಡಿ.29): ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಇಂದು(ಭಾನುವಾರ) ರಾಜ್ಯದ 553 ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವಭಾವಿ ಮರುಪರೀಕ್ಷೆ ನಡೆಸಲಿದೆ.
ಆ.27ರಂದು ನಡೆದ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮತ್ತು ವಾಕ್ಯ ರಚನೆಯಲ್ಲಿ ಲೋಪ, ಅಸಂಬದ್ಧ ವಾಕ್ಯ ರಚನೆ ಸೇರಿ ಅನೇಕ ತಪ್ಪುಗಳು ಕಂಡುಬಂದಿದ್ದವು.
ಈ ಕುರಿತು ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಹಾಗೂ ಸಾಹಿತಿಗಳು, ಕನ್ನಡಪರ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮರುಪರೀಕ್ಷೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಆ.27ರಂದು ನಡೆಸಿದ್ದ ಪರೀಕ್ಷೆಯನ್ನು ರದ್ದುಪಡಿಸಿ ಡಿ.29ಕ್ಕೆ ಮರುಪರೀಕ್ಷೆ ನಡೆಸುತ್ತಿದೆ.
ಪಿಡಿಒ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನಲಾದ ವಿಡಿಯೋ ಹಂಚಿಕೊಂಡ ಅಭ್ಯರ್ಥಿಗಳು
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ಲೋಕಸೇವಾ ಆಯೋಗ, ಒಟ್ಟು 2.109 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿಸಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದೆ.
ವಿಕಲಚೇತನ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳಿಗೆ ಪಕ್ಕದ ಜಿಲ್ಲೆಗಳಲ್ಲಿನ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಲ್ ಟಿಕೆಟ್‌ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ನಿಯಮಗಳನ್ನು ಪಾಲಿಸಬೇಕು.
ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ಸ್ ವಸ್ತುಗಳು, ತುಂಬು ತೋಳಿನ ವಸ್ತ್ರಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸರಳ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಕೆಪಿಎಸ್‌ಸಿ ಸೂಚಿಸಿದೆ.
