ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ನೆಪದಲ್ಲಿ ಎರಡನೇ ಬೆಳೆಗೆ ನೀರು ಬಿಡದಿರಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಈ ನಿರ್ಧಾರದಿಂದ ಕೊಪ್ಪಳ, ರಾಯಚೂರು, ವಿಜಯನಗರ ಭಾಗದ ಲಕ್ಷಾಂತರ ರೈತರು ಆತಂಕಕ್ಕೊಳಗಾಗಿದ್ದು, ರೈತ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಹೋರಾಟದ ಎಚ್ಚರಿಕೆ ನೀಡಿವೆ.

ಬೆಂಗಳೂರು/ಕೊಪ್ಪಳ, (ನ.14): ತುಂಗಭದ್ರಾ ಡ್ಯಾಂನಿಂದ ಎರಡನೆಯ ಬೆಳೆಗೆ ನೀರು ಬಿಡದಿರಲು ನಿರ್ಣಯ ಕೈಗೊಳ್ಳುವ ಮೂಲಕ ಕೊಪ್ಪಳ ರಾಯಚೂರು, ವಿಜಯನಗರ ಭಾಗದ ರೈತರಿಗೆ ಟಿಬಿ ಡ್ಯಾಂ ಸಲಹಾ ಸಮಿತಿ ಶಾಕ್ ನೀಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಟಿಬಿ ಡ್ಯಾಂನ ನೀರಾವರಿ ಸಲಹಾ ಸಮಿತಿಯ ಸಭೆ ನಡೆದಿದ್ದು. ಸಭೆಯಲ್ಲಿ ಎರಡನೇ ಬೆಳೆಗೆ ನೀರು ಬಿಡದ ನಿರ್ಧಾರ ಕೈಗೊಳ್ಳಲಾಗಿದೆ. ಡ್ಯಾಂನ ಗೇಟ್‌ಗಳ ಬದಲಾವಣೆಯ ಹಿನ್ನೆಲೆಯಲ್ಲಿ ಎರಡನೆ ಬೆಳೆಗೆ ನೀರು ಬಿಡದಿರಲು ತೀರ್ಮಾನಿಸಲಾಗಿದೆ.

ರೈತ ಸಂಘಟನೆಗಳು ಆಕ್ರೋಶ:

ರಾಜ್ಯಾದ್ಯಂತ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಡ್ಯಾಂಗಳು ತುಂಬಿದ್ದರೂ ಗೇಟ್ ದುರಸ್ತಿ ನೆಪದಲ್ಲಿ ಎರಡನೇ ಬೆಳೆಗೆ ನೀರು ಬಿಡದಿರಲು ನಿರ್ಧರಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನ ರೈತ ಸಂಘಟನೆಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ಬಿಜೆಪಿಯಿಂದಲೂ ಹೋರಾಟದ ಎಚ್ಚರಿಕೆ:

ಎರಡನೆ ಬೆಳೆಗೆ ನೀರು ಬಿಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿರುವ ಬಿಜೆಪಿ, ರಾಜ್ಯ ಸರ್ಕಾರದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ರೈತರ ಹಕ್ಕುಗಳಿಗಾಗಿ ನಾವು ಹೋರಾಡುತ್ತೇವೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನಾವು ರೈತರೊಂದಿಗೆ ಬೀದಿಗಳಿದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ನಾಳೆ ವಿಜಯೇಂದ್ರ ನೇತೃತ್ವದಲ್ಲಿ ರೈತರೊಂದಿಗೆ ಸಭೆ:

ನಾಳೆ (ನ.15) ಬೆಂಗಳೂರಿನಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಸಭೆಯು ಮುಂದಿನ ಹೋರಾಟದ ರೂಪರೇಖೆ ರೂಪಿಸುವ ಸಾಧ್ಯತೆಯಿದೆ. ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಂಡು, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಯೋಜನೆಗಳನ್ನು ಘೋಷಿಸಬಹುದು.

ರೈತರ ಆತಂಕ: ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯ ಲಕ್ಷಾಂತರ ರೈತರು ಎರಡನೇ ಬೆಳೆಗೆ ಟಿಬಿ ಡ್ಯಾಂ ನೀರು ಜೀವನಾಡಿಯಾಗಿದೆ. ಆದರೆ ಈ ಬಾರಿ ಗೇಟ್ ದುರಸ್ತಿ ನೆಪದಲ್ಲಿ ನೀರು ಬಿಡದಿರಲು ನಿರ್ಣಯ ತೆಗೆದುಕೊಂಡಿರುವ ಹಿನ್ನೆಲೆ ರೈತರ ಆತಂಕಕ್ಕೊಳಗಾಗಿದ್ದಾರೆ. ನೀರು ಬಿಡದಿದ್ದಲ್ಲಿ ರೈತರಿಗೆ ಆರ್ಥಿಕ ನಷ್ಟವಾಗಬಹುದು. ಸ್ಥಳೀಯ ರೈತರು ಈಗಾಗಲೇ ಪ್ರತಿಭಟನೆಗಳನ್ನು ನಡೆಸುತ್ತಿದ್ದರೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.