ಕೊಪ್ಪಳ: ಎರಡನೇ ಬೆಳೆಗೆ ನೀರು ಬಿಡೋದು ಡೌಟ್, ರೈತರಲ್ಲಿ ಆತಂಕ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿದ ಆತಂಕ|ಸ ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರಕ್ಕೆ ಮೀನಮೇಷ| ಜಲಾಶಯದಲ್ಲಿ ನೀರಿನ ಪ್ರಮಾಣ ಕುಂಠಿತ| ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಸಂಪೂರ್ಣ ಸ್ಥಗಿತ| ಜಲಾಶಯದಲ್ಲಿ ಕೇವಲ 77 ಟಿಎಂಸಿ ಮಾತ್ರ ನೀರು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.28): ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ ನೀರು ದೊರೆಯಲಿದೆ ಎಂದು ಕನಸು ಕಂಡಿದ್ದ ರೈತರಿಗೆ ಜಲಾಶಯದಲ್ಲಿ ನೀರಿನ ಪ್ರಮಾಣ ನಿರೀಕ್ಷೆಯಷ್ಟು ಉಳಿಯದೆ ಇರುವುದು ಆತಂಕ ಮೂಡಿಸಿದೆ.
ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರಕ್ಕೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿಯೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ. ಈ ಕುರಿತು ಪ್ರತ್ಯೇಕವಾಗಿ ಜನವರಿಯಲ್ಲಿ ಸಭೆ ಕರೆಯುವುದಾಗಿ ಉಪಮುಖ್ಯಮಂತ್ರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು. ಆದರೆ, ರೈತರು ಜನವರಿಯಲ್ಲಿ ಸಭೆ ಕರೆದು ನಿರ್ಧಾರ ಮಾಡಿದರೆ ಸಮಸ್ಯೆಯಾಗುತ್ತದೆ. ಡಿಸೆಂಬರ್ ತಿಂಗಳಲ್ಲಿಯೇ ನಿರ್ಧಾರ ಪ್ರಕಟಿಸಿ ಎಂದು ಆಗ್ರಹಿಸಿದ್ದರು. ಆದರೆ, ಸಚಿವರು ಇದವರೆಗೂ ರೈತರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಹಿಂಗಾರು ಬೆಳೆಗೂ ನೀರು ನೀಡಲಾಗುವುದು: ಡಿಸಿಎಂ ಸವದಿ
ತುಂಗಭದ್ರಾ ಜಲಾಶಯದಲ್ಲಿ ಶುಕ್ರವಾರದಿಂದ ಒಳಹರಿವು ಸಂಪೂರ್ಣ ಸ್ಥಗಿತವಾಗಿದೆ. ಜಲಾಶಯದಲ್ಲಿ ಕೇವಲ 77 ಟಿಎಂಸಿ ನೀರು ಮಾತ್ರ ಇದ್ದು ಇದರಲ್ಲಿ ಕುಡಿಯುವ ನೀರಿಗಾಗಿ 10 ಟಿಎಂಸಿ ಹಾಗೂ ಜಲಚರ ಪ್ರಾಣಿಗಳಿಗೆ ಡೆಡ್‌ಸ್ಟೋರೇಜ್ 2 ಟಿಎಂಸಿ ಹಾಗೂ ಆಂಧ್ರಪ್ರದೇಶದ ಕೋಟಾವನ್ನು ತೆಗೆದ ಬಳಿಕ ರಾಜ್ಯಕ್ಕೆ ಉಳಿಯುವ ನೀರಿನ ಪ್ರಮಾಣ ಹೆಚ್ಚು ಕಡಿಮೆ 45-50 ಟಿಎಂಸಿ ಮಾತ್ರ. ಆದರೆ, ಅಚ್ಚುಕಟ್ಟು ಪ್ರದೇಶದ ನೀರಾವರಿಗೆ ಎರಡನೇ ಬೆಳೆಗೆ ಸರಿಸುಮಾರು 65-70 ಟಿಎಂಸಿ ನೀರು ಬೇಕಾಗುತ್ತದೆ. ಈಗ ಜಲಾಶಯದಲ್ಲಿರುವ ನೀರಿನ ಲೆಕ್ಕಚಾರದಲ್ಲಿ ಸಾಲುವುದಿಲ್ಲ ಎಂಬುವುದು ರೈತರ ಆತಂಕವನ್ನು ಇಮ್ಮಡಿಗೊಳಿಸಿದೆ.
ಘೋಷಣೆಗೆ ಇಲ್ಲ ಪಕ್ಕಾ ಲೆಕ್ಕ:
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾಚ್‌ರ್ 30ರ ವರೆಗೂ ಎರಡನೇ ಬೆಳೆಗೆ ನೀರು ಬಿಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಸಭೆಯ ಬಳಿಕ ರೈತರು ಏಪ್ರಿಲ್ 30ರ ವರೆಗೂ ನೀರು ಬಿಡುವಂತೆ ಆಗ್ರಹಿಸಿ ಧರಣಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಏಪ್ರಿಲ್ 30ರ ವರೆಗೂ ನೀರು ಬಿಡಲಾಗುವುದು ಎಂದು ಸಹ ಘೋಷಿಸಿದ್ದರು. ಆದರೆ, ವಾಸ್ತವದಲ್ಲಿ ಇರುವ ನೀರಿನ ಲೆಕ್ಕಚಾರದಲ್ಲಿ ಎರಡನೇ ಬೆಳೆಗೆ ನೀರು ಎಷ್ಟನೇ ದಿನಾಂಕದವರೆಗೂ ನೀಡಬಹುದು ಎನ್ನುವುದನ್ನು ನೀರಾವರಿ ಸಲಹಾ ಸಮಿತಿ ಮತ್ತೊಮ್ಮೆ ಅಧಿಕೃತವಾಗಿ ಘೋಷಿಸಬೇಕಿದೆ.
ಪದೇ ಪದೆ ಸಮಸ್ಯೆ:
ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 34 ಟಿಎಂಸಿ ಹೂಳು ತುಂಬಿಕೊಂಡಿದೆ. ಇದರಿಂದ ಸಮಸ್ಯೆಯಾಗಿದ್ದು, ಸಂಗ್ರಹಣಾ ಸಾಮರ್ಥ್ಯ ಕುಸಿದಿರುವುದರಿಂದ ನೀರು ಪ್ರತಿ ವರ್ಷವೂ ಕಡಿಮೆಯಾಗುತ್ತಲೇ ಇದೆ. ಈಗಾಗಲೇ ಕಳೆದ ನಾಲ್ಕಾರು ವರ್ಷಗಳಿಂದ ಎರಡನೇ ಬೆಳೆಗೆ ಸರಿಯಾಗಿ ನೀರು ದಕ್ಕುತ್ತಲೇ ಇಲ್ಲ. ಕಳೆದ ನಾಲ್ಕು ವರ್ಷವಂತೂ ಎರಡನೇ ಬೆಳೆಗೆ ನೀರನ್ನೇ ಬಿಟ್ಟಿಲ್ಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ನೀರು ಬಿಡುವ ಕುರಿತು ಅಂತಿಮವಾಗಿ ನಿರ್ಧರಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ರೈತರು ಆಗ್ರಹಿಸಿದ್ದಾರೆ. ನಾಲ್ಕು ವರ್ಷಗಳ ನಂತರ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿದ್ದು, ಈ ಬಾರಿಯಾದರೂ ವೈಜ್ಞಾನಿಕವಾಗಿ ನೀರು ಹಂಚಿಕೆ ಮಾಡುವ ಮೂಲಕ ಎರಡನೇ ಬೆಳೆಗೆ ನೀರು ಬಿಡುವಂತೆ ರೈತರು ಆಗ್ರಹಿಸಿದ್ದಾರೆ.
ತುಂಗಭದ್ರಾ ಜಲಾಶಯ
ವಿವರ 27.12.2019 27.12.2018
ಒಳಹರಿವು 00 000 ಕ್ಯುಸೆಕ್
ಹೊರಹರಿವು 4643 7550 ಕ್ಯುಸೆಕ್
ಗರಿಷ್ಠ ಮಟ್ಟ 1633.00 1633.00 ಅಡಿ
ಇಂದಿನಮಟ್ಟ 1626.48 1608.14 ಅಡಿ
ಗರಿಷ್ಠ ಸಾಮರ್ಥ್ಯ 100.855 100.855 ಟಿಎಂಸಿ
ಇಂದಿನ ಸಾಮರ್ಥ್ಯ 77.961 31.82 ಟಿಎಂಸಿ
ಎರಡನೇ ಬೆಳೆಗೆ ನೀರು ಬಿಡುವ ಕುರಿತು ಕೂಡಲೇ ನಿರ್ಧರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸ್ಪಷ್ಟನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದ್ದು, ಮತ್ತೊಮ್ಮೆ ಸಭೆ ಕರೆದು ನಿರ್ಧಾರ ಪ್ರಕಟಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಜನಾರ್ದನ ಹುಲಿಗಿ ಅವರು ಹೇಳಿದ್ದಾರೆ.