ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಬಿಡದಿದ್ದರೆ ಡ್ಯಾಂಗೆ ಜಿಗಿದು ಆತ್ಮ೧ಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ಶ್ರೀರಾಮುಲು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಡ್ಯಾಂ ಗೇಟ್ ದುರಸ್ತಿ ಕಾರಣ ನೀರು ಬಿಡಲು ಸಾಧ್ಯವಿಲ್ಲ ಎಂದಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ.
ಕೊಪ್ಪಳ, (ನವೆಂಬರ್ 14): ತುಂಗಭದ್ರಾ ಜಲಾಶಯ ಯಾರ ಆಸ್ತಿಯೂ ಅಲ್ಲ. ಜಲಾಶಯದಲ್ಲಿ ನೀರಿದ್ದರೂ ಎರಡನೇ ಬೆಳೆಗೆ ನೀರು ಕೊಡದಿದ್ದರೆ ಅದೇ ಡ್ಯಾಂಗೆ ಜಿಗಿದು ಆತ್ಮ೧ಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ.
ಮುನಿರಾಬಾದ್ ಬಳಿ ಟಿಬಿ ಡ್ಯಾಂನಿಂದ 2ನೇ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ಬಾರಿ ಎರಡು ಬೆಳೆಗೆ ನೀರು ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಸಮಸ್ಯೆಯಾಗುತ್ತದೆ. ಈಗ ನೀರಿದ್ದರೂ ಬಿಡುವುದಿಲ್ಲ ಎಂದರೆ ಸುಮ್ಮನೆ ಕೂರಲೂ ಆಗುವುದಿಲ್ಲ ಎಂದರು.
ರೈತರ ಹಿತಕ್ಕಾಗಿ ಎಂಥ ಹೋರಾಟಕ್ಕೂ ಸಿದ್ಧ :
ರೈತರ ಹಿತರಕ್ಷಣೆಗಾಗಿ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಶ್ರೀರಾಮುಲು ಘೋಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ರೈತರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿ, ಶೀಘ್ರ ನೀರು ಬಿಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ತುಂಗಭದ್ರಾ ಜಲಾಶಯದ ನೀರಿನ ನಿರ್ವಹಣೆಯ ಬಗ್ಗೆ ರಾಜಕೀಯ ವಲಯದಲ್ಲಿ ಈಗ ಚರ್ಚೆಯೇ ಚುರುಕಾಗಿದೆ.
ಎರಡನೇ ಬೆಳೆಗೆ ನೀರು ಇಲ್ಲ ಎಂದಿದ್ದ ಸಚಿವ ತಂಗಡಗಿ:
ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳ ದುರಸ್ತಿ ಕಾರಣದಿಂದಾಗಿ ಈ ಬಾರಿ ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಲು ಸಾಧ್ಯವಿಲ್ಲ ಎಂದು ನೀರಾವರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದರು. ಜಲಾಶಯದ ಕೆಲವು ಗೇಟ್‌ಗಳು ದುರ್ಬಲಗೊಂಡು ತುಕ್ಕು ಹಿಡಿದಿವೆ, ದುರಸ್ತಿ ಕಾರ್ಯ ಹಿನ್ನೆಲೆ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಲಕ್ಷಾಂತರ ರೈತರು ಆತಂಕದಲ್ಲಿದ್ದಾರೆ.
