ಕೋಡಿಮಠದ ಶ್ರೀಗಳು ಹಾವೇರಿಯಲ್ಲಿ ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದಿದ್ದು, ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಏಳುವ ಸೂಚನೆ ನೀಡಿದ್ದಾರೆ. ಇಬ್ಬರು ಪ್ರಭಾವಿ ನಾಯಕರ ಅಂತ್ಯದ ಮುನ್ಸೂಚನೆ ಹಾಗೂ ಯುಗಾದಿ ನಂತರ ಸಾವು-ನೋವು ಹೆಚ್ಚಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಹಾವೇರಿ (ಡಿ.28): ಅಧ್ಯಾತ್ಮ ಮತ್ತು ಭವಿಷ್ಯವಾಣಿ ನುಡಿಯುವಲ್ಲ ಹೆಸರುವಾಸಿಯಾಗಿರುವ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹಾವೇರಿಯಲ್ಲಿ ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ. ದೇಶದ ರಾಜಕೀಯ ಸ್ಥಿತ್ಯಂತರ ಮತ್ತು ಜಾಗತಿಕ ಅವಘಡಗಳ ಬಗ್ಗೆ ಶ್ರೀಗಳು ನೀಡಿದ ಸುಳಿವು ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಜೆಟ್ ಬಳಿಕ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ!

ಸಿಎಂ ಗದ್ದುಗೆ ಗುದ್ದಾಟದ ಬಗ್ಗೆ ಮಾತನಾಡಿದ ಶ್ರೀಗಳು, ಬಜೆಟ್ ಮಂಡನೆಯಾಗುವವರೆಗೆ ಮುಖ್ಯಮಂತ್ರಿ ಕುರ್ಚಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಬಜೆಟ್ ಮುಗಿದ ನಂತರ ಅವರಾಗಿಯೇ ಅಧಿಕಾರ ಬಿಟ್ಟರೆ ಮಾತ್ರ ಬೇರೆಯವರಿಗೆ ಸಿಎಂ ಆಗುವ ಯೋಗವಿದೆ ಎಂದು ಮಾರ್ಮಿಕವಾಗಿ ಹೇಳಿದರು. ಈ ಹಿಂದೆ ನುಡಿದಿದ್ದ 'ಅಂಬಲಿಯು ಹಳಸೀತು, ಕಂಬಳಿಯು ಹಾಸೀತು' ಎಂಬ ಮಾತನ್ನು ನೆನಪಿಸಿದ ಶ್ರೀಗಳು, ರಾಜಕೀಯ ಬದಲಾವಣೆಯ ಕಾರ್ಮೋಡಗಳು ಕವಿದಿವೆ ಎಂದರು.

'ಹಾಲುಮತದ ಕೈಯಿಂದ ಅಧಿಕಾರ ಬಿಡಿಸುವುದು ಕಷ್ಟ!'

ಕುರುಬ ಸಮಾಜದ ದೈವಿ ಬಲದ ಬಗ್ಗೆ ಮೆಚ್ಚುಗೆ ಮಾತನಾಡಿದ ಶ್ರೀಗಳು, 'ಹಕ್ಕು-ಬುಕ್ಕರು ವಿಜಯನಗರವನ್ನು ಉಳಿಸಿದರು, ರಾಯಣ್ಣ ಕಿತ್ತೂರನ್ನು ಉಳಿಸಿದರು. ಹಾಲುಮತ ಸಮಾಜವು ಪ್ರಕೃತಿಯಲ್ಲೇ ಭವಿಷ್ಯವನ್ನು ಕಂಡುಕೊಂಡ ಪುರಾತನ ಮತ್ತು ದೈವಿ ಬಲವುಳ್ಳ ಮತ. ಅಂತಹ ಹಾಲುಮತದವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಅಷ್ಟು ಸುಲಭವಲ್ಲ. ರಾಜ-ಮಹಾರಾಜರ ಕಾಲದಿಂದಲೂ ಜ್ಯೋತಿಷ್ಯಕ್ಕೆ ಇರುವ ಮಹತ್ವವನ್ನು ತಿಳಿಸಿದರು.

ಶಿವನ ಬಲಪಾದದಿಂದ ಬಿದ್ದ ಹೂವು: ಇಬ್ಬರು ನಾಯಕರ ಅಂತ್ಯ?

ಶ್ರೀಗಳು ನುಡಿದ ಒಂದು ಸಾಂಕೇತಿಕ ಭವಿಷ್ಯ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. 'ಶಿವನ ಮುಡಿಯ ಮಲ್ಲಿಗೆ ಹೂವುಗಳು ಬಲಪಾದದಿಂದ ಕೆಳಗೆ ಬಿದ್ದಿವೆ. ಇಬ್ಬರು ದೊಡ್ಡ ವ್ಯಕ್ತಿಗಳು ಶಿವನ ಪಾದ ಸೇರಲಿದ್ದಾರೆ' ಎಂದು ಹೇಳುವ ಮೂಲಕ ಪ್ರಭಾವಿ ನಾಯಕರೊಬ್ಬರ ಸಾವು ಅಥವಾ ರಾಜಕೀಯ ಅಂತ್ಯದ ಮುನ್ಸೂಚನೆ ನೀಡಿದ್ದಾರೆ. ಅರಮನೆಗೆ ಕಾರ್ಮೋಡ ಕವಿಯಲಿದೆ ಎಂದು ಈ ಹಿಂದೆಯೇ ಎಚ್ಚರಿಸಿದ್ದನ್ನು ಅವರು ಪುನರುಚ್ಚರಿಸಿದ್ದಾರೆ.

ಯುಗಾದಿ ನಂತರ ಸಾವು-ನೋವಿನ ಭೀಕರ ಅಟ್ಟಹಾಸ!

ಕೇವಲ ರಾಜಕೀಯ ಮಾತ್ರವಲ್ಲದೆ ಪ್ರಕೃತಿ ವಿಕೋಪದ ಬಗ್ಗೆಯೂ ಶ್ರೀಗಳು ಎಚ್ಚರಿಸಿದ್ದಾರೆ. 'ಡಿಸೆಂಬರ್ ನಂತರ ಸಾವು-ನೋವುಗಳು ಹೆಚ್ಚಾಗಲಿವೆ. ಯುಗಾದಿ ಕಳೆದ ಮೇಲೆ ಇದು ಇನ್ನೂ ಭೀಕರವಾಗಲಿದೆ. 2026ರ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದಿದ್ದಾರೆ. ಚೀನಾದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ಪ್ರಧಾನಮಂತ್ರಿಗಳು ಬದುಕುಳಿದಿದ್ದೇ ದೊಡ್ಡ ವಿಷಯ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.