Kodimath Swamiji latest predictions: ಕೋಡಿಮಠದ ಶ್ರೀಗಳು ಮಲೆನಾಡು ಬಯಲುಸೀಮೆಯಾಗುವ, ಬಯಲುಸೀಮೆ ಮಲೆನಾಡಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿವರೆಗೆ ಯಾವುದೇ ತೊಂದರೆಯಿಲ್ಲ ಎಂದಿರುವ ಅವರು, ಜಾತಿ ಸಮೀಕ್ಷೆಯ ಬಗ್ಗೆ ಜನರು ತಾವೇ ನಿರ್ಧರಿಸುತ್ತಾರೆ ಎಂದಿದ್ದಾರೆ

ಧಾರವಾಡ (ಅ.1): ಮಲೆನಾಡು ಬಯಲುಸೀಮೆಯಂತಾಗುತ್ತದೆ, ಬಯಲುಸೀಮೆ ಮಲೆನಾಡಿನಂತಾಗಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದರು.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ಚಾಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ದಸರಾ ಹಬ್ಬದ ಮಹತ್ವದ ವಿವರಿಸಿದ ಶ್ರೀಗಳು, ದೇಶದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದಸರಾದ ನಿಜವಾದ ಅರ್ಥವೆಂದರೆ ದುಷ್ಟ ಶಕ್ತಿಗಳನ್ನು ದೂರವಿಡುವುದು, ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವುದು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಈ ದೃಷ್ಟಿಯಿಂದ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಶ್ರೀಗಳ ಭವಿಷ್ಯ:

ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಬಗ್ಗೆಯೂ ಭವಿಷ್ಯ ನುಡಿದ ಶ್ರೀಗಳು, ಸಿದ್ಧರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಇಲ್ಲ, ಭಯವಿಲ್ಲ. ಉಳಿದದ್ದನ್ನು ಸಂಕ್ರಾಂತಿಯ ನಂತರ ನೋಡಿ ಹೇಳಬೇಕು ಎಂದರು. ಈ ಹಿಂದೆ ತಾವು ಭವಿಷ್ಯ ನುಡಿದಂತೆ ಬಯಲುಸೀಮೆಯಲ್ಲಿ ಮಳೆಯಾಗಿದೆ ಎಂದರು. 'ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಬಯಲು ಸೀಮೆ ಮಲೆನಾಡು ಮಳೆ ಎಂದು ಹೇಳಿದ್ದೆ. ಮಲೆನಾಡು ಬಯಲು ಸೀಮೆ ಆಗುತ್ತೆ ಎಂದಿದ್ದೆ. ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂದರು.

ಜಾತಿ ಸಮೀಕ್ಷೆ ಬಗ್ಗೆ ಕೋಡಿಶ್ರೀಗಳು ಹೇಳಿದ್ದೇನು?

ರಾಜ್ಯದ ಜಾತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೋಡಿಶ್ರೀಗಳು ರಾಜ್ಯದ ಜನರು ದಡ್ಡರಲ್ಲ, ಬಹಳ ಬುದ್ಧಿವಂತರಿದ್ದಾರೆ, ಜ್ಞಾನಿಗಳಿದ್ದಾರೆ, ತಿಳುವಳಿಕೆಯುಳ್ಳವರಿದ್ದಾರೆ. ಜನರಿಗೆ ಯಾವುದು ಬೇಕೋ ಅದನ್ನು ಅವರೇ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋಡಿಮಠದ ಶ್ರೀಗಳು ಯಾರು?

ಕೋಡಿಮಠದ ಶ್ರೀಗಳು ಹಾಸನ ಜಿಲ್ಲೆಯ ಅರಸಿಕೇರೆಯಲ್ಲಿರುವ ಕೋಡಿಮಠದ ಮಠಾಧಿಪತಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ತಾಳೆಗರಿ (ಪಾಮ್ ಲೀಫ್) ನೋಡಿ ಭವಿಷ್ಯ ನುಡಿಯುವಲ್ಲಿ ಪ್ರಸಿದ್ಧರಾಗಿದ್ದಾರೆ. ಈ ಹಿಂದೆ ಶ್ರೀಗಳು ನುಡಿದಿರುವ ಭವಿಷ್ಯಗಳು ನಿಜವಾಗಿವೆ. ಕರ್ನಾಟಕದ ರಾಜಕೀಯ, ಹವಾಮಾನ, ದೇಶ-ವಿಶ್ವದ ಘಟನೆಗಳ ಬಗ್ಗೆ ನಿಖರ ಭವಿಷ್ಯಗಳನ್ನು ಹೇಳಿ ಜನಪ್ರಿಯರಾಗಿದ್ದಾರೆ. ಯುಗಾದಿ, ಸಂಕ್ರಾಂತಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಮಳೆ-ಬೆಳೆ, ಸರ್ಕಾರದ ಸ್ಥಿರತೆ, ನಾಯಕರ ಅಪಮೃತ್ಯುಗಳು, ನೈಸರ್ಗಿಕ ವಿಪತ್ತುಗಳು ಸೇರಿದಂತೆ ಶುಭ-ಅಶುಭ ಭವಿಷ್ಯಗಳನ್ನು ನುಡಿ, ಜನರಲ್ಲಿ ಕುತೂಹಲ ಮೂಡಿಸುತ್ತಾರೆ; ಅವರ ನುಡಿಗಳು ಹಲವೊಮ್ಮೆ ನಿಜವಾಗಿ ಸಾರ್ವಜನಿಕ ಚರ್ಚೆಗೆ ಕಾರಣವಾಗಿವೆ.