2024-25ನೇ ಸಾಲಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು 36.24 ಕೋಟಿ ರೂ. ಆದಾಯ ಗಳಿಸಿ, ರಾಜ್ಯದ ಮುಜರಾಯಿ ದೇವಾಲಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಮೂರೂವರೆ ಕೋಟಿ ರೂ. ಹೆಚ್ಚಳವಾಗಿವೆ.
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 2024-25 ರ ಸಾಲಿನಲ್ಲಿ 36,24,791,35 ರು. ಆದಾಯ ದಾಖಲಿಸಿದ್ದು ಮುಜರಾಯಿ ದೇವಾಲಯಗಳ ರಾಜ್ಯದ ಈ ವರುಷದ ಆದಾಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡಿ ಬೆಟ್ಟ ಮೊದಲ ಮೂರು ಸ್ಥಾನಗಳಲ್ಲಿದೆ. ಕಳೆದ ವರ್ಷ 2023-24 ರಲ್ಲಿ ಆದಾಯ 32.53 ಕೋಟಿ ಆಗಿದ್ದು, ಈ ವರ್ಷ ಮೂರೂವರೆ ಕೋಟಿ ರು. ಆದಾಯ ಹೆಚ್ಚಾಗಿದೆ.
ವಿವಿಧ ಸೇವೆಗಳಿಂದ 12 ಕೋಟಿ, ಕೋಣೆ ಬಾಡಿಗೆಯಿಂದ 70 ಲಕ್ಷ ರು., ಕಟ್ಟಡ ಬಾಡಿಗೆಯಿಂದ 44 ಲಕ್ಷ, ಅನ್ನದಾನ, ವಿದ್ಯಾದಾನ ಕಾಣಿಕೆ ಮತ್ತು ಹುಂಡಿಯಿಂದ 6 ಕೋಟಿ ರು., ಕಾಣಿಕೆ ಹುಂಡಿಯಿಂದ 6.30 ಕೋಟಿ, ಇ-ಹುಂಡಿಯಿಂದ 24 ಲಕ್ಷ, ಯಕ್ಷಗಾನ ಮೇಳದ ಕಾಣಿಕೆ, ತತ್ಕಾಲ್, ನೋಂದಣಿ, ಹುಂಡಿಗಳಿಂದ 1.83 ಕೋಟಿ ರು., ಶೀಘ್ರ ದರ್ಶನದಿಂದ 14 ಲಕ್ಷ ರು., ಶೇಷ ವಸ್ತ್ರ ಮಾರಾಟದಿಂದ 1.62 ಕೋಟಿ ರು., ಚಿನ್ನದ ರಥೋತ್ಸವ ಕಾಣಿಕೆಯಿಂದ 6.40 ಲಕ್ಷ ರು., ಹಣ್ಣುಕಾಯಿ ಕೌಂಟರ್, ಸೀರೆ ಫೋಟೊ ಕೌಂಟರ್ ಹಾಗೂ ನಂದಿನಿ ಮಿಲ್ಕ್ ಪಾರ್ಲರ್ ಸಾಮಾಗ್ರಿ ಮಾರಾಟದಿಂದ 82 ಲಕ್ಷ ರು., ನಿರಖು ಠೇವಣಿಯ ಬಡ್ಡಿಯಿಂದ 3.70 ಕೋಟಿ ರು. ಆದಾಯ ಬಂದಿದೆ.
ನೌಕರರ ವೇತನಕ್ಕೆ 3.35 ಕೋಟಿ ರು., ಭದ್ರತಾ ಸಿಬಂದಿಗಳ ವೇತನಕ್ಕೆ 1 ಕೋಟಿ ರು., ಹೌಸ್ ಕೀಪಿಂಗ್ ನೌಕರರ ವೇತನ 39 ಲಕ್ಷ ರು., ಸೇವಾ ಬಟವಾಡೆ 1.15 ಕೋಟಿ ರು., ಬೆಳಕು ವ್ಯವಸ್ಥೆ 48 ಲಕ್ಷ ರು. , ಅಂಚೆ, ಸೇವಾ ಆರಾಧನೆಗೆ 4.27 ಕೋಟಿ ರು., ಅನ್ನದಾನಕ್ಕೆ 5.41 ಕೋಟಿ ರು., ಶಾಲಾ ಮಕ್ಕಳ ಬಿಸಿಯೂಟಕ್ಕೆ 8 ಲಕ್ಷ ರು., ಉತ್ಸವಕ್ಕೆ 1.12ಕೋಟಿ, ಜಾನುವಾರು, ಆನೆ ಸಾಕಾಣೆಗೆ 1 ಕೋಟಿ ರು., ಅನ್ನಪೂರ್ಣ ಶಾಲೆಯ ಹಿಂಬದಿಗೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ ರು., ನಂದಿನಿ ವಸತಿಗೃಹ ಹಿಂಭಾಗದ ರಸ್ತೆಗೆ ಕಾಂಕ್ರೀಟೀಕರಣಕ್ಕೆ 70 ಲಕ್ಷ ರು., ಹಿರಿಯ ಪ್ರಾಥಮಿಕ, ಪ್ರೌಢಶಾಲೆಗೆ 1.33 ಕೋಟಿ ರು., ಪದವೀ ಪೂರ್ವ ಕಾಲೇಜಿಗೆ 2.85 ಕೋಟಿ ರು., ಪ್ರಥಮ ದರ್ಜೆ ಕಾಲೇಜಿಗೆ 4.16 ಕೋಟಿ ರು., ವಿದ್ಯಾಸಂಸ್ಥೆಗಳ ನಿವೃತ್ತ ಖಾಯಂ ಸಿಬ್ಬಂದಿಗೆ ಉಪ ಧನ ಪಾವತಿಯನ್ನು ಎಲ್‌ಐಸಿಯಲ್ಲಿ ಡಿಪಾಸಿಟ್‌ಗೆ 50 ಲಕ್ಷ ರು., ಆಡಿಟ್‌ಗೆ 50 ಲಕ್ಷ ಹೀಗೆ 32.29 ಕೋಟಿ ರು. ಖರ್ಚು ಆಗಿದೆ.
ಕರಾವಳಿ ದೇಗುಲಗಳೇ ಟಾಪ್
ರಾಜ್ಯದ ಮುಜರಾಯಿ ಇಲಾಖೆಯ ಟಾಪ್ 10 ಆದಾಯದ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 6 ದೇವಾಲಯಗಳಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸಿ ಮೊದಲ ಸ್ಥಾನದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ 155.95 ಕೋಟಿ ರೂ. ಆದಾಯ ಮೂಲಕ ರಾಜ್ಯದಲ್ಲೇ ಟಾಪರ್ ಆಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ಆದಾಯವಿರುವ ದೇವಸ್ಥಾನಗಳಿರುವುದು ದ.ಕ. ಜಿಲ್ಲೆಯಲ್ಲಿ ನಂತರದ ಸ್ಥಾನ ಉಡುಪಿ ಜಿಲ್ಲೆಗೆ ಸೇರಿದೆ.
ಕಟೀಲು ಮೇಳಗಳ ಕಲಾವಿದರಿಗೆ ಅಪಘಾತ, ಆರೋಗ್ಯ ವಿಮೆ
ಕಟೀಲು ಶ್ರೀ ದುರ್ಗಾಪಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ 18 ರಿಂದ 65 ವರ್ಷ ಒಳಗಿನ ಕಲಾವಿದರಿಗೆ 10 ಲಕ್ಷ ರು. ಕವರೇಜ್ ಅಪಘಾತ ವಿಮೆ, 15 ಲಕ್ಷ ಕವರೇಜ್ ಆರೋಗ್ಯ ವಿಮೆ, 65 ರಿಂದ 70 ವರ್ಷ ಒಳಗಿನ ಕಲಾವಿದರಿಗೆ ಉಳಿತಾಯ ಖಾತೆ ಜೊತೆಗೆ 2 ಲಕ್ಷ ರು. ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಮಾಡಿ ಕೊಡಲಾಯಿತು.
ಕಟೀಲು ಮೇಳಗಳ ಕಲಾವಿದರು ಮತ್ತು ಕೆಲಸಗಾರರ ಶ್ರೇಯೋಭಿವೃದ್ಧಿ ಸಮಿತಿಯಿಂದ ಸತತ 4 ವರ್ಷಗಳಿಂದ ಈ ವಿಮೆಗಳನ್ನು ಉಚಿತವಾಗಿ ಮಾಡಿ ಕೊಡಲಾಗುತ್ತಿದೆ. ಕಟೀಲು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸುಮಾ, ಕುಮಾರ್, ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ ಸಾಲ್ಯಾನ್, ಅವಿನಾಶ್, ಗುರುರಾಜ್, ಶಕುಂತಳ, ಮಲ್ಲಿಕಾರ್ಜುನ, ಚರಣ್, ಮಾಧವ, ಸುರೇಖಾ, ದಯಾನಂದ ಶಿಂಧೆ ಸಹಕರಿಸಿದರು.


