- Home
- News
- State
- ಸೌಜನ್ಯ ಪ್ರಕರಣ ಮರುತನಿಖೆಗೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾರ್ಚ್ 23ಕ್ಕೆ ಮುಂದೂಡಿದ ಸುಪ್ರೀಂ
ಸೌಜನ್ಯ ಪ್ರಕರಣ ಮರುತನಿಖೆಗೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾರ್ಚ್ 23ಕ್ಕೆ ಮುಂದೂಡಿದ ಸುಪ್ರೀಂ
ಧರ್ಮಸ್ಥಳದ ಸೌಜನ್ಯ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಕೋರಿ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಈ ಮೇಲ್ಮನವಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 23ಕ್ಕೆ ಮುಂದೂಡಿದೆ.

ಮರು ತನಿಖೆ ಕೋರಿ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ ಅರ್ಜಿ
ಧರ್ಮಸ್ಥಳ ಗ್ರಾಮದ ಸೌಜನ್ಯ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ಇದೀಗ ಪರಿಶೀಲನೆ ನಡೆಸಿದ ಸುಪ್ರೀಂ ಮುಂದಿನ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಜಸ್ಟೀಸ್ ಸಂಜಯ್ ಕುಮಾರ್ ಪೀಠದ ಮುಂದೆ ನಡೆಯಿತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ
ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಸೆಷನ್ಸ್ ನ್ಯಾಯಾಲಯ ಹಾಗೂ ನಂತರ ಸಿಬಿಐ ನ್ಯಾಯಾಲಯವು ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಾಗೂ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು ಮೊದಲು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ದ್ವಿಸದಸ್ಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ವಿಶೇಷ ಅನುಮತಿ ಮೇಲ್ಮನವಿ ಅರ್ಜಿ (SLP) ಸಲ್ಲಿಸುವ ಮೂಲಕ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿಯಲ್ಲಿದ್ದ ದೋಷ, ಮತ್ತೆ ಸಲ್ಲಿಕೆ
ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಅದನ್ನು ಡಿಫೆಕ್ಟ್ ಲಿಸ್ಟ್‌ನಲ್ಲಿ ಸೇರಿಸಿತ್ತು. ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಲು ಅರ್ಜಿದಾರರ ಪರ ವಕೀಲರಿಗೆ 90 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯಂತೆ, ದೋಷಗಳನ್ನು ಸರಿಪಡಿಸಿ ಕುಸುಮಾವತಿ ಗೌಡ ಅವರ ಪರ ವಕೀಲರು 2025ರ ನವೆಂಬರ್ 19ರಂದು ಅರ್ಜಿಯನ್ನು ಮರುಸಲ್ಲಿಕೆ ಮಾಡಿದ್ದಾರೆ. ಇದೀಗ ಆ ಅರ್ಜಿ ವಿಚಾರಣೆಗೆ ಬಂದಿದ್ದು, ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿಕೆ ಮಾಡಿದೆ. ಧರ್ಮಸ್ಥಳ ಸೌಜನ್ಯ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣವು ರಾಜ್ಯದಲ್ಲಿ ಅತ್ಯಂತ ಸಂವೇದನಶೀಲ ಪ್ರಕರಣಗಳಲ್ಲಿ ಒಂದಾಗಿದ್ದು, ಮರು ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೈಗೊಳ್ಳುವ ನಿರ್ಧಾರವನ್ನು ದೇಶಾದ್ಯಂತ ಕುತೂಹಲದಿಂದ ನಿರೀಕ್ಷಿಸಲಾಗುತ್ತಿದೆ.
ಅರ್ಜಿಯಲ್ಲಿ ಯಾರ್ಯಾರು ಪ್ರತಿವಾದಿಗಳು?
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ತನಿಖಾ ದಳ (CBI), ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP), ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಇವರನ್ನು ಪ್ರತಿವಾದಿಗಳನ್ನಾಗಿ ಉಲ್ಲೇಖಿಸಲಾಗಿದೆ.
ಸಂತೋಷ್ ರಾವ್ ಕೂಡ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ
ಈ ನಡುವೆ, ಸಂತೋಷ್ ರಾವ್ ಕೂಡ 2025ರ ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯಲ್ಲಿಯೂ ದೋಷಗಳಿರುವುದರಿಂದ, ಅವುಗಳನ್ನು ಸರಿಪಡಿಸಲು ಸುಪ್ರೀಂ ಕೋರ್ಟ್ 90 ದಿನಗಳ ಕಾಲಾವಕಾಶ ನೀಡಿದೆ.
ಪ್ರಕರಣದ ಹಿನ್ನೆಲೆ
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಬಳಿ ಸೌಜನ್ಯ ಎಂಬ ಯುವತಿ ಅತ್ಯಾ*ಚಾರಕ್ಕೆ ಒಳಗಾಗಿ ಹತ್ಯೆಯಾಗಿದ್ದ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು 2012ರ ಅಕ್ಟೋಬರ್ 11ರಂದು ಸಂತೋಷ್ ರಾವ್ ಅವರನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ಕುರಿತು ವ್ಯಾಪಕ ಹೋರಾಟಗಳು ಮತ್ತು ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ 2013ರಲ್ಲಿ ಸಂತೋಷ್ ರಾವ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ನಂತರ, ಮತ್ತಷ್ಟು ಸಾರ್ವಜನಿಕ ಆಗ್ರಹದ ಹಿನ್ನೆಲೆಯಲ್ಲಿ ತನಿಖೆಯನ್ನು ಕೇಂದ್ರ ತನಿಖಾ ದಳ (CBI)ಗೆ ಹಸ್ತಾಂತರಿಸಲಾಗಿತ್ತು. ಸಿಬಿಐ ಕೂಡ ಸಂತೋಷ್ ರಾವ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ, ದೀರ್ಘ ವಿಚಾರಣೆಯ ನಂತರ 2023ರ ಜುಲೈನಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

