ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗುವ ಬಗ್ಗೆ ಪರಿಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ್ದು ಜನರ ಆಶೀರ್ವಾದದಿಂದ ಎಂದ ಅವರು, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಮೈಸೂರು (ಜ.06): ನನಗೆ ಹೈ ಕಮಾಂಡ್ ಮೇಲೆ ಪರಿಪೂರ್ಣ ವಿಶ್ವಾಸ ಇದೆ. ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈ ಕಮಾಂಡ್ ನಿರ್ಧಾರವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Chief Minister Siddaramaiah) ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯ, ದೇವರಾಜ ಅರಸು (Karnataka former Chief Minister Devaraj Urs) ಅವರ ದಾಖಲೆ ಸರಿಗಟ್ಟಿದ ಸಂಭ್ರಮ ಹಾಗೂ ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಅಧಿಕಾರದ ಅವಧಿಯ ಬಗ್ಗೆ ಮಾತನಾಡುತ್ತಾ 'ನನಗೆ ಹೈ ಕಮಾಂಡ್ ಮೇಲೆ ಪರಿಪೂರ್ಣ ವಿಶ್ವಾಸ ಇದೆ. ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈ ಕಮಾಂಡ್ ನಿರ್ಧಾರವೇ ಅಂತಿಮ' ಎಂದು ಸ್ಪಷ್ಟಪಡಿಸಿದರು.
ದಾಖಲೆಗಳ ಬಗ್ಗೆ ಅರಿವಿರಲಿಲ್ಲ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆ ಸರಿಗಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, 'ನನಗೆ ದೇವರಾಜ ಅರಸು ದಾಖಲೆಯ ಬಗ್ಗೆ ಅರಿವು ಇರಲಿಲ್ಲ. ಯಾವ ದಾಖಲೆ ಮುರಿಯಬೇಕು ಎಂಬುದು ನನ್ನ ಗಮನದಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ. ಆದರೆ ದೇವರಾಜ ಅರಸು ರಾಜಕಾರಣದ ಸಮಯವೇ ಬೇರೆ, ಇವತ್ತಿನ ಸಮಯವೇ ಬೇರೆ. ಜನರ ಆಶೀರ್ವಾದದಿಂದ ಅಷ್ಟೇ ನಾನು ಇಲ್ಲಿಯ ತನಕ ಬಂದಿದ್ದೇನೆ. ಇಲ್ಲಿವರೆಗಿನ ರಾಜಕೀಯ ತೃಪ್ತಿ ಕೊಟ್ಟಿದೆ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಜನರಿಗೆ ಇನ್ನಷ್ಟು ಕೆಲಸ ಮಾಡಬೇಕಿದೆ. ನಾನು ಒಂದು ಬಾರಿ ಎಂಎಲ್ಎ ಆದರೆ ಸಾಕು ಅಂದುಕೊಂಡಿದ್ದೆ. ಆದರೆ ಎಂಎಲ್ಎ, ಡಿಸಿಎಂ, ಸಿಎಂ ಎಲ್ಲ ಆಗಿದ್ದೇನೆ' ಎಂದರು.
ನಾಟಿ ಕೋಳಿ ಪಲಾವ್ ಚರ್ಚೆ
ರಾಜ್ಯದ ಹಲವಡೆ ಸಿಎಂ ಹೆಸರಿನಲ್ಲಿ ನಾಟಿ ಕೋಳಿ ಪಲಾವ್ (Chicken Palav) ಹಂಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಯಾರು ನಾಟಿ ಕೋಳಿ ಪಲಾವ್ ಹಂಚುತ್ತಿದ್ದಾರೆ ನನಗೆ ಗೊತ್ತಿಲ್ಲ. ನಾನು ಹಳ್ಳಿಯಿಂದ ಬಂದವನು, ಸಹಜವಾಗಿ ನನಗೆ ನಾಟಿ ಕೋಳಿ ಇಷ್ಟ. ನನ್ನಂತೆಯೇ ಹಳ್ಳಿಯಿಂದ ಬಂದವರಿಗೆ ನಾಟಿ ಕೋಳಿ ಊಟ ಇಷ್ಟ ಇರುತ್ತದೆ. ನಾನು ಮೊದಲು ಹೆಚ್ಚು ನಾಟಿ ಕೋಳಿ ತಿನ್ನುತ್ತಿದ್ದೆ, ಈಗ ಕಡಿಮೆ ಮಾಡಿದ್ದೇನೆ. ಇಂದು ಯಾರ್ಯಾರು ಹಂಚಿದ್ದಾರೆ ನನ್ನ ಗಮನದಲ್ಲೂ ಇಲ್ಲ ಬಿಡಿ,' ಎಂದು ಹಗುರವಾಗಿ ಹೇಳಿದರು.
ಸಂಪುಟ ಪುನಾರಚನೆ
ಕೆ.ಸಿ. ವೇಣುಗೋಪಾಲ್ (AICC Secretory KC Venugopal) ಭೇಟಿ ಕುರಿತು ಮಾತನಾಡಿ, 'ಅವರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಿ ದೆಹಲಿಗೆ ಹೋಗುತ್ತಿದ್ದರು, ಹೀಗಾಗಿ ಅವರನ್ನ ಭೇಟಿಯಾಗಿದ್ದೇನೆ ಅಷ್ಟೇ. ಯಾವ ರಾಜಕಾರಣವೂ ಚರ್ಚೆ ಆಗಿಲ್ಲ. ಸಂಪುಟ ಪುನಾರಚನೆ ಬಗ್ಗೆಯೂ ಅವರ ಬಳಿ ಚರ್ಚೆ ಮಾಡಿಲ್ಲ. ಸಂಪುಟ ಪುನಾರಚನೆ ವಿಚಾರದಲ್ಲಿ ಹೈ ಕಮಾಂಡ್ ಯಾವತ್ತು ದೆಹಲಿಗೆ ಕರೆಯುತ್ತದೆ ಅವತ್ತು ದೆಹಲಿಗೆ ಹೋಗುತ್ತೇನೆ' ಎಂದರು.
ಬಳ್ಳಾರಿ ಗಲಾಟೆ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, 'ಅದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ವರದಿ ಬರಲಿ ಆ ನಂತರ ಮಾತನಾಡುತ್ತೇನೆ. ಸಿಒಡಿ ತನಿಖೆಗೆ (CID investigation) ಕೊಡುವ ಬಗ್ಗೆ ಇಂದು ಬೆಂಗಳೂರಿಗೆ ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಂಡು ಸೂಕ್ತ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದರು.


