ಕಾರವಾರದಲ್ಲಿ, ಅತಿಯಾದ ಭಾರದ ಶಾಲಾ ಬ್ಯಾಗ್ ಹೊತ್ತ ಆರನೇ ತರಗತಿ ವಿದ್ಯಾರ್ಥಿಯೊಬ್ಬನ ಕೈ ಮೂಳೆ ಮುರಿದಿದೆ. ಶಿಕ್ಷಕರು ಹೆಚ್ಚು ಪುಸ್ತಕ ತರಲು ಹೇಳಿದ್ದೇ ಈ ದುರಂತಕ್ಕೆ ಕಾರಣವೆನ್ನಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘನೆಯ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರವಾರ, ಉತ್ತರಕನ್ನಡ (ಜ.9): ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕೆಂಬ ಕೂಗಿನ ನಡುವೆಯೇ, ಕಾರವಾರದಲ್ಲಿ ಕೆಜಿಗಟ್ಟಲೆ ಭಾರದ ಪುಸ್ತಕಗಳನ್ನು ಹೊತ್ತ ಆರನೇ ತರಗತಿಯ ವಿದ್ಯಾರ್ಥಿಯೊಬ್ಬನ ಎಡಗೈ ಮುರಿದಿರುವ ದಾರುಣ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರವಾದ ಬ್ಯಾಗ್‌ನಿಂದ ವಿದ್ಯಾರ್ಥಿ ಹೈರಾಣು

ಕಾರವಾರದ ಸೇಂಟ್ ಮೈಕಲ್ ಕಾನ್ವೆಂಟ್ ಖಾಸಗಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಸಮರ್ಥ ನಾಯ್ಕ್ ಈ ಅವಘಡಕ್ಕೆ ತುತ್ತಾದ ಬಾಲಕ. ಶಾಲೆಯ ಶಿಕ್ಷಕರು ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ತರುವಂತೆ ಸೂಚಿಸಿದ್ದರಿಂದ, ಬಾಲಕ ತನ್ನ ಬ್ಯಾಗ್‌ನಲ್ಲಿ ಭಾರವಾದ ಪುಸ್ತಕಗಳನ್ನು ತುಂಬಿಕೊಂಡು ಶಾಲೆಗೆ ತೆರಳಿದ್ದ ಎನ್ನಲಾಗಿದೆ.

ಮನೆಗೆ ಬಂದಾಗ ಘಟನೆ ಬೆಳಕಿಗೆ

ಶಾಲೆಯಿಂದ ಮರಳಿ ಮನೆಗೆ ಬಂದಾಗ ಸಮರ್ಥನ ಎಡಗೈ ಭುಜದ ಭಾಗದಲ್ಲಿ ತೀವ್ರವಾದ ಊತ ಕಂಡುಬಂದಿತ್ತು. ಮಗನ ಪರಿಸ್ಥಿತಿಯನ್ನು ನೋಡಿ ಆತಂಕಗೊಂಡ ಪೋಷಕರು ತಕ್ಷಣವೇ ಆತನನ್ನು ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕನ ಕೈ ಮೂಳೆ ಮುರಿದಿರುವುದು ದೃಢಪಟ್ಟಿದೆ.

ಬ್ಯಾಗ್ ಹೊರೆ: ಮಕ್ಕಳ ಆರೋಗ್ಯಕ್ಕೆ ಕಂಟಕ

ತನಿಖೆಯ ವೇಳೆ, ಬಾಲಕ ಪ್ರತಿದಿನ ತನ್ನ ವಯಸ್ಸು, ತೂಕಕ್ಕೂ ಮೀರಿದ ಬ್ಯಾಗ್ ಹೊತ್ತು ಶಾಲೆಗೆ ಹೋಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಭಾರವಾದ ಶಾಲಾ ಬ್ಯಾಗ್‌ಗಳು ಮಕ್ಕಳ ಬೆನ್ನುಮೂಳೆ, ಭುಜ ಮತ್ತು ಕುತ್ತಿಗೆಯ ಮೇಲೆ ತೀವ್ರ ಒತ್ತಡ ಹೇರುತ್ತವೆ. ಇದು ಕೇವಲ ಸ್ನಾಯುಗಳ ನೋವಷ್ಟೇ ಅಲ್ಲದೆ, ಬೆನ್ನುಮೂಳೆಯ ವಕ್ರತೆ (Scoliosis), ಕೀಲುಗಳ ಸಮಸ್ಯೆ ಮತ್ತು ಈ ಘಟನೆಯಲ್ಲಿ ನಡೆದಂತೆ ಮೂಳೆ ಮುರಿತದಂತಹ ಗಂಭೀರ ಅಪಾಯಗಳಿಗೆ ಕಾರಣವಾಗಬಹುದು.

ನಿಯಮ ಗಾಳಿಗೆ ತೂರುತ್ತಿವೆಯೇ ಶಿಕ್ಷಣ ಸಂಸ್ಥೆಗಳು?

ಸರ್ಕಾರ ಮತ್ತು ನ್ಯಾಯಾಲಯಗಳು ಶಾಲಾ ಬ್ಯಾಗ್‌ನ ತೂಕವು ವಿದ್ಯಾರ್ಥಿಯ ತೂಕದ ಶೇ. 10 ಕ್ಕಿಂತ ಹೆಚ್ಚಿರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಕೆಲವು ಖಾಸಗಿ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಮರ್ಥನ ಕೈ ಮುರಿತಕ್ಕೆ ಶಾಲೆಯ ಅತಿಯಾದ ಪುಸ್ತಕಗಳ ಹೊರೆಯೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.