- Home
- Karnataka Districts
- Uttara Kannada
- Karwar: ಭಾರವಾದ ಶಾಲಾ ಬ್ಯಾಗ್ ಹೊತ್ತ ಪರಿಣಾಮ 6ನೇ ಕ್ಲಾಸ್ ವಿದ್ಯಾರ್ಥಿ ಕೈಯಲ್ಲಿ ಊತ: ತುರ್ತು ಚಿಕಿತ್ಸೆ
Karwar: ಭಾರವಾದ ಶಾಲಾ ಬ್ಯಾಗ್ ಹೊತ್ತ ಪರಿಣಾಮ 6ನೇ ಕ್ಲಾಸ್ ವಿದ್ಯಾರ್ಥಿ ಕೈಯಲ್ಲಿ ಊತ: ತುರ್ತು ಚಿಕಿತ್ಸೆ
ಕಾರವಾರದ ಖಾಸಗಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯೊಬ್ಬ ಅತಿಯಾದ ಭಾರದ ಶಾಲಾ ಬ್ಯಾಗ್ ಹೊತ್ತ ಪರಿಣಾಮ ಕೈ ಊದಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯು ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡುವ ನಿಯಮಗಳ ಪಾಲನೆಯಾಗದಿರುವುದನ್ನು ಎತ್ತಿ ತೋರಿಸಿದೆ.

ಶಾಲಾ ಮಕ್ಕಳ ಬ್ಯಾಗ್ ಹೊರೆ
ಕಾರವಾರ: ಭಾರವಾದ ಶಾಲಾ ಬ್ಯಾಗ್ ಹೊತ್ತು 6ನೇ ತರಗತಿಯ ವಿದ್ಯಾರ್ಥಿಯೋರ್ವನ ಕೈ ಊದಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದ್ದು, ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕೆಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ನಗರದ ಖಾಸಗಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಸಮರ್ಥ ನಾಯ್ಕ ಎಂಬ ಬಾಲಕನೇ ಅಸ್ವಸ್ಥಗೊಂಡ ವಿದ್ಯಾರ್ಥಿ.
ತೋಳಿನ ಎಲುಬಿಗೆ ಒತ್ತಡ ಬಿದ್ದು ಪೆಟ್ಟು
ಸಮರ್ಥ ಪ್ರತಿನಿತ್ಯ ಶಾಲೆಗೆ ಬರುವಾಗ ಪಠ್ಯ ಪುಸ್ತಕ ಮತ್ತು ನೋಟ್ಸ್‌ಗಳ ಭಾರವಾದ ಬ್ಯಾಗ್ ಹೊತ್ತುಕೊಂಡು ಬರುತ್ತಿದ್ದ. ಈ ಅತಿಯಾದ ಭಾರದಿಂದಾಗಿ ಬಾಲಕನ ತೋಳಿನ ಎಲುಬಿಗೆ ಒತ್ತಡ ಬಿದ್ದು ಪೆಟ್ಟಾಗಿದ್ದು, ಭುಜ ಹಾಗೂ ಕೈ ಊದಿಕೊಂಡಿದೆ. ವಿಪರೀತ ನೋವು ಕಾಣಿಸಿಕೊಂಡ ಹಿನ್ನೆಲೆ ಬಾಲಕನನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಾಲಕನಿಗೆ ತುರ್ತು ಚಿಕಿತ್ಸೆ
ವೈದ್ಯರು ಬಾಲಕನನ್ನು ಪರೀಕ್ಷಿಸಿ, ಇಷ್ಟು ಚಿಕ್ಕ ವಯಸ್ಸಿಗೆ ಕೈ ಊದಿಕೊಳ್ಳಲು ಕಾರಣವೇನೆಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ಶಾಲಾ ಬ್ಯಾಗ್ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲಿದ್ದವರು ಬ್ಯಾಗ್ ಎತ್ತಿ ನೋಡಿದಾಗ, ಅದು ವಿದ್ಯಾರ್ಥಿಯ ದೇಹದ ಸಾಮರ್ಥ್ಯಕ್ಕಿಂತಲೂ ಹೆಚ್ಚು ತೂಕವಿರುವುದು ದೃಢಪಟ್ಟಿದೆ. ವೈದ್ಯರು ಬಾಲಕನಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ: ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ: ಸೂಚನೆ
ಶಾಲಾ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ
ಮಾಹಿತಿ ತಿಳಿದ ಶಿಕ್ಷಣ ಇಲಾಖೆಯ ಜಂಟಿ ಆಯುಕ್ತ ಈಶ್ವರ ಉಳಾಗಡ್ಡಿ ಅವರು, ‘ಮಕ್ಕಳು ಆಯಾ ದಿನದ ವೇಳಾಪಟ್ಟಿಗೆ ಸೀಮಿತವಾಗಿರುವ ಪುಸ್ತಕಗಳನ್ನು ಮಾತ್ರ ತರಬೇಕು. ಅಗತ್ಯಕ್ಕಿಂತ ಹೆಚ್ಚಿನ ಪುಸ್ತಕ ಹೊತ್ತು ತರದಂತೆ ನೋಡಿಕೊಳ್ಳಲು ಶಾಲಾ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡುತ್ತೆ ಹೈದರಾಬಾದ್ ಬಾಲಕನ ಹೊಸ ಐಡಿಯಾ!