ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ರಾಜ್ಯದಲ್ಲಿ ‘ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ’ ರೂಪಿಸುವುದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸಭೆ (ಮಾ.12): ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ರಾಜ್ಯದಲ್ಲಿ ‘ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ’ ರೂಪಿಸುವುದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ 32 ಖಾಸಗಿ ಡೇಟಾ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಎಐ, ಮಷಿನ್ ಲರ್ನಿಂಗ್, ಎಮರ್ಜಿಂಗ್ ಟೆಕ್ನಾಲಜಿಗಳಿಗೆ ಡೇಟಾ ಸೆಂಟರ್‌ಗಳ ಅಗತ್ಯವಿದೆ. ಹೀಗಾಗಿ ರಾಜ್ಯ ಸರ್ಕಾರದ ಹಾಲಿ ಡೇಟಾ ಸೆಂಟರ್ ಪಾಲಿಸಿ 3-4 ವರ್ಷಗಳಷ್ಟು ಹಳೆಯದು. ಹೀಗಾಗಿ ಇದನ್ನು ಪುನರ್ ಪರಿಶೀಲಿಸಿ ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ ರೂಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸರ್ಕಾರದಿಂದ ಡೇಟಾ ಸೆಂಟರ್ ಕಷ್ಟ: ಸರ್ಕಾರದಿಂದ ಡೇಟಾ ಸೆಂಟರ್ ಸ್ಥಾಪಿಸುವುದು ಕಷ್ಟವಾಗುತ್ತದೆ. ಈ ಡೇಟಾ ಸೆಂಟರ್‌ಗಳಿಗೆ ದೊಡ್ಡ ಪ್ರಮಾಣದ ನೀರು ಮತ್ತು ವಿದ್ಯುತ್ ಬೇಕಾಗುತ್ತದೆ. ಒಂದು ಮೆಗಾ ವ್ಯಾಟ್‌ಗೆ 70 ಕೋಟಿ ರು. ಬೇಕು. ಒಂದು ಎಕರೆ ಜಾಗದಲ್ಲಿ ಒಂದು ಮೆಗಾ ವ್ಯಾಟ್ ಮಾತ್ರ ಸಿಗಲಿದೆ. ಈ ಒಂದು ಮೆಗಾ ವ್ಯಾಟ್‌ಗೆ 25 ಮಿ.ಲೀ. ನೀರು ಬೇಕು. ಚಾಟ್ ಜಿಪಿಟಿಯಲ್ಲಿ ಐದು ಪ್ರಶ್ನೆ ಕೇಳಿದರೆ 500 ಲೀ. ನೀರು ಹೋಗುತ್ತದೆ. ಹೀಗಾಗಿ ಈ ಡೇಟಾ ಸೆಂಟರ್ ಪಾಲಿಸಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದರು.
ಬಿಯಾಂಡ್ ಬೆಂಗಳೂರಿಗೆ ಆದ್ಯತೆ: ಕರಾವಳಿ ಪ್ರದೇಶ ಈ ಡೇಟಾ ಸೆಂಟರ್‌ಗಳಿಗೆ ಸೂಕ್ತವಾಗಿದೆ. ಮಂಗಳೂರು ಸೇರಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ಸಬ್ ಸೀ ಕೇಬಲ್ ತರುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳೊಂದಿಗೆ ಚರ್ಚಿಸಿದ್ದೇನೆ. ಕೇಂದ್ರದ ಟೆಲಿಕಾಂ ಇಲಾಖೆಗೂ ಪತ್ರ ಬರೆದು ಸಚಿವರೊಂದಿಗೂ ಚರ್ಚಿಸಿದ್ದೇನೆ. ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ. ಖಾಸಗಿಯವರು ಡೇಟಾ ಸೆಂಟರ್ ಮಾಡಲು ಮುಂದೆ ಬಂದರೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ದೊಡ್ಡಬಳ್ಳಾಪುರದಲ್ಲಿ ಕೈಗಾರಿಕೆಗಳಿಗೆ ಭೂಮಿ ಕೊರತೆ ಇಲ್ಲ. ಪಾಲಿಸಿ ಕೊರತೆ ಇಲ್ಲ. ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಲೀಪ್)ದಡಿ ಬಂಡಾವಳ ಹೂಡಿಕೆಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಡೇಟಾ ಸೆಂಟರ್‌ನಲ್ಲಿ ಬೆಂಗಳೂರು 5ನೇ ಸ್ಥಾನ
ಇದಕ್ಕೂ ಮುನ್ನ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಸೋಶಿಯಲ್ ಮೀಡಿಯಾ, ಆನ್‌ಲೈನ್, ಕ್ಲೌಡ್ ಕಂಪ್ಯೂಟಿಂಗ್, ಎಐ ಮೊದಲಾದ ಕ್ಷೇತ್ರದಲ್ಲಿ ಬೆಂಗಳೂರು ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಡೇಟಾ ಸೆಂಟರ್‌ನಲ್ಲಿ 5ನೇ ಸ್ಥಾನದಲ್ಲಿದೆ. ಮುಂಬೈ, ಹೈದರಾಬಾದ್, ಚೆನ್ನೈ, ದೆಹಲಿ ಕ್ರಮವಾಗಿ ಒಂದರಿಂದ ನಾಲ್ಕನೇ ಸ್ಥಾನದಲ್ಲಿವೆ. ಅಮೇಜಾನ್, ಒರಾಕಲ್ ಸೇರಿದಂತೆ ದೊಡ್ಡ ಕಂಪನಿಗಳ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಈ ಎಲ್ಲದಕ್ಕೂ ಡೇಟಾ ಸೆಂಟರ್‌ಗಳು ಬೇಕು. ಹೀಗಾಗಿ ಸರ್ಕಾರ ಡೇಟಾ ಸೆಂಟರ್‌ಗಳಿಗೆ ಹೆಚ್ಚಿನ ಒತ್ತು ನೀಡಬೇಕು. ದೊಡ್ಡಬಳ್ಳಾಪುರದಲ್ಲಿ ಕ್ವಿನ್ ಸಿಟಿ ಯೋಜನೆಯಡಿ ಡೇಟಾ ಸೆಂಟರ್ ಪಾರ್ಕ್ ನಿರ್ಮಿಸಬೇಕು. ಐಟಿ ಕಂಪನಿಗಳಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.


