ನಾಳೆಯಿಂದ ಈ ಸರ್ಕಾರದ ಕೊನೆಯ ಅಧಿವೇಶನ: ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ದಿನ ಗೌರ್ನರ್ ಭಾಷಣ; ಫೆ.17ಕ್ಕೆ ಬಜೆಟ್
ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸಿ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ಫೆಬ್ರವರಿ 17ರಂದು ಜನಪ್ರಿಯ ಬಜೆಟ್ ಮಂಡಿಸುವ ಮೂಲಕ ಎದಿರೇಟು ನೀಡಲು ಬಿಜೆಪಿ ತಯಾರಿಯಲ್ಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ಈ ವರ್ಷದ ಮೊದಲ ಹಾಗೂ ಪ್ರಸಕ್ತ ಬಿಜೆಪಿ ಸರ್ಕಾರದ ಅಂತಿಮ ವಿಧಾನಮಂಡಲ ಅಧಿವೇಶನವು ಫೆಬ್ರವರಿ 10ರಿಂದ ಆರಂಭವಾಗಲಿದೆ. ಮೊದಲ ದಿನವಾದ ಶುಕ್ರವಾರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಭಾಷಣ ಮಾಡಲಿದ್ದು, ಚುನಾವಣೆ ವರ್ಷವಾಗಿರುವ ಹಿನ್ನೆಲೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸಿ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ಫೆಬ್ರವರಿ 17ರಂದು ಜನಪ್ರಿಯ ಬಜೆಟ್ ಮಂಡಿಸುವ ಮೂಲಕ ಎದಿರೇಟು ನೀಡಲು ಬಿಜೆಪಿ ತಯಾರಿಯಲ್ಲಿದೆ. ಶುಕ್ರವಾರ ಬೆಳಗ್ಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಸೋಮವಾರದಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗಳು ನಡೆಯಲಿವೆ.
ಇದನ್ನು ಓದಿ: ಕೃಷಿ ಕಾಯ್ದೆ ವಾಪಸ್ ಪಡೆಯದಿದ್ರೆ ಬಿಜೆಪಿಗೆ ಮತವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸ್ಯಾಂಟ್ರೋ ರವಿ ಪ್ರಕರಣ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ನಿರ್ಲಕ್ಷ್ಯ, ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ.
ಶಾಸಕರ ಗೈರು ಸಾಧ್ಯತೆ:
ವಿಧಾನಸಭೆ ಚುನಾವಣೆ ಹತ್ತಿರವಾಗಿರುವುದರಿಂದ ಕ್ಷೇತ್ರಗಳಲ್ಲಿ ಚುನಾವಣೆ ಬಿಸಿ ಹೆಚ್ಚಾಗಿದೆ. ಹೀಗಾಗಿ ಕ್ಷೇತ್ರದಿಂದ ಅಂತರ ಕಾಯ್ದುಕೊಳ್ಳಲು ಯಾವ ಪಕ್ಷದ ಶಾಸಕರೂ ಸಿದ್ಧರಿಲ್ಲ. ಪರಿಣಾಮವಾಗಿ ಹೆಚ್ಚು ಮಂದಿ ಗೈರು ಹಾಜರಾಗುವ ಸಾಧ್ಯತೆಗಳಿವೆ. ಬೆಳಗಾವಿ ಅಧಿವೇಶನದಲ್ಲಿ ಸಾಕಷ್ಟು ಶಾಸಕರು, ಸಚಿವರು ಅಧಿವೇಶನಕ್ಕೆ ಗೈರಾಗಿ ನಿರಾಸಕ್ತಿ ಪ್ರದರ್ಶಿಸಿದ್ದರು. ಪರಿಣಾಮ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಲಾಗಿತ್ತು. ಇದೇ ಸ್ಥಿತಿ ಪ್ರಸಕ್ತ ಅಧಿವೇಶನದಲ್ಲೂ ಮರುಕಳಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಜೆಟ್, ಚುನಾವಣೆ ಹಿನ್ನೆಲೆ: ವರ್ಗಾವಣೆ ಸ್ಥಗಿತ, ಸಿಎಂ ಬೊಮ್ಮಾಯಿ
ಕಾಂಗ್ರೆಸ್‌ನವರು ಪ್ರಜಾಧ್ವನಿ ಯಾತ್ರೆ, ಜೆಡಿಎಸ್‌ನವರು ಪಂಚರತ್ನ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡು ಒಬ್ಬರು ಇಲ್ಲದಿದ್ದಾಗ ಮತ್ತೊಬ್ಬರಂತೆ ಅಧಿವೇಶನದಲ್ಲಿ ಹಾಜರಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ದೃಷ್ಟಿಯಿಂದ ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡಿಸಲು ಸದನವೂ ವೇದಿಕೆಯಾಗಿರುವುದರಿಂದ ಸಮಾನವಾಗಿ ಬಳಸಿಕೊಳ್ಳುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ.
ಬಜೆಟ್ ಮೂಲಕ ಪ್ರತ್ಯುತ್ತರ:
ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಸಲಿರುವ ರಾಜ್ಯ ಸರ್ಕಾರ, ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡಿಸಲಿದೆ. ಇದು ಚುನಾವಣಾ ವರ್ಷ ಆಗಿರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳಿಗೆ ಕೊರತೆ ಇರುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ಮೂಲಕವೇ ತಿರುಗೇಟು ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಜ್ಜಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಜೆಟ್ ನಂತರ ನಾಲ್ಕೂ ದಿಕ್ಕುಗಳಿಂದ ರಥಯಾತ್ರೆ: ಕಾಂಗ್ರೆಸ್‌ನ ಬಸ್ ಯಾತ್ರೆಗೆ ಬಿಜೆಪಿ ಸಡ್ಡು
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಚಿವ ಸಂಪುಟ ಸಭೆಯನ್ನೂ ಕರೆದಿದ್ದಾರೆ. ಈ ವೇಳೆ ಹಲವು ವಿಶ್ವವಿದ್ಯಾಲಯ ಮಸೂದೆಗಳು ಸೇರಿದಂತೆ ಅಂಗೀಕಾರ ಪಡೆಯಬೇಕಿರುವ ವಿವಿಧ ವಿಧೇಯಕಗಳ ಬಗ್ಗೆಯೂ ಚರ್ಚೆಯಾಗಲಿದೆ.