ಕೃಷಿ ಕಾಯ್ದೆ ವಾಪಸ್ ಪಡೆಯದಿದ್ರೆ ಬಿಜೆಪಿಗೆ ಮತವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಮುಂಬರುವ ವಿಧಾನ ಮಂಡಲ ಅಧಿವೇಶನದ ಮೊದಲ ವಾರದಲ್ಲಿ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕರೆ ನೀಡಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಫೆ.01): ಮುಂಬರುವ ವಿಧಾನ ಮಂಡಲ ಅಧಿವೇಶನದ ಮೊದಲ ವಾರದಲ್ಲಿ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕರೆ ನೀಡಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಯೋಜಿಸಿದ್ದ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೃಷಿ ಮಾರುಕಟ್ಟೆ, ಭೂ ಸುಧಾರಣಾ ಕಾಯ್ದೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ ರಾಜ್ಯ ಸರ್ಕಾರ ಇವೆರಡು ಕಾಯ್ದೆಯ ಜೊತೆಗೆ ಹೈನುಗಾರಿಕೆ ಕಾಯ್ದೆಯನ್ನೂ ಜಾರಿಗೆ ತಂದಿದೆ. ಈ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಭರವಸೆ ನೀಡಿಯೂ ಸರ್ಕಾರ ಮಾತಿಗೆ ತಪ್ಪಿದೆ ಎಂದರು. ಆದ್ದರಿಂದ ಇದೀಗ ಕೊನೆಯ ಅವಕಾಶ ನೀಡಿದ್ದು ವಾಪಸ್ ಪಡೆಯದಿದ್ದರೆ ಬಿಜೆಪಿಗೆ ರೈತರು ಮತ ಹಾಕದಂತೆ ಕರೆ ನೀಡಲಾಗುವುದು ಎಂದು ಹೇಳಿದರು.
ಕೃಷಿ ವಿಮುಖರಾಗುವ ಶೇ.75 ರೈತರು: ರೈತರಿಗೆ ಕರಾಳವಾಗಿರುವ ಈ ಕಾಯ್ದೆಗಳು ಜಾರಿಯಾದರೆ ಮುಂದಿನ 10 ವರ್ಷದಲ್ಲಿ ಶೇ.75 ರಷ್ಟುರೈತರು ಕೃಷಿಯಿಂದ ವಿಮುಖರಾಗಲಿದ್ದಾರೆ. ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳು ರೈತರ ಜಮೀನು ಖರೀದಿಸಲಿವೆ. ಆದ್ದರಿಂದ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ನಗರದಲ್ಲಿ ಫೆ.24 ರಂದು ಬೃಹತ್ ರೈತ ಸಮಾವೇಶ ಆಯೋಜಿಸಿ ಬಿಜೆಪಿ ಸರ್ಕಾರವನ್ನು ರೈತ ವಿರೋಧಿ ಎಂದು ಘೋಷಿಸಲಾಗುವುದು ಎಂದು ವಿವರಿಸಿದರು.
ಆಸ್ತಿ ಆಸೆಗಾಗಿ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ ಮೊಮ್ಮಗ
ರೈತ ಸಂಘದಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದೆವು. ನಾವು 20 ರಿಂದ 25 ವಿಧಾನ ಸಭಾ ಕ್ಷೇತ್ರದಲ್ಲಿ ಜಯಗಳಿಸುತ್ತೇವೆ ಎಂದು ಇಂಟಲಿಜೆನ್ಸ್‌ನವರು ಸರ್ಕಾರಕ್ಕೆ ವರದಿ ನೀಡಿದ್ದರಿಂದ ನಮ್ಮ ಜೊತೆಯಲ್ಲೇ ಇದ್ದ ಹಸಿರು ಶಾಲು ಹೊದ್ದವರು ಕೆಲವರೊಂದಿಗೆ ಕೈಜೋಡಿಸಿ ಭ್ರಷ್ಟಾಚಾರದ ಆರೋಪ ಹೊರಿಸಿದರು. ಈಗ ಕಾಲ ಚುನಾವಣಾ ರಾಜಕಾರಣಕ್ಕೆ ಕಾಲ ಪಕ್ವವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.