ಬಜೆಟ್ ನಂತರ ನಾಲ್ಕೂ ದಿಕ್ಕುಗಳಿಂದ ರಥಯಾತ್ರೆ: ಕಾಂಗ್ರೆಸ್‌ನ ಬಸ್ ಯಾತ್ರೆಗೆ ಬಿಜೆಪಿ ಸಡ್ಡು
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿಯಾಗಿಯೇ ಪ್ರಚಾರ ಕೈಗೊಳ್ಳಲು ಮುಂದಾಗಿರುವ ಬಿಜೆಪಿ, ಬಜೆಟ್ ಅಧಿವೇಶನದ ಬಳಿಕ ರಾಜ್ಯದ ನಾಲ್ಕು ಕಡೆಯಿಂದ ರಥಯಾತ್ರೆ ನಡೆಸಲು ನಿರ್ಧಾರ ಕೈಗೊಂಡಿದೆ.
ನವದೆಹಲಿ (ಜ.17): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿಯಾಗಿಯೇ ಪ್ರಚಾರ ಕೈಗೊಳ್ಳಲು ಮುಂದಾಗಿರುವ ಬಿಜೆಪಿ, ಬಜೆಟ್ ಅಧಿವೇಶನದ ಬಳಿಕ ರಾಜ್ಯದ ನಾಲ್ಕು ಕಡೆಯಿಂದ ರಥಯಾತ್ರೆ ನಡೆಸಲು ನಿರ್ಧಾರ ಕೈಗೊಂಡಿದೆ. ಆ ಮೂಲಕ ಕಾಂಗ್ರೆಸ್ ನಡೆಸುತ್ತಿರುವ ‘ಪ್ರಜಾಧ್ವನಿ’ ಬಸ್ ಯಾತ್ರೆಗೆ ಸಡ್ಡು ಹೊಡೆಯಲು ಸಜ್ಜಾಗಿದೆ.
ದೆಹಲಿಯಲ್ಲಿ ಸೋಮವಾರದಿಂದ ಆರಂಭವಾಗಿರುವ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಪ್ರಸ್ತುತ ನಡೆಸಲಾಗುತ್ತಿರುವ ಜನ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ಬಳಿಕ ರಾಜ್ಯದ ನಾಲ್ಕು ಕಡೆಯಿಂದ ರಥಯಾತ್ರೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಮಹದಾಯಿ ನದಿಪಾತ್ರ (ಧಾರವಾಡ, ಗದಗ ಜಿಲ್ಲಾ ವ್ಯಾಪ್ತಿ), ಕೃಷ್ಣಾ ನದಿಪಾತ್ರ (ವಿಜಯಪುರ, ಬೆಳಗಾವಿ, ಬಾಗಲಕೋಟೆ), ಕಾವೇರಿ ನದಿಪಾತ್ರ (ಮೈಸೂರು, ಮಂಡ್ಯ) ಹಾಗೂ ಬೀದರ್‌ನಿಂದ ಕೊಪ್ಪಳದವರೆಗೆ ರಥಯಾತ್ರೆ ನಡೆಯಲಿದೆ. ಮಹದಾಯಿ ನದಿಪಾತ್ರದ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯುವ ರಥಯಾತ್ರೆ ವೇಳೆಯಲ್ಲಿಯೇ ಮಹದಾಯಿ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ರಥಯಾತ್ರೆ ನಡೆಯುವ ದಿನಾಂಕವನ್ನು ಮಂಗಳವಾರ ಪ್ರಕಟಿಸಲಾಗುವುದು. ಇದೇ ವೇಳೆ, ರಥಯಾತ್ರೆ ಕುರಿತ ರೂಪುರೇಷೆಗಳ ಬಗ್ಗೆಯೂ ತಿಳಿಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ
ಕಾರ್ಯಕಾರಿಣಿಯಲ್ಲಿ ಹಲವಾರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಚುನಾವಣಾ ಸಿದ್ಧತೆ ಕುರಿತು ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದೇವೆ. ನಕಾರಾತ್ಮಕ ಪ್ರಚಾರದ ಯತ್ನಗಳು ನಡೆದರೂ ಅವು ಪರಿಣಾಮ ಬೀರಿಲ್ಲ ಎಂದರು.