ಬೆಂಗಳೂರು(ನ.25): ‘ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಯೋಜನೆ ದೇಶದ ಇನ್ಯಾವ ರಾಜ್ಯದಲ್ಲೂ ಇಲ್ಲ. ಈ ವಿನೂತನ ಯೋಜನೆಯು ಇತರ ರಾಜ್ಯಗಳಿಗೂ ಪ್ರೇರಣೆಯಾಗಬೇಕು ಎಂಬುದು ಸರ್ಕಾರ ಅಭಿಲಾಷೆ. ಅದು ಸಾಕಾರವಾಗಬೇಕು ಎಂದರೆ ಸಮುದಾಯವೂ ಯೋಜನೆಯ ಯಶಸ್ಸಿಗೆ ಕೈ ಜೋಡಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕರೆ ನೀಡಿದರು.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ 1400 ಶಾಲೆಗಳನ್ನು ದತ್ತು ಪಡೆದ ಜನಪ್ರತಿನಿಧಿಗಳು, ವಿವಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ದತ್ತು ಸ್ವೀಕಾರ ಪತ್ರಗಳನ್ನು ವಿತರಿಸಿ ಮಾತನಾಡಿದರು. ಶಾಸಕರು, ಸಂಸದರು ಸೇರಿ ಜನಪ್ರತಿನಿಧಿಗಳು ಒಟ್ಟಾರೆ 1100ಕ್ಕೂ ಹೆಚ್ಚು ಶಾಲೆಗಳ ದತ್ತು ಪಡೆದಿದ್ದರೆ, ವಿವಿಗಳು ಹಾಗೂ ಸಂಘ-ಸಂಸ್ಥೆಗಳು ಇತರ 300 ಶಾಲೆ ದತ್ತು ಪಡೆದಿವೆ.

14 ವರ್ಷದಲ್ಲಿ ಮೊದಲ ಬಾರಿ ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಭಾರೀ ಏರಿಕೆ

‘ನಮ್ಮ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರ ವಿಶೇಷ ಪ್ರಯತ್ನದಿಂದ ದೇಶದಲ್ಲೇ ಪ್ರಥಮ ಬಾರಿಗೆ ಚುನಾಯಿತ ಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಕಂಕಣಬದ್ಧವಾಗಿರುವುದು ಸಂತೋಷದ ಸಂಗತಿ. ಜನಪ್ರತಿನಿಧಿಗಳು ಮತ್ರವಲ್ಲದೆ ರಾಜ್ಯದ ಅನೇಕ ಸರ್ಕಾರಿ ಸ್ವಾಮ್ಯದ ವಿವಿಗಳು, ಖಾಸಗಿ ವಿವಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಇನ್ನೂ ಅನೇಕರು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿರುವುದು ನಿಜಕ್ಕೂ ಶ್ಲಾಘನೀಯ. ಮಾಧ್ಯಮಗಳ ಮೂಲಕ ಇದು ನಾಡಿನ ಉದ್ದಗಲಕ್ಕೂ ಈ ವಿಷಯ ಗೊತ್ತಾಗಿ, ಇತರರಿಗೂ ಕೂಡಾ ದತ್ತು ಪಡೆಯಲು ಪ್ರೇರಣೆಯಾಗಲಿದೆ. ಸಮುದಾಯವೂ ಈ ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದರು.

‘ಸರ್ಕಾರಿ ಶಾಲೆಗಳ ದತ್ತು ಪಡೆಯುವ ಕಾರ್ಯಕ್ರಮ ಯಶಸ್ವಿಯಾಗಲು ದೊರೆಸ್ವಾಮಿ ಪ್ರಯತ್ನ ಶ್ಲಾಘನೀಯವಾದುದುದು. ಈ ವಿಚಾರದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳು ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಅನುಸರಿಸಬಹುದು’ ಎಂದು ಯಡಿಯೂರಪ್ಪ ಹೇಳಿದರು.

ಶಾಲೆಗೆ ಭೇಟಿ ನೀಡಿ:

‘ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಪ್ರತಿಯೊಬ್ಬರೂ ಕನಿಷ್ಠ 3-4 ತಿಂಗಳಿಗೆ ಒಮ್ಮೆಯಾದರೂ ಆ ಶಾಲೆಗೆ ತೆರಳಿ ಅಲ್ಲಿನ ಶಿಕ್ಷಕರು, ಮಕ್ಕಳ ಜೊತೆ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕು. ಅಷ್ಟೇ ಅಲ್ಲದೆ, 1 ದಿನ ಮಕ್ಕಳ ಪೋಷಕರನ್ನು ಕರೆಸಿ ಅವರೊಂದಿಗೆ ಸಮಾಲೋಚನೆ ನಡೆಸಬೇಕು. ದತ್ತು ಪಡೆದ ಶಾಲೆಯ ವಿದ್ಯಾರ್ಥಿಗಳು ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗಬಾರದು. ಅಷ್ಟೇ ಅಲ್ಲ, ಸಮಾಜಕ್ಕೆ ಶಕ್ತಿ ತುಂಬುವ ಉತ್ತಮ ನಾಗರಿಕರಾಗುವಂತೆ ಅವರನ್ನು ಪ್ರೇರೇಪಿಸಬೇಕು. ಆಗ ಮಾತ್ರ ಶಾಲೆಗಳನ್ನು ದತ್ತು ಪಡೆದ ಆ ಕೆಲಸ ಸಾರ್ಥಕವಾಗುತ್ತದೆ’ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಸರ್ಕಾರಿ, ಖಾಸಗಿ ಶಾಲೆಗಳ ಶುಲ್ಕ ಮನ್ನಾ..?

ಅರ್ಥಪೂರ್ಣ ಯೋಜನೆ- ಕಾರಜೋಳ:

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ಇಂತಹ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಬಂದ ಕಾಲದಿಂದ ಯಾವ ಸರ್ಕಾರವೂ ಮಾಡಿರಲಿಲ್ಲ. ಈ ರೀತಿ ಅರ್ಥಪೂರ್ಣ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಮಾಡಿದೆ. ಇದರ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲಬೇಕು. ನಾನು ನನ್ನ ಕ್ಷೇತ್ರದಲ್ಲಿ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದೇನೆ’ ಎಂದರು.

ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ‘ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ದೆಹಲಿ ರೀತಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ಅಲ್ಲಿನ ಸ್ಥಿತಿ ಭಿನ್ನವಿದೆ. ದೆಹಲಿಯಲ್ಲಿ ನಾಲ್ಕು ಸಾವಿರ ಶಾಲೆಗಳಿವೆ. ಅಲ್ಲಿ ನೀರಾವರಿಗೆ ಖರ್ಚು ಮಾಡುವ ಅಗತ್ಯ ಇಲ್ಲ. ಆದರೆ, ನಮ್ಮಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿವೆ. ನಾವು ಕೂಡಾ ಅಲ್ಲಿನ ವಿಶೇಷ ಸಂಗತಿಗಳನ್ನು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ತರುತ್ತಿದ್ದೇವೆ’ ಎಂದರು.

ಮಕ್ಕಳ ಯೋಗಕ್ಷೇಮ ಎಲ್ಲರ ಹೊಣೆ- ದೊರೆಸ್ವಾಮಿ:

ಇದಕ್ಕೂ ಮುನ್ನ ಪ್ರಸ್ತಾವಿಕ ನುಡಿಗಳನ್ನಾಡಿದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು, ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖಾಸಗಿ ಶಾಲೆಗಳು ಪ್ರಾರಂಭವಾಗಿದ್ದರೂ ಇಂದಿಗೂ ರೈತರು, ಬಡವರು, ಹಿಂದುಳಿದ ವರ್ಗಗಳ ಶೇ.85ರಷ್ಟುಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳ ಯೋಗಕ್ಷೇಮವು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾಸಗಿಯವರೂ ಸರ್ಕಾರದ ಜೊತೆ ಕೈಜೋಡಿಸಿ ಆ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು. ಆದರೆ, ಶೇ.70ರಷ್ಟುಶಾಲೆಗಳಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆ ಇದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಶಾಲೆಗಳನ್ನು ದತ್ತು ಪಡೆಯಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಹಾಗೂ ಸಂಘ ಸಂಸ್ಥೆಗಳು ಕೂಡ ಕೈಜೋಡಿಸಿ ಒಟ್ಟಾರೆ 1400ಕ್ಕೂ ಹೆಚ್ಚು ಶಾಲೆಗಳನ್ನು ಇದುವರೆಗೂ ದತ್ತು ಪಡೆದಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಈ ಕಂಪನಿಗಳೂ ಕೂಡ ತಮ್ಮ ‘ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‌ಆರ್‌) ನಿಧಿಯಡಿ ಸರ್ಕಾರಿ ಶಾಲೆಗಳ ದತ್ತು ಪಡೆಯಲು ಮುಂದೆ ಬರಬೇಕೆಂದು ಮನವಿ ಮಾಡಿದರು. ಶಾಸಕ ರಿಜ್ವಾನ್‌ ಅರ್ಷದ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

1414 ಸರ್ಕಾರಿ ಶಾಲೆ ದತ್ತು ಸ್ವೀಕಾರಕ್ಕೆ ಸಿದ್ಧತೆ: ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಸ್ಕೂಲ್‌ ಅಭಿವೃದ್ಧಿ

ಸ್ವತಃ ಸಿಎಂರಿಂದಲೇ 10 ಶಾಲೆಗಳ ದತ್ತು!: ಪ್ರಮಾಣಪತ್ರ ನೀಡಿದ ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಗೆ ದತ್ತು ಸ್ವೀಕಾರ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಶಿಕಾರಿಪುರ ತಾಲೂಕಿನ 10 ಶಾಲೆಗಳನ್ನು ದತ್ತು ಪಡೆದ ಮುಖ್ಯಮಂತ್ರಿಗೆ ಸಚಿವ ಸುರೇಶ್‌ ಕುಮಾರ್‌ ಪ್ರಮಾಣ ಪತ್ರ ಸಲ್ಲಿಸಿದರು.

ಮುಧೋಳ ಕ್ಷೇತ್ರದ 5 ಶಾಲೆಗಳನ್ನು ದತ್ತು ಪಡೆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮೊಳಕಾಲ್ಮೂರು ಕ್ಷೇತ್ರದಲ್ಲಿ 5 ಶಾಲೆಗಳನ್ನು ದತ್ತು ಸ್ವೀಕರಿಸಿದ ಸಚಿವ ಶ್ರೀರಾಮುಲು, ರಾಜಾಜಿನಗರ ಕ್ಷೇತ್ರದಲ್ಲಿ 5 ಶಾಲೆಗಳನ್ನು ದತ್ತು ಸ್ವೀಕರಿಸಿದ ಸಚಿವ ಸುರೇಶ್‌ ಕುಮಾರ್‌, ಮದ್ದೂರಿನ 5 ಶಾಲೆಗಳನ್ನು ದತ್ತು ಪಡೆದ ವಿಧಾನಪರಿಷತ್‌ ಸದಸ್ಯ ಶ್ರೀಕಂಠೇಗೌಡ ಅವರಿಗೆ ಜನಪ್ರತಿನಿಧಿಗಳ ಪರವಾಗಿ ಮುಖ್ಯಮಂತ್ರಿ ಪ್ರಮಾಣ ಸಾಂಕೇತಿಕವಾಗಿ ಪತ್ರಗಳನ್ನು ನೀಡಿದರು.

ಅದೇ ರೀತಿ ತಲಾ 10 ಶಾಲೆಗಳನ್ನು ದತ್ತು ಪಡೆದ ಸರ್ಕಾರಿ ಸ್ವಾಮ್ಯದ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿವಿ, ಮಹಾರಾಣಿ ಕ್ಲಸ್ಟರ್‌ ವಿವಿ, ರಾಜೀವ್‌ ಗಾಂಧಿ ಆರೋಗ್ಯ ವಿವಿ, ರಾಣಿ ಚೆನ್ನಮ್ಮ ವಿವಿ, ಕೃಷ್ಣದೇವರಾಯ ವಿವಿ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಮಂಗಳೂರು, ಮೈಸೂರು, ತುಮಕೂರು ವಿಶ್ವವಿದ್ಯಾಲಯಗಳು, ಖಾಸಗಿ ವಿವಿಗಳಾದ ಆದಿಚುಂಚನಗಿರಿ, ಸಿಎಂಆರ್‌, ಗಾರ್ಡನ್‌ ಸಿಟಿ, ರೇವಾ, ಕೆಎಲ್‌ಇ, ಕ್ರೈಸ್ಟ್‌, ಪಿಇಎಸ್‌ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ, ಧರ್ಮಸ್ಥಳ ಮಂಜುನಾಥೇಶ್ವರ ವಿವಿ, ಸ್ವಾಮಿ ವಿವೇಕಾನಂದ ಯೋಗ ವಿವಿಗಳು ಹಾಗೂ ಕನಿಷ್ಠ ಒಂದರಿಂದ ಗರಿಷ್ಠ 5 ಶಾಲೆಗಳನ್ನು ದತ್ತು ಪಡೆದ ಮೌಂಟ್‌ ಕಾರ್ಮೆಲ್‌, ಸೆಂಟ್‌ ಜೋಸೆಫ್‌ ಕಾಲೇಜು, ಶೇಷಾದ್ರಿಪುರ ಎಜುಕೇಷನ್‌ ಟ್ರಸ್ಟ್‌, ಕೃಷ್ಣಾ ಇಂಟರ್‌ನ್ಯಾಷನಲ್‌ ಸ್ಕೂಲ್‌, ರಕ್ಷಾ ಪ್ರೌಢೇಷನ್‌ ಸೇರಿದಂತೆ ವಿವಿಧÜ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದತ್ತು ಸ್ವೀಕಾರ ಪ್ರಮಾಣ ಪತ್ರ ವಿತರಿಸಲಾಯಿತು.

‘ಕನ್ನಡಪ್ರಭ-ಸುವರ್ಣನ್ಯೂಸ್‌’ 10 ಶಾಲೆ ದತ್ತು

‘ಕನ್ನಡಪ್ರಭ’ ಮತ್ತು ಸೋದರ ಸಂಸ್ಥೆ ‘ಸುವರ್ಣ ನ್ಯೂಸ್‌’ ವತಿಯಿಂದ 10 ಶಾಲೆಗಳನ್ನು ದತ್ತು ಸ್ವೀಕರಿಸಿದ್ದು, ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಶಾಲೆಗಳ ದತ್ತು ಸ್ವೀಕಾರ ಪ್ರಮಾಣ ಪತ್ರ ವಿತರಿಸಿದರು.

ಪ್ರಾಸ್ತಾವಿಕ ಭಾಷಣದ ವೇಳೆ ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಸಂಸ್ಥೆಗಳ ದತ್ತು ಸ್ವೀಕಾರ ಕಾರ್ಯವನ್ನು ಶ್ಲಾಘಿಸಿದ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರು, ‘ವಿಶ್ವವಿದ್ಯಾಲಯಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆಗೆ ಜೊತೆಗೆ ಈ ಎರಡು ಮಾಧ್ಯಮ ಸಂಸ್ಥೆಗಳೂ ಕೂಡ 10 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಸರ್ಕಾರದೊಂದಿಗೆ ಕೈಜೋಡಿಸಿವೆ. ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಆರಂಭದಿಂದಲೂ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ’ ಎಂದರು