ಹೊಸದುರ್ಗ (ಸೆ.17) : ಸರ್ಕಾರಿ ಮತ್ತು ಖಾಸಗಿ ಶಾಲೆಯ ಶುಲ್ಕಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಬಿಎಸ್‌ಪಿ ತಾಲೂಕು ಘಟಕದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಬಿಎಸ್‌ಪಿ ತಾಲೂಕು ಅಧ್ಯಕ್ಷ ಶಂಕರಪ್ಪ ಹೆಗ್ಗೆರೆ ಮಾತನಾಡಿ, ಕೋವಿಡ್‌ -19 ಕಾರಣದಿಂದ ದೇಶಾದ್ಯಂತ 16 ಕೋಟಿ ಅಸಂಘಟಿತ ವಲಯ ಕಾರ್ಮಿಕರು ಮತ್ತು ಸಂಘಟಿತ ವಲಯದ 2 ಕೋಟಿ ಸೇರಿ ಒಟ್ಟು 18 ಕೋಟಿಗೂ ಹೆಚ್ಚು ಜನರು ದೇಶಾದ್ಯಂತ ಉದ್ಯೋಗ ಕಳೆದುಕೊಂಡು ಬಡತನ ಮತ್ತು ನಿರುದ್ಯೋಗಕ್ಕೆ ತುತ್ತಾಗಿದ್ದಾರೆ. ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ ಎಂದರು.

ಸರ್ಕಾರಿ ಶಾಲೆಗೆ ಹೊಸ ಟಚ್ : ಕೊರೋನಾ ಕಾಲದಲ್ಲೊಂದು ಒಳ್ಳೆ ಕೆಲಸ ...

ಲಾಕ್‌ಡೌನ್‌ನಿಂದ ಆನ್‌ಲೈನ್‌ ಪಾಠ ಬೋಧಿಸುತ್ತಿರುವುದರಿಂದ ಬಡವರು ತಮ್ಮ ಮಕ್ಕಳಿಗೆ ಮೊಬೈಲ್‌ ಕೊಡಿಸಲಾಗದೆ ನೋವು ಅನುಭವಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಪೋಷಕರ ನೆರವಿಗೆ ನಿಲ್ಲುವುದು ಸಾಮಾಜಿಕ ಮತ್ತು ನೈತಿಕ ಹೊಣೆಯಾಗಿದೆ ಎಂದರು.

ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಖಾಸಗಿ ಮತ್ತು ಸರ್ಕಾರಿ ಶಾಲಾ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಜನರ ನೆರವಿಗೆ ನಿಲ್ಲಬೇಕು. ಹಾಗೆಯೇ ಸಾಲ ಮಾಡಿ, ಇಲ್ಲವೇ ತಮ್ಮ ಒಡವೆಗಳನ್ನು ಅಡವಿಟ್ಟು ಶಾಲಾ ಶುಲ್ಕಗಳನ್ನು ಭರಿಸಿರುವ ಪೋಷಕರಿಗೆ ವಾಪಸ್‌ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಕೆ.ತಿಮ್ಮಪ್ಪ, ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷ ಎಚ್‌.ಈ.ರಾಜಪ್ಪ, ತಾಲೂಕು ಉಸ್ತುವಾರಿ ಕೆ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಜೆ.ಟಿ.ಮಂಜುನಾಥ, ಕಾರ್ಯದರ್ಶಿ ರಾಮಚಂದ್ರಪ್ಪ, ಮಹಾಂತೇಶ್‌ ಮತ್ತಿತರರಿದ್ದರು.