ಬೆಂಗಳೂರು (ನ.02):  ಕಳೆದ 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳವಾಗಿದ್ದು, ಕಳೆದ ವರ್ಷಕ್ಕಿಂತ 90 ಸಾವಿರ ಮಕ್ಕಳು ಈ ಬಾರಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೋನಾ ಅವಧಿಯಲ್ಲಿ ದುರ್ಬಲ ಕುಟುಂಬಗಳ ಮಕ್ಕಳು, ಪೋಷಕರು ಸರ್ಕಾರಿ ಶಾಲೆಯತ್ತ ಮುಖ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಶಾಲೆ-ಕಾಲೇಜು, ಚಿತ್ರಮಂದಿರ ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ..

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದ್ದು, ಈ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ದಾಪುಗಾಲು ಇಟ್ಟಿದೆ. ಕನ್ನಡದ ವಾತಾವರಣದಲ್ಲಿ ಆಂಗ್ಲಭಾಷೆಯನ್ನೂ ಕಲಿಯುವ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗಳಿಗೆ ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ. ವೈಜ್ಞಾನಿಕವಾಗಿಯೂ ಮಾತೃಭಾಷೆ ಮೂಲಕ ಜಗತ್ತನ್ನು ನೋಡಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.

ರಾಜ್ಯವನ್ನು ದೇಶದಲ್ಲೇ ಮಾದರಿ ರಾಜ್ಯವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ನಾಡಿನ ಹಿರಿಯರ, ಬುದ್ಧಿಜೀವಿಗಳ, ತಜ್ಞರ ಮಾರ್ಗದರ್ಶನ ಮತ್ತು ಸಹಕಾರ ಪಡೆದು ನಮ್ಮ ಸರ್ಕಾರ ಮುಂದಡಿ ಇಡುತ್ತಿದೆ. ನಮ್ಮ ಭಾಷೆಯನ್ನು ಶಿಕ್ಷಣ ಸೇರಿದಂತೆ ದೈನಂದಿನ ಎಲ್ಲ ವ್ಯವಹಾರಗಳಲ್ಲಿಯೂ ಬಳಸಿದರೆ, ಭಾಷೆ ಜೊತೆಗೆ ನಾವೂ ಉಳಿಯುತ್ತೇವೆ. ಕನ್ನಡದ ಹೊರತಾಗಿ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಸಾಧ್ಯವಾಗದ ಮಾತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡದ ಬಗೆಗಿನ ಸರ್ಕಾರದ ಬದ್ಧತೆ, ಸಂಕಲ್ಪಗಳನ್ನು ಕೊರೋನಾ ಕಸಿಯಲು ಸಾಧ್ಯವಿಲ್ಲ. ಕರ್ನಾಟಕವನ್ನು ಇಡೀ ವಿಶ್ವವೇ ಎದುರು ನೋಡುತ್ತಿರುವುದಕ್ಕೆ ನಾಡಿನ ಪರಂಪರೆ ಜೊತೆಗೆ ಶಿಕ್ಷಣವೂ ಕಾರಣವಾಗಿದೆ. ದೇಶ ವಿದೇಶಗಳ ಜನರು ವ್ಯಾಸಂಗಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆ ಪೂರಕವಾಗಿದೆ ಎಂದರು.