ಬೆಂಗಳೂರು(ಅ.18): ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರ ಮನವಿಗೆ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದುವರೆಗೂ ಒಟ್ಟಾರೆ 1414 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ.

ಈ ಸಂಬಂಧ ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು, ಚಿತ್ರರಂಗದ ಗಣ್ಯರು, ವಿವಿಧ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು, ಐಟಿ ಬಿಟಿ ಕಂಪನಿಗಳು, ಸ್ವಾಯತ್ತ ಕಾಲೇಜುಗಳು, ಮಾಧ್ಯಮಗಳು, ದಾನಿಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಜನರು ಹಾಗೂ ಸಂಸ್ಥೆಗಳು ಒಟ್ಟಾರೆ 1414 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಸಂಬಂಧ ಸರ್ಕಾರಕ್ಕೆ ತಾವು ಮಾಡಿದ್ದ ಶಿಫಾರಸಿನ ಆಧಾರದ ಮೇಲೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎಲ್ಲ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಬಳಿಕ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು ಅತಿ ಉತ್ಸಾಹದಿಂದ ಶಾಲೆಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಜನಪ್ರತಿನಿಧಿಳೇ ಒಟ್ಟಾರೆಯಾಗಿ ಸುಮಾರು 1 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ಉಳಿದ ಕ್ಷೇತ್ರಗಳ ಜನರು ಕನಿಷ್ಠ 5ರಿಂದ 10 ಶಾಲೆಗಳನ್ನು ದತ್ತು ಪಡೆಯಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.

ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉಚಿತ ದುಬೈ ಪ್ರವಾಸ : ಬಂಪರ್ ಆಫರ್

ಯಾರಾರ‍ಯರಿಂದ ಎಷ್ಟು ಸರ್ಕಾರಿ ಶಾಲೆ ದತ್ತು?

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಐದು ಶಾಲೆ, ಮೂವರು ಉಪಮುಖ್ಯಮಂತ್ರಿಗಳು ತಲಾ ಐದು ಶಾಲೆ ಸೇರಿದಂತೆ 224 ಶಾಸಕರಿಂದ 688 ಶಾಲೆಗಳ ದತ್ತು, 71 ವಿಧಾನ ಪರಿಷತ್‌ ಸದಸ್ಯರಿಂದ 213 ಶಾಲೆ, 27 ಸಂಸದರಿಂದ 135 ಶಾಲೆ, 11 ರಾಜ್ಯಸಭಾ ಸದಸ್ಯರಿಂದ 55 ಶಾಲೆಗಳ ದತ್ತು ಪಡೆಯುವುದಾಗಿ ಹೇಳಿದ್ದಾರೆ. ತುಮಕೂರು ವಿವಿ, ಮೈಸೂರು ವಿವಿ, ಬೆಂಗಳೂರು ಉತ್ತರ ವಿವಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿವಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮಂಗಳೂರು ವಿವಿ, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿವಿ, ಶಿವಮೊಗ್ಗದ ಕುವೆಂಪು ವಿವಿ ಈ ಎಂಟು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು ತಲಾ 10ರಂತೆ ಒಟ್ಟು 80 ಶಾಲೆಗಳನ್ನು ದತ್ತು ಪಡೆಯುವುದಾಗಿ ತಿಳಿಸಿವೆ.

14 ಖಾಸಗಿ ವಿವಿಗಳಿಂದ ತಲಾ 10 ಶಾಲೆ ದತ್ತು: ಸ್ವತಃ ಪ್ರೊ.ಎಚ್‌.ಎಸ್‌.ದೊರೆಸ್ವಾಮಿ ಅವರು ಕುಲಾಧಿಪತಿಗಳಾಗಿರುವ ಪಿಇಎಸ್‌ ವಿಶ್ವವಿದ್ಯಾಲಯ, ರೇವಾ ವಿವಿ, ಪ್ರೆಸಿಡೆನ್ಸಿ ವಿವಿ, ಸಿಎಂಆರ್‌ ವಿವಿ, ಶರಣ ಬಸವ ವಿವಿ ಕಲಬುರಗಿ, ನಿಟ್ಟೆವಿವಿ, ಆದಿಚುಂಚನಗಿರಿ ವಿವಿ, ಕ್ರೈಸ್ಟ್‌ ವಿವಿ, ಗೀತಂ ವಿವಿ ದೊಡ್ಡಬಳ್ಳಾಪುರ, ಗಾರ್ಡನ್‌ ಸಿಟಿ ವಿವಿ, ದಯಾನಂದ ಸಾಗರ ವಿವಿ, ಎಸ್‌ಡಿಎಂ ವಿವಿ, ಕೆಇಎಲ್‌ ವಿವಿ, ಸತ್ಯಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಹೈಯರ್‌ ಲರ್ನಿಂಗ್‌ ಈ ಎಲ್ಲಾ ಖಾಸಗಿ ವಿವಿಗಳು ತಲಾ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದಾಗಿ ತಿಳಿಸಿವೆ. ಇವುಗಳಲ್ಲದೆ, ಬೆಂಗಳೂರಿನ ಇಂಡಿಯನ್‌ ಅಕಾಡೆಮಿ 4 ಶಾಲೆ, ಮೌಂಟ್‌ ಕಾರ್ಮೆಲ್‌ ಪದವಿ ಕಾಲೇಜುಗಳು 10 ಶಾಲೆಗಳನ್ನು ದತ್ತು ಪಡೆಯುವುದಾಗಿ ಹೇಳಿವೆ.

ಸುವರ್ಣ ನ್ಯೂಸ್‌- ಕನ್ನಡಪ್ರಭ 10 ಶಾಲೆ

ಮಾಧ್ಯಮ ಕ್ಷೇತ್ರದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಸುದ್ದಿವಾಹಿನಿ 10 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಹೇಳಿವೆ. ಸ್ಯಾಂಡಲ್‌ವುಡ್‌ ಖ್ಯಾತ ನಟ ಕಿಚ್ಚ ಸುದೀಪ್‌ 10 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ ಎಂದು ದೊರೆಸ್ವಾಮಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಜನರು ಮುಂದೆ ಬನ್ನಿ

ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಮೂಲಸೌಕರ್ಯ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳು, ಸಂಸ್ಥೆಗಳು ಒಟ್ಟು 1414 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದು ನಿಜಕ್ಕೂ ಸಂತಸದ ವಿಚಾರ. ಇನ್ನಷ್ಟುದಾನಿಗಳು, ಉಳ್ಳವರು, ಉದ್ಯಮಿಗಳು ಇದೇ ರೀತಿ ಮತ್ತಷ್ಟುಶಾಲೆಗಳನ್ನು ದತ್ತು ಪಡೆಯಲು ಮುಂದೆ ಬರಬೇಕೆಂದು ಮನವಿ ಮಾಡುತ್ತೇನೆ ಎಂದು ಸರ್ಕಾರದ ಶೈಕ್ಷಣಿಕ ಸಲಹೆಗಾರ ಡಾ. ಎಂ.ಆರ್‌.ದೊರೆಸ್ವಾಮಿ ಅವರು ತಿಳಿಸಿದ್ದಾರೆ.