ಪ್ರಸಕ್ತ ವರ್ಷದಲ್ಲಿ ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ (ಎಲ್‌ಕೆಜಿ-ಯುಕೆಜಿ) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ವಿಧಾನಸಭೆ (ಮಾ.19): ಪ್ರಸಕ್ತ ವರ್ಷದಲ್ಲಿ ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ (ಎಲ್‌ಕೆಜಿ-ಯುಕೆಜಿ) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ರಾಜ್ಯವು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಅತಿಹೆಚ್ಚು ಗೌರವ ಧನ ನೀಡುವಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿದೆ. ಹರಿಯಾಣ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಬಳಿಕ ಹೆಚ್ಚು ಗೌರವ ಧನ ಕೊಡಲಾಗುತ್ತಿದೆ ಎಂದರು.
ಪೌಷ್ಟಿಕ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ. ಬಿಎಬಿಎಡ್, ಎಂಎ, ಎಂಕಾಂ ಪದವಿ ಪಡೆದ ಸುಮಾರು 17 ಸಾವಿರ ಅಂಗನವಾಡಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಗುಣಮಟ್ಟ ಕಾಯ್ದುಕೊಳುವುದು ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರ ಕಣ್ತೆರೆಯಬೇಕು
ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ 2,700 ರು. ಗೌರವ ಧನವನ್ನು ಪಾವತಿಸಿದರೆ, ಉಳಿದ 9,800 ರು.ಗಳನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರು. ಮತ್ತು ಸಹಾಯಕಿಯರಿಗೆ 750 ರು. ಹೆಚ್ಚಿಸಲಾಗಿದೆ. ಇನ್ನೂ ಹೆಚ್ಚಿನ ಗೌರವ ಧನಕ್ಕೆ ಮನವಿ ಬಂದಿದೆ.
ಹೀಗಾಗಿ ನಾವು ಈಗಾಗಲೇ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದೆ ಹೋದರೆ ನಾವೂ ಒಂದು ಹೆಜ್ಜೆ ಮುಂದೆ ಹೋಗುತ್ತೇವೆ. ಅವರೂ ಕಣ್ತೆರೆಯಬೇಕು ಎಂದು ಸಚಿವರು ಹೇಳಿದರು. ಪ್ರಸಕ್ತ ವರ್ಷದಿಂದ 5 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.


