ರಾಜ್ಯ ಸರ್ಕಾರವು ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸಿದ್ಧತೆ ನಡೆಸಿದೆ. ಹಾಲಿನ ದರವನ್ನು ರೈತರ ಹಿತದೃಷ್ಟಿಯಿಂದ ಹೆಚ್ಚಿಸಲಾಗಿದ್ದು, ಸಾರಿಗೆ ನಷ್ಟ ಸರಿದೂಗಿಸಲು ಬಸ್ ದರ ಏರಿಕೆ ಕುರಿತು ತೀರ್ಮಾನ ಕೈಗೊಳ್ಳಲು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ. ಯಾವಾಗ ಜಾರಿ?
ಬೆಂಗಳೂರು (ಅ.30): ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಬಿಗ್ ಶಾಕ್ ನೀಡಿದೆ. ಇಂದಿನ ಸಚಿವ ಸಂಪುಟದಲ್ಲಿ ಬಸ್ ಟಿಕೆಟ್ ದರ ಏರಿಕೆ ಜೊತೆಗೆ ಟಿಕೆಟ್ ದರ ಏರಿಕೆ ಬಗ್ಗೆ ಚರ್ಚೆಯಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಈಗಾಗಲೇ ನಾವು ಬಸ್ ಪ್ರಯಾಣದ ದರ ಏರಿಕೆ ಮಾಡಬೇಕು ಅಂತ ತೀರ್ಮಾನ ಮಾಡಿದ್ವಿ. ಆದರೆ ದರ ಏರಿಕೆಯನ್ನು ಸಾರಿಗೆ ಇಲಾಖೆಗೆ ಬಿಡಲಾಗಿದೆ ಎಂದರು.
ಬಸ್ ದರ ಎಷ್ಟು ಹೆಚ್ಚಾಗುತ್ತೆ?
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಎಲ್ಲರ ಜೊತೆ ಚರ್ಚೆ ಮಾಡಿದ್ದು ದರ ಏರಿಕೆ ಬಗ್ಗೆ ಸಾರಿಗೆ ಇಲಾಖೆಯವರೆ ಕ್ರಮಕೈಗೊಳ್ಳಿ ಅಂತ ಹೇಳಿದ್ದಾರೆ. ಹೀಗಾಗಿ ನಾನು ಸಾರಿಗೆ ಇಲಾಖೆ ಸೆಕ್ರೆಟರಿ ಸೇರಿದಂತೆ ನಾಲ್ಕು ನಿಗಮದ ಎಂಡಿಗಳ ಜೊತೆ ನವೆಂಬರ್ 3ರಂದು ಸಭೆ ನಡೆಸುತ್ತೇನೆ. ಎಷ್ಟು ದರ ಜಾಸ್ತಿ ಮಾಡಬಹುದು ಅಂತ ಆಮೇಲೆ ನಿರ್ಧಾರ ಮಾಡುತ್ತೇವೆ. ಬಳಿಕ ನವೆಂಬರ್ 4ರಂದು ನಾನೇ ಸುದ್ದಿಗೋಷ್ಟಿ ಮಾಡಿ ಟಿಕೆಟ್ ದರ ಹೆಚ್ಚಳ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಹೇಳಿದ್ದೇನು?
ಹಾಲಿನ ದರವನ್ನು 12ರಿಂದ 15 ರು.ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು 8 ರು. ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡಬೇಕೆಂದು ಪಕ್ಷಾತೀತವಾಗಿ ಎಲ್ಲ ಪಕ್ಷದ ಶಾಸಕರು ಬೇಡಿಕೆ ಇಟ್ಟಿದ್ದರು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ರೈತರು ನಮಗೆ ಮುಖ್ಯ ಎಂದರು.
ಹಾಲಿನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ರೈತರಿದ್ದರೆ ಹಾಲು ಕುಡಿಯಬಹುದು. ಇಲ್ಲದಿದ್ದರೆ ಹಾಲು ಕುಡಿಯಲು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದರು. ಪ್ಲಾಸ್ಟಿಕ್ ಕವರ್, ಡೀಸೆಲ್, ಪೆಟ್ರೋಲ್ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ಹಾಲಿನ ಸಾರಿಗೆ ವೆಚ್ಚವೂ ಏರಿಕೆಯಾಗಿದೆ. ಎಲ್ಲರೊಂದಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ
ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ನಮ್ಮಲ್ಲಿ ಬೆಲೆ ಕಡಿಮೆ ಇದ್ದಿದ್ದರಿಂದ ಆಂಧ್ರ, ಮಹಾರಾಷ್ಟ್ರಕ್ಕೂ ಹಾಲು ಹೋಗುತ್ತಿತ್ತು. ಅದನ್ನು ತಡೆಯಬೇಕಿತ್ತು. ತಿರುಪತಿಗೆ ನಂದಿನಿ ತುಪ್ಪವನ್ನೇ ಖರೀದಿ ಮಾಡುತ್ತಾರೆ. ಮೈಸೂರು ಪಾಕ್ ಸೇರಿದಂತೆ ಇತರೆ ಪದಾರ್ಥಗಳಿಗೆ ನಂದಿನಿ ತುಪ್ಪದ ಬೇಡಿಕೆ ಇದೆ. ಇದರ ಜೊತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೈತರಿಗೆ ನಷ್ಟವಾಗುತ್ತಿರುವುದರಿಂದ ಸರ್ಕಾರ ಈ ತೀರ್ಮಾನವನ್ನು ಮಾಡಿದೆ ಎಂದರು.
ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ದರವೂ ಏರಿಕೆ?
ಸಾರಿಗೆ ಇಲಾಖೆಯಲ್ಲಿ ಬಹಳ ನಷ್ಟವಾಗಿದ್ದು, ಡೀಸೆಲ್ಗೆ ಕೂಡ ಅನುದಾನವಿರಲಿಲ್ಲ. ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಸರ್ಕಾರ ನೀಡಲಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆಯವರೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ ಎಂದರು.






