ರಾಜ್ಯ ಸರ್ಕಾರವು ಕೆಎಂಎಫ್ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಿದ್ದು, ನವೆಂಬರ್ 1ರಿಂದ ಹೊಸ ದರ ಜಾರಿಗೆ ಬರಲಿದೆ. ಈ ಹೆಚ್ಚಳದಲ್ಲಿ 7 ರೂ. ನೇರವಾಗಿ ರೈತರಿಗೆ ಪಾವತಿಯಾಗಲಿದ್ದು, ಅವರ ಒಟ್ಟು ಆದಾಯ ಲೀಟರ್‌ಗೆ 47 ರೂ.ಗೆ ಏರಿಕೆಯಾಗಲಿದೆ. ಉತ್ಪಾದನಾ ವೆಚ್ಚ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು (ಅ.29): ರಾಜ್ಯದ ಲಕ್ಷಾಂತರ ಹೈನುಗಾರರಿಗೆ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲೇ ದೊಡ್ಡ ಸಿಹಿಸುದ್ದಿ ನೀಡಿದೆ. ಕರ್ನಾಟಕ ಹಾಲು ಮಹಾಮಂಡಳದ (KMF) 'ನಂದಿನಿ' ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲು ರಾಜ್ಯ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪರಿಷ್ಕೃತ ನಂದಿನಿ ಹಾಲಿನ ಹೊಸ ದರವು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಆದರೆ, ಇದರಲ್ಲಿ ರೈತರಿಗೆ ಎಷ್ಟು ಹಣವನ್ನು ನೀಡಲಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
₹8 ಹೆಚ್ಚಳದಲ್ಲಿ ರೈತರಿಗೆ ಸಿಗೋದೆಷ್ಟು?
ಹಾಲಿನ ದರ ಏರಿಕೆಯಿಂದ ಸಾರ್ವಜನಿಕರ ಜೇಬಿಗೆ ಕೊಂಚ ಹೊರೆಯಾದರೂ, ಹೆಚ್ಚಳವಾಗುವ 8 ರೂಪಾಯಿಯ ಸಿಂಹಪಾಲು ನೇರವಾಗಿ ಹೈನುಗಾರರ ಖಾತೆಗೆ ತಲುಪಲಿದೆ. ಹೆಚ್ಚಳವಾಗುವ ₹8 ದರದಲ್ಲಿ ₹7 ನೇರವಾಗಿ ರೈತರಿಗೆ ನೀಡಲಾಗುತ್ತದೆ. ಉಳಿದ ₹1 ಒಕ್ಕೂಟಗಳ ನಿರ್ವಹಣಾ ವೆಚ್ಚಕ್ಕೆ ಸಲ್ಲಲಿದೆ.
ರೈತರ ಒಟ್ಟು ಆದಾಯ ₹47ಕ್ಕೆ ಏರಿಕೆ!
ಇಲ್ಲಿಯವರೆಗೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹35 ಮೂಲ ಬೆಲೆ ಹಾಗೂ ₹5 ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ ಸೇರಿದಂತೆ ಒಟ್ಟು ₹40 ಲಭ್ಯವಾಗುತ್ತಿತ್ತು. ಹೊಸ ತೀರ್ಮಾನದಿಂದಾಗಿ:
ಹೊಸ ಮೂಲ ಬೆಲೆ: ₹42 (ಹಳೆಯ ₹35 + ಹೆಚ್ಚುವರಿ ₹7)
ಸರ್ಕಾರದ ಪ್ರೋತ್ಸಾಹ ಧನ: ₹5 (ಅಂತೆಯೇ ಮುಂದುವರಿಯಲಿದೆ)
ರೈತರಿಗೆ ಸಿಗುವ ಒಟ್ಟು ಮೊತ್ತ: ₹47 (ಲೀಟರ್‌ಗೆ)
ದರ ಏರಿಕೆಗೆ ಕಾರಣವೇನು?
ಸಂಪುಟ ಸಭೆಯ ನಿರ್ಧಾರದ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ರಾಜ್ಯದ ಲಕ್ಷಾಂತರ ಕುಟುಂಬಗಳು ತಮ್ಮ ದಿನನಿತ್ಯದ ಬದುಕಿಗಾಗಿ ಹೈನುಗಾರಿಕೆಯನ್ನೇ ನಂಬಿಕೊಂಡಿವೆ. ಹಾಲಿನಿಂದ ಬರುವ ಆದಾಯ ಅವರ ಸಂಸಾರದ ಮುಖ್ಯ ಆಧಾರವಾಗಿದೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ದರ ಏರಿಕೆ ಮಾಡುವಂತೆ ಪಕ್ಷಾತೀತವಾಗಿ ಎಲ್ಲಾ ರೈತರು ಹಾಗೂ ಒಕ್ಕೂಟಗಳು ನಿರಂತರವಾಗಿ ಒತ್ತಡ ತಂದಿದ್ದವು. ಜೊತೆಗೆ, ರಾಜ್ಯದಲ್ಲಿ ಎದುರಾದ ತೀವ್ರ ಬರಗಾಲದ ಪರಿಸ್ಥಿತಿಯಿಂದಾಗಿ ಒಕ್ಕೂಟಗಳಿಗೆ ಸರಬರಾಜಾಗುವ ಹಾಲಿನ ಪ್ರಮಾಣದಲ್ಲಿ ಪ್ರತಿದಿನ ಸುಮಾರು 10 ಲಕ್ಷ ಲೀಟರ್ ಕುಸಿತ ಕಂಡುಬಂದಿತ್ತು. ರೈತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲು ತೀರ್ಮಾನ ಕೈಗೊಳಗ್ಳಲಾಗಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಕಡಿಮೆ ಬೆಲೆಯಿದೆ
ದೇಶದ ಇತರೆ ರಾಜ್ಯಗಳ ಹಾಲಿನ ಸರಾಸರಿ ದರ ನೋಡಿದರೆ ಲೀಟರ್‌ಗೆ ₹56 ಇದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ ₹46 ಇತ್ತು. ಇತರ ರಾಜ್ಯಗಳ ದರವನ್ನು ಉಲ್ಲೇಖಿಸಿಯೇ ರೈತರು ತಮ್ಮ ನ್ಯಾಯಯುತ ವಾದ ಮಂಡಿಸಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ರೈತರ ಹಿತದೃಷ್ಟಿಯಿಂದ ಸಂಪುಟದಲ್ಲಿ ₹8 ಹೆಚ್ಚಳಕ್ಕೆ ನಿರ್ಧರಿಸಲಾಗಿದೆ' ಎಂದು ಸಚಿವರು ಸ್ಪಷ್ಟಪಡಿಸಿದರು.






