ರಾಜ್ಯ ಸರ್ಕಾರವು 1991-92 ರಿಂದ 2019-20ರ ಅವಧಿಯ ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21 ರಿಂದ ಡಿಸೆಂಬರ್ 12ರ ವರೆಗೆ ಈ ಅವಕಾಶ ಲಭ್ಯವಿದ್ದು, ಸಂಚಾರ ಪೊಲೀಸ್ ಠಾಣೆಗಳು ಅಥವಾ ಆನ್‌ಲೈನ್ ಮೂಲಕ ದಂಡ ಪಾವತಿಸಬಹುದು.
ಬೆಂಗಳೂರು (ನ.21): ಮೂರು ದಶಕಗಳ ಹಳೇ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣ ಸಂಬಂಧ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಆನ್‌ಲೈನ್ ಮೂಲಕವೂ ದಂಡ ಪಾವತಿ:
ಈ ರಿಯಾಯಿತಿ ಶುಕ್ರವಾರದಿಂದಲೇ ಜಾರಿಗೆ ಬರಲಿದ್ದು, ದಂಡ ಪಾವತಿಗೆ 20 ದಿನಗಳ ಸಮಯ ನೀಡಲಾಗಿದೆ. ಈ ಆಫರ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಂಚಾರ ಪೊಲೀಸ್ ಠಾಣೆಗಳು, ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ (ಕೆಎಸ್‌ಪಿ) ಹಾಗೂ ಬೆಂಗಳೂರು ಒನ್ ಸೇರಿ ಆನ್‌ಲೈನ್ ಮೂಲಕ ಕೂಡ ದಂಡ ಪಾವತಿಗೆ ಅವಕಾಶ ಕೊಡಲಾಗಿದೆ.
ಏನಿದೆ ಆದೇಶದಲ್ಲಿ?
1991-92 ರಿಂದ 2019-20 ರ ಅವಧಿಯಲ್ಲಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ದಂಡದ ಪಾವತಿಗೆ ಶೇ.50 ರಷ್ಟು ರಿಯಾಯಿತಿ ನ.21 ರಿಂದ ಡಿ.12 ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯ (ಸಾರಿಗೆ ಇಲಾಖೆ) ರಂಗಪ್ಪ ಕರಿಗಾರ ಆದೇಶದಲ್ಲಿ ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಸಹ ಸಂಚಾರ ನಿಯಮಗಳ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಷ್ಟು ಸರ್ಕಾರ ವಿನಾಯ್ತಿ ನೀಡಿತ್ತು. ಆಗ ಬೆಂಗಳೂರು ನಗರದಲ್ಲಿ 5 ಲಕ್ಷ ಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡು 100 ಕೋಟಿ ರು ಹಣ ಸಂಗ್ರಹವಾಗಿತ್ತು. ಈಗ ಮತ್ತೆ ಹಳೇ ಸಂಚಾರ ಪ್ರಕರಣಗಳ ವಿಲೇವಾರಿಗೆ ಸಾರ್ವಜನಿಕರಿಗೆ ದಂಡ ಪಾವತಿಸಲು ಅವಕಾಶ ಕೊಟ್ಟಿದೆ.


