ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಸ್ಯ ಸಂಪತ್ತಿನ ಸಂರಕ್ಷಣೆಗಾಗಿ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಫೋಟೋಶೂಟ್‌, ಕ್ರೀಡೆಗಳಂತಹ ಮನರಂಜನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವಾಕಿಂಗ್‌ಗೆ ಮಾತ್ರ ಸೀಮಿತ ಸಮಯ ನಿಗದಿಪಡಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ 

ಬೆಂಗಳೂರು (ನ.21): ಬೆಂಗಳೂರಿನ ಐತಿಹಾಸಿಕ ಮತ್ತು ಪ್ರಮುಖ ಪ್ರವಾಸಿ ತಾಣವಾದ ಲಾಲ್‌ಬಾಗ್‌ ಬೊಟಾನಿಕಲ್ ಗಾರ್ಡನ್‌ನಲ್ಲಿ ಇನ್ಮುಂದೆ ಮನರಂಜನಾ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಉದ್ಯಾನವನದ ಸಸ್ಯ ಸಂಪತ್ತು ಮತ್ತು ಜೀನ್ ಬ್ಯಾಂಕ್‌ಗಳನ್ನು ಸಂರಕ್ಷಿಸುವ ಮಹತ್ವದ ಉದ್ದೇಶದಿಂದ ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಏನೇನು ನಿರ್ಬಂಧಿಸಲಾಗಿದೆ?

ಲಾಲ್‌ಬಾಗ್‌ನಲ್ಲಿ ಇನ್ನು ಮುಂದೆ ಈ ಕೆಳಗಿನ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ

ಫೋಟೋಶೂಟ್‌ಗಳು: ಟಿವಿ ಧಾರಾವಾಹಿ, ಸಿನಿಮಾ, ರೀಲ್ಸ್‌, ಪ್ರೀ/ಪೋಸ್ಟ್ ವೆಡ್ಡಿಂಗ್, ಮಾಡೆಲಿಂಗ್, ಬೇಬಿ ಶವರ್ ಸೇರಿದಂತೆ ಯಾವುದೇ ರೀತಿಯ ವಾಣಿಜ್ಯ ಅಥವಾ ಮನರಂಜನಾ ಉದ್ದೇಶದ ಫೋಟೋಶೂಟ್‌ಗಳು ಅಥವಾ ಡ್ರೋನ್ ಛಾಯಾಗ್ರಹಣ ಇನ್ಮುಂದೆ ನಿಷೇಧ.

ಕ್ರೀಡೆ ಮತ್ತು ಸಮಾರಂಭಗಳು: ವಾಕಥಾನ್, ಮ್ಯಾರಥಾನ್, ಸ್ಕೇಟಿಂಗ್, ಸೈಕ್ಲಿಂಗ್, ಸಾಮೂಹಿಕ ಯೋಗ ಚಟುವಟಿಕೆಗಳು ಮತ್ತು ಹುಲ್ಲುಗಾವಲುಗಳಲ್ಲಿ ಆಟವಾಡುವುದು.

ಇತರ ನಿರ್ಬಂಧಗಳು:

  • ಪಕ್ಷಿಗಳು ಮತ್ತು ಮೀನುಗಳಿಗೆ ಆಹಾರ ನೀಡುವುದು.
  • ಸಾಕು ಪ್ರಾಣಿಗಳನ್ನು ಉದ್ಯಾನದೊಳಗೆ ಕರೆತರುವುದು.
  • ಮರ ಹತ್ತುವುದು, ರೆಂಬೆಗಳೊಂದಿಗೆ ಆಟವಾಡುವುದು, ಹಣ್ಣು, ಹೂವುಗಳನ್ನು ಕಿತ್ತುಕೊಳ್ಳುವುದು.
  • ಹೊರಗಿನಿಂದ ಆಹಾರ, ಆಟಿಕೆಗಳು, ಬಲೂನ್‌ಗಳು ಅಥವಾ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ತರುವುದು.
  • ಹೊರಗಿನವರು ಗಿಡಗಳನ್ನು ನೆಡುವುದು.

ವಾಕಿಂಗ್ ಮತ್ತು ಜಾಗಿಂಗ್‌ಗೆ ಮಾತ್ರ ಅವಕಾಶ:

ಉದ್ಯಾನವನದಲ್ಲಿ ನಿವಾಸಿಗಳಿಗೆ ವಾಕಿಂಗ್ ಮತ್ತು ಜಾಗಿಂಗ್‌ಗೆ ಮಾತ್ರ ಅವಕಾಶವಿದ್ದು, ಅದಕ್ಕೂ ಸಮಯ ನಿಗದಿ ಮಾಡಲಾಗಿದೆ.

  • ಬೆಳಿಗ್ಗೆ: 5.30 ರಿಂದ 9 ಗಂಟೆಯವರೆಗೆ
  • ಸಂಜೆ: 4.30 ರಿಂದ 7 ಗಂಟೆಯೊಳಗೆ
  • ನಿಯಮ ಪಾಲಿಸದಿದ್ದರೆ ದಂಡ:

ಲಾಲ್‌ಬಾಗ್‌ ಆಡಳಿತ ಮಂಡಳಿಯ ಈ ಹೊಸ ಆದೇಶವನ್ನು ಉಲ್ಲಂಘಿಸಿದಲ್ಲಿ, ಇಲಾಖೆಯು ಸ್ಥಳದಲ್ಲೇ ₹500 ದಂಡ ವಿಧಿಸಲಿದೆ ಎಂದು ಎಚ್ಚರಿಸಿದೆ. ಆದಾಗ್ಯೂ, ಪರಿಸರ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆದರೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವು ಲಾಲ್‌ಬಾಗ್‌ ಸಸ್ಯ ಸಂಪತ್ತನ್ನು ಉಳಿಸಲು ಮತ್ತು ಉದ್ಯಾನವನದ ಶಾಂತ ವಾತಾವರಣವನ್ನು ಕಾಪಾಡಲು ಸಹಾಯಕವಾಗಲಿದೆ.