ಬೆಂಗಳೂರು(ಡಿ.05): ಮರಾಠ ಸಮುದಾಯ ನಿಗಮ ಸ್ಥಾಪನೆ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ ಶನಿವಾರ ನಡೆಯಲಿದ್ದು, ಬಂದ್‌ಗೆ ಬೆಂಬಲ ಹಾಗೂ ವಿರೋಧವೆರಡೂ ವ್ಯಕ್ತವಾಗಿರುವುದರಿಂದ ಜನರು ಎಷ್ಟರಮಟ್ಟಿಗೆ ಸ್ಪಂದಿಸುತ್ತಾರೆಂಬುದು ಕುತೂಹಲ ಮೂಡಿಸಿದೆ. ಸರ್ಕಾರ ಕೂಡ ಜನಜೀವನ ಅಸ್ತವ್ಯಸ್ತಗೊಳ್ಳದಂತೆ ಕ್ರಮ ಕೈಗೊಂಡಿರುವುದಾಗಿ ಹೇಳಿರುವುದರಿಂದ ಈ ಬಂದ್‌ ಕನ್ನಡಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.

"

ರೈತ ಸಂಘ ಹಾಗೂ ಅನೇಕ ವ್ಯಾಪಾರಿ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿ ಎಂದಿನಂತೆ ಅಂಗಡಿ ಮುಂಗಟ್ಟು ತೆರೆಯುವುದಾಗಿ ಹೇಳಿಕೊಂಡಿವೆ. ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚು ಮರಾಠ ಸಮುದಾಯದವರು ಇರುವ ಪ್ರದೇಶಗಳಲ್ಲಿ ಬಂದ್‌ ಕರೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ನಡುವೆ ಹೈಕೋರ್ಟ್‌ ಸಹ ಬಂದ್‌ ವೇಳೆ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟವನ್ನು ಬಂದ್‌ಗೆ ಕರೆ ನೀಡಿರುವ ಆಯೋಜಕರೇ ಭರಿಸಬೇಕಾಗುತ್ತದೆ ಎಂದು ಆದೇಶಿಸಿದೆ.

ಕರ್ನಾಟಕ ಬಂದ್; ಆಸ್ತಿ, ವ್ಯಾಪಾರಿಗಳ ನಷ್ಟಕ್ಕೆ ಕರೆಕೊಟ್ಟವರೆ ಹೊಣೆ!

ಹೀಗಿದ್ದರೂ ಸಂಘಟನೆಗಳು ಪ್ರತಿಭಟನೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಲು ಮುಂದಾಗಿರುವುದರಿಂದ ಪ್ರಯಾಣಿಕರ ವಾಹನ, ಸರಕು ಸಾಗಣೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸಂಘಟನೆಗಳು ಹೆಚ್ಚು ಸಕ್ರಿಯವಾಗಿರುವ ದೊಡ್ಡ ನಗರಗಳಲ್ಲಿ ಬಂದ್‌ನಿಂದ ವ್ಯಾಪಾರ, ವಹಿವಾಟುಗಳ ಮೇಲೆ ಪರಿಣಾಮ ಉಂಟಾಗಲಿದೆ.

ಏನಿರುತ್ತೆ?

"

ಸರ್ಕಾರಿ ಸಂಸ್ಥೆ, ಬ್ಯಾಂಕ್‌, ಆಸ್ಪತ್ರೆ, ಬಸ್‌, ರೈಲು, ಚಿತ್ರಮಂದಿರ, ಮಾಲ್‌, ಹೋಟೆಲ್‌, ಹಾಲು, ದಿನಪತ್ರಿಕೆ

ಏನಿರಲ್ಲ?

ಆಟೋ, ಟ್ಯಾಕ್ಸಿ

ಕರ್ನಾಟಕ ಬಂದ್‌: ಬೆಂಗಳೂರಲ್ಲಿ 16000 ಪೊಲೀಸರ ನಿಯೋಜನೆ, ಪಂತ್‌

ಬೃಹತ್‌ ಸಮಾವೇಶ, ಪ್ರತಿಭಟನೆಗೆ ಸಜ್ಜು:

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದರೆ, ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾ ಜಾಥಾ, ರಸ್ತೆ ತಡೆ, ಗಡಿ ಬಂದ್‌, ಬಸ್‌ ಸಂಚಾರ ತಡೆ ಮುಂತಾದವುಗಳನ್ನು ಹಮ್ಮಿಕೊಂಡಿವೆ. ರಾಜ್ಯದೆಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಜತೆಗೆ 50ಕ್ಕೂ ಹೆಚ್ಚು ಸಂಘಟನೆಗಳು ಬಹಿರಂಗವಾಗಿ ಬೆಂಬಲ ನೀಡಿವೆ. ಆದರೆ ನಿಗಮ ಸ್ಥಾಪನೆಯನ್ನು ವಿರೋಧಿಸಿರುವ ಹೋಟೆಲ್‌ ಮಾಲಿಕರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ, ಬೆಂಗಳೂರು ಆಲೂಗಡ್ಡೆ, ಈರುಳ್ಳಿ ವರ್ತಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿಬಣ) ಸೇರಿದಂತೆ ಹಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ.

ರೈತ ಸಂಘದಿಂದ ನೈತಿಕ ಬೆಂಬಲ:

ಕೇಂದ್ರ ಸರ್ಕಾರದ ವಿರುದ್ಧ ಡಿ.8ರಂದು ಭಾರತ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಂದ್‌ಗೆ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಇತರೆ ಸಂಘಟನೆಗಳು ನೈತಿಕ ಬೆಂಬಲ ನೀಡಲಿವೆ ಎಂದು ಈ ಸಂಘಟನೆಗಳ ಮುಖ್ಯಸ್ಥರಾದ ಕೋಡಿಹಳ್ಳಿ ಚಂದ್ರಶೇಖರ್‌, ಕುರುಬೂರು ಶಾಂತಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬಂದ್‌ಗೆ ಕರವೇ ಬೆಂಬಲ:

ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ), ಜಯ ಕರ್ನಾಟಕ ಸಂಘ, ವಕೀಲರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ದಲಿತ, ಕಾರ್ಮಿಕ ಮತ್ತು ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಟ್ಯಾಕ್ಸಿ ಮತ್ತು ಓಲಾ-ಊಬರ್‌, ಲಾರಿ ಮಾಲಿಕರ ಸಂಘ, ಬಿಬಿಎಂಪಿ ಪೌರ ಕಾರ್ಮಿಕರ ಸಂಘ, ಕರುನಾಡ ವಿಜಯ ಸೇನೆ, ಖಾಸಗಿ ಶಾಲಾ ವಾಹನಗಳ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲಿಕರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವುದಾಗಿ ತಿಳಿಸಿವೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅರ್ಥಿಕವಾಗಿ ಹೊರೆಯಾಗುವ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ. ವ್ಯಾಪಾರ-ವಹಿವಾಟುಗಳು ಎಂದಿನಂತೆ ನಡೆಯಲಿವೆ.

- ಸಿ.ಇ.ರಂಗಸ್ವಾಮಿ, ಅಧ್ಯಕ್ಷ, ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ

ಇದು ಕರವೇ ಅಲ್ಲ, ಕಳ್ಳರ ವೇದಿಕೆ: ಶಾಸಕ ಕೆಂಡಾಮಂಡಲ

ಬಂದ್‌ಗೆ ಸಂಘದ ನೈತಿಕ ಬೆಂಬಲವಿದೆ. ಕೊರೋನಾದಿಂದಾಗಿ ಜ್ಯುವೆಲರಿ ಮಾಲಿಕರು, ವ್ಯಾಪಾರಿಗಳು, ಆಭರಣ ತಯಾರಕರು ಕಷ್ಟದಲ್ಲಿದ್ದಾರೆ. ಹೀಗಾಗಿ ಬಂದ್‌ ವೇಳೆ ಅಂಗಡಿ ಮುಚ್ಚಲು ಸಾಧ್ಯವಿಲ್ಲ. ಕನ್ನಡಪರ ಸಂಘಟನೆಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ.

- ಟಿ.ಎ.ಶರವಣ, ರಾಜ್ಯಾಧ್ಯಕ್ಷ, ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್‌

ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಓಲಾ, ಊಬರ್‌, ಏರ್‌ಪೋರ್ಟ್‌ ಟ್ಯಾಕ್ಸಿ ಸೇವೆ ಇರುವುದಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ರಾರ‍ಯಲಿಯಲ್ಲಿ ಭಾಗವಹಿಸುವುದಿಲ್ಲ.

- ತನ್ವೀರ್‌ ಪಾಷಾ, ಓಲಾ-ಊಬರ್‌ ಟ್ಯಾಕ್ಸಿ ಮಾಲಿಕರು ಹಾಗೂ ಚಾಲಕರ ಯೂನಿಯನ್‌ ಅಧ್ಯಕ್ಷ

ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಎಂದಿನಂತೆ ಇರಲಿದೆ. ಬಸ್‌ ನಿಲ್ದಾಣ, ಕಚೇರಿಗಳು, ಕಾರ್ಯಾಗಾರಗಳು ಹಾಗೂ ಡಿಪೋಗಳಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

- ಪ್ರಭಾಕರ್‌ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ), ಕೆಎಸ್‌ಆರ್‌ಟಿಸಿ