ಬೆಂಗಳೂರು(ಡಿ.03): ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ ಹಿನ್ನೆಲೆಯಲ್ಲಿ ಡಿ.5ರಂದು ರಾಜಧಾನಿಯಲ್ಲಿ ಮುಂಜಾಗ್ರತ ಕ್ರಮವಾಗಿ ಸುಮಾರು 16,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ನಿರ್ಧರಿಸಲಾಗಿದೆ.

"

ಈ ಸಂಬಂಧ ಗುರುವಾರ ‘ಕನ್ನಡಪ್ರಭ’ ಜತೆ ಮಾತನಾಡಿದ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಪ್ರತಿಭಟನೆ ಅಥವಾ ಬಂದ್‌ಗೆ ಆಚರಣೆಗೆ ಯಾರಿಗೂ ಅನುಮತಿ ನೀಡಿಲ್ಲ. ಶಾಂತಿ ಭಂಗಕ್ಕೆ ಯತ್ನಿಸಿದರೆ ಮುಲಾಜಿಲ್ಲದೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಡಿಸಿಪಿಗಳು ಹಾಗೂ 16 ಸಾವಿರ ಪೊಲೀಸರು ಭದ್ರತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ 30 ಕೆಎಸ್‌ಆರ್‌ಪಿ ಹಾಗೂ 30 ನಗರ ಸಶಸ್ತ್ರ ಮೀಸಲು ಪಡೆಗಳನ್ನು ಬಂದೋಬಸ್‌್ತಗೆ ಬಳಸಿಕೊಳ್ಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರದಂತೆ ನಿಗಾವಹಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಬಂದ್ ಮಾಡಿದ್ರೆ ವಾಟಾಳ್ ತಲೆ ಬೋಳಿಸ್ತಿವಿ ಎಂದು ಎಚ್ಚರಿಕೆ ನೀಡಿದ್ರು

ಬಂದ್‌ ಪಾಲ್ಗೊಳ್ಳುವಂತೆ ಜನರ ಮೇಲೆ ಬಲವಂತವಾಗಿ ಒತ್ತಡ ಹೇರಬಾರದು. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಎದುರಿಸಲಾಗುತ್ತದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್‌ ಕಲ್ಪಿಸಲಾಗುತ್ತದೆ. ಶಾಂತಿ ಭಂಗ ಉಂಟಾಗದಂತೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳ ಸಭೆ:

ರಾಜ್ಯ ಬಂದ್‌ ಹಾಗೂ ಡಿ.8ರ ಬಾಬರಿ ಮಸೀದಿ ಧ್ವಂಸ ಘಟನೆಗೆ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂದೋಬಸ್ತ್‌ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳ ಜತೆ ಗುರುವಾರ ಆಯುಕ್ತ ಕಮಲ್‌ ಪಂತ್‌ ಸಭೆ ನಡೆಸಿ ಮಾಹಿತಿ ಪಡೆದರು.
ಈ ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಸೌಮೆಂದು ಮುಖರ್ಜಿ, ಮುರುಗನ್‌, ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಡಿಸಿಪಿಗಳು ಪಾಲ್ಗೊಂಡಿದ್ದರು.