ವಿಜಯಪುರ (ಡಿ.03): ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿ.5ರಂದು ಬಂದ್‌ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅದು ಕರ್ನಾಟಕ ರಕ್ಷಣಾ ವೇದಿಕೆ ಅಲ್ಲ, ಕಳ್ಳರ ರಕ್ಷಣಾ ವೇದಿಕೆ ಎಂದು ವ್ಯಂಗ್ಯವಾಡಿದ್ದಾರೆ. 

ಡಿ.5ರ ಬಂದ್‌ ಅನ್ನು ವಿಫಲಗೊಳಿಸುವ ಸಲುವಾಗಿ ನಗರದಲ್ಲಿ ಬುಧವಾರ ನಡೆದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಕನ್ನಡ ಹೋರಾಟಗಾರರ ಜಾತಕ ನನಗೆ ಗೊತ್ತಿದೆ. 

ಚಾಲೆಂಜ್ ಮಾಡಿದಂತೆ ಕರ್ನಾಟಕ ಬಂದ್ ವಿಫಲಗೊಳಿಸಲು ಯತ್ನಾಳ್ ಮಾಸ್ಟರ್ ಪ್ಲಾನ್...

ಹೋರಾಟಗಾರರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಮೊದಲು ತಮ್ಮ ಕನ್ನಡ ಶಾಲೆಗೆ ಸೇರಿಸಲಿ ಎಂದರು. ಇದೇವೇಳೆ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ವಿರುದ್ಧವೂ ಹರಿಹಾಯ್ದಿರುವ ಅವರು, ವಾಟಾಳ್‌ ನಾಗರಾಜ್‌ ಸೇರಿದಂತೆ ಎಲ್ಲ ಹೋರಾಟಗಾರರು ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ ಎಂದರು.

 ಟೀಕೆ ಇದ್ದರೂ ಅದು ಗೌರವಯುತವಾಗಿರಲಿ. ಒಂದು ವೇಳೆ ತಮ್ಮ ಚಾಳಿ ಮುಂದುವರೆಸಿದರೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.