Priyank Kharge letter to CM:ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ನಿಷೇಧಕ್ಕೆ ಪತ್ರ ಬರೆದಿದ್ದಕ್ಕೆ ಚಿಕ್ಕಮಗಳೂರಲ್ಲಿ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖರ್ಗೆಗೆ ‘ಸಂವಿಧಾನ ತಿಳಿಯದ ಅಜ್ಞಾನಿ’ ಎಂದರು. ಸಂವಿಧಾನದ ಆರ್ಟಿಕಲ್ 19 ಸಂಘಟನೆ ಕಟ್ಟುವ ಹಕ್ಕನ್ನು ನೀಡಿದೆ ಎಂದರು.
ಚಿಕ್ಕಮಗಳೂರು, (ಅ.15): ಸಚಿವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ ಚಟುವಟಿಕೆಗೆ ನಿಷೇಧ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ದೇಶಾದ್ಯಂತ ಭಾರಿ ಚರ್ಚೆಯನ್ನು ಎಚ್ಚರಿಸಿದೆ. ಈ ಹೇಳಿಕೆಯು ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಅವರು ನಿಷೇಧಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಈ ನಡುವೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೂಡ ಚಿಕ್ಕಮಗಳೂರಿನಲ್ಲಿ ಖರ್ಗೆಯವರ ಹೇಳಿಕೆಗೆ ಕಿಡಿಕಾರಿದ್ದಾರೆ.
ಸಂವಿಧಾನ ತಿಳಿಯದ ಅಜ್ಞಾನಿಗಳು:
ಆರೆಸ್ಸೆಸ್ ನಿಷೇಧಿಸಬೇಕು ಎಂಬುವುದು ಸಂವಿಧಾನ ವಿರೋಧಿ ಷಡ್ಯಂತ್ರ ಎಂದು ಟೀಕಿಸಿದ ಸಿಟಿ ರವಿ, ಆರ್‌ಎಸ್‌ಎಸ್‌ನಂತಹ ದೊಡ್ಡ ಸಂಸ್ಥೆಯನ್ನು ಗುರಿಯಾಗಿಸಿ ರಾಜಕೀಯ ದುರುದ್ದೇಶದಿಂದ ಅವರು ಆರೋಪಿಸುತ್ತಿದ್ದಾರೆ. ಖರ್ಗೆ ಮತ್ತು ದಿನೇಶ್ ಗುಂಡೂರಾವ್ ಅಂಥವರು ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದ ಅಜ್ಞಾನಿಗಳು ಮಾತ್ರ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ: ಸತೀಶ್ ಜಾರಕಿಹೊಳಿ ಕಿಡಿ
ಅಪ್ಪನ ಹೆಸರಲ್ಲಿ ಮಂತ್ರಿ ಆದವರು ಆರೆಸ್ಸೆಸ್ ಬಗ್ಗೆ ಮಾತಾಡ್ತಾರೆ:
ಅಪ್ಪನ ಹೆಸರಲ್ಲಿ, ಅಜ್ಜನ ಹೆಸರಲ್ಲಿ ಎಂಎಲ್‌ಎ, ಮಂತ್ರಿಗಳಾದವರು ಆರೆಸ್ಸೆಸ್ ಬಗ್ಗೆ ಮಾತಾಡ್ತಾರೆ. ಸಂಘಟನೆ ಕಟ್ಟುವ ಅಧಿಕಾರವನ್ನು ಸಂವಿಧಾನದ ಆರ್ಟಿಕಲ್ 19 ನೀಡಿದೆ. ನೆಲದ ಕಾನೂನುಗಳಿಗೆ ಅನುಗುಣವಾಗಿ ಸಂಘಟನೆಗಳನ್ನು ಕಟ್ಟುವ ಹಕ್ಕು ಸಂವಿಧಾನವೇ ಕೊಟ್ಟಿದೆ. ಸಂಪುಟದಲ್ಲಿ ಅಜ್ಞಾನಿಗಳಿದ್ದರೆ ಇಂತಹ ಅಸಂಭದ್ದ ಹೇಳಿಕೆಗಳು ಬರುತ್ತವೆ ಎಂದು ರವಿ ಕಟುವಾಗಿ ಟೀಕಿಸಿದರು.
ಖರ್ಗೆಯ ಅವ ಪತ್ರವು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಗುರಿಯಾಗಿಸಿ ನಿಷೇಧಕ್ಕೆ ಒತ್ತು ನೀಡಿದ್ದರಿಂದ ಈ ವಿವಾದ ತೀವ್ರಗೊಂಡಿದೆ.
