Priyank Kharge on RSS :ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ಅನ್ನು ಬ್ಯಾನ್ ಮಾಡುವ ಬಗ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಸರ್ಕಾರಿ ಸ್ಥಳಗಳಲ್ಲಿ ಅವರ ಚಟುವಟಿಕೆ ನಿಲ್ಲಬೇಕು ಎಂದಿದ್ದಾರೆ. ಆರ್‌ಎಸ್‌ಎಸ್‌ ನೋಂದಾಯಿತ ಸಂಘಟನೆಯಲ್ಲ ಮತ್ತು ಶಾಲೆಗಳಲ್ಲಿ 'ಬ್ರೇನ್‌ವಾಷಿಂಗ್' ನಿಲ್ಲಬೇಕು

ಬೆಂಗಳೂರು (ಅ.13): ನಾನು ಆರ್‌ಎಸ್‌ಎಸ್‌ನನ್ನು ಬ್ಯಾನ್ ಮಾಡಬೇಕೆಂದು ಎಲ್ಲೂ ಹೇಳಿಲ್ಲ, ಸರ್ಕಾರಿ ಸ್ಥಳಗಳಲ್ಲಿ ಅವರ ಚಟುವಟಿಕೆಗೆ ಅವಕಾಶ ನೀಡಬಾರದೆಂದು ಹೇಳಿದ್ದೇನೆ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್ ಕುರಿತು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟಪಡಿಸಿದರು.

ಅರೆಸ್ಸೆಸ್‌ನಂತೆ ಇತರ ಸಂಘಟನೆಗಳು ದೊಣ್ಣೆ ಹಿಡಿದು ಓಡಾಡಿದರೆ ಒಪ್ಪುತ್ತೀರಾ? ದಲಿತ ಮತ್ತು ಹಿಂದುಳಿದ ಸಂಘಟನೆಗಳಿಗೆ ಇದೇ ಅವಕಾಶ ಕೊಟ್ಟರೆ ಒಪ್ಪಿಗೆಯಾ? ಎಂದು ಪ್ರಶ್ನಿಸಿದ ಖರ್ಗೆ, ಶಾಲೆಗಳಲ್ಲಿ ಆರ್‌ಎಸ್‌ಎಸ್‌ನಿಂದ ನಡೆಯುತ್ತಿರುವ 'ಬ್ರೇನ್‌ವಾಷಿಂಗ್' ನಿಲ್ಲಬೇಕೆಂದು ಎಂದರು.

ಆರೆಸ್ಸೆಸ್ ನೊಂದಾಯಿತ ಸಂಘಟನೆ ಅಲ್ಲ:

ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಘಟನೆಯಾಗಿದ್ದರೆ, ಅದರ ರಿಜಿಸ್ಟರ್ ಕಾಪಿಯನ್ನು ತೋರಿಸಲಿ ಎಂದು ಸವಾಲು ಹಾಕಿರುವ ಖರ್ಗೆ, '55 ವರ್ಷಗಳ ಕಾಲ ಆರ್‌ಎಸ್‌ಎಸ್ ತನ್ನ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲಿಲ್ಲ? ಎಂದು ಪ್ರಶ್ನಿಸಿದರು. ಹನುಮೇಗೌಡ ಎಂಬುವರು ಆರ್‌ಎಸ್‌ಎಸ್‌ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ. ಕೇರಳದಲ್ಲಿ ಇಂತಹ ಘಟನೆಗೆ ಒಬ್ಬರು ಬಲಿಯಾಗಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಆರ್‌ಎಸ್‌ಎಸ್‌ಗೆ ಎಷ್ಟು ಮಂದಿ ಬಲಿಯಾಗಿದ್ದಾರೆ ತೆಗೆಯಿರಿ ಎಂದರು.

ನಾನು ಹಿಂದೂ ವಿರೋಧಿಯಲ್ಲ, ಆರೆಸ್ಸೆಸ್ ವಿರೋಧಿ

ಬಿಜೆಪಿ ನಾಯಕರು ನನ್ನನ್ನು ಹಿಂದೂ ವಿರೋಧಿ ಎಂದು ಟೀಕಿಸುತ್ತಾರೆ. ನಾನು ಹಿಂದೂ, ಹಿಂದೂ ವಿರೋಧಿಯಲ್ಲ. ಆರೆಸ್ಸೆಸ್ ವಿರೋಧಿ ಎಂದರು. ಬಿಜೆಪಿ ಶಾಸಕ ಮುನಿರತ್ನ ಗಣವೇಷ ಧರಿಸಿ ಗಾಂಧೀಜಿಯವರ ಫೋಟೋ ಹಿಡಿದು ಪ್ರತಿಭಟಿಸಿದ್ದು ಹಾಸ್ಯಾಸ್ಪದ. ಮುನಿರತ್ನ ಅವರಿಗೆ ಆರ್‌ಎಸ್‌ಎಸ್‌ನ ಇತಿಹಾಸ ಗೊತ್ತಿಲ್ಲ ಎನ್ನಿಸುತ್ತದೆ ಎಂದು ಅವರು ಲೇವಡಿ ಮಾಡಿದರು. ಬಿಜೆಪಿ ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದು, ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಶೂನ್ಯ ಧರ್ಮ ಇಲ್ಲದ ಆರೆಸ್ಸೆಸ್ ಶೂನ್ಯ ಎಂದರು.

ಖರ್ಗೆ ಆರೆಸ್ಸೆಸ್ ಹೊಗಳಿಲ್ಲ: ಉಗಿದಿದ್ದಾರೆ:

ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರಾಗಿದ್ದಾಗ ಆರೆಸ್ಸೆಸ್ ಶಾಖೆಗೆ ಹೋಗಿದ್ದಾರೆ ಅಂತಾ ಬಿಜೆಪಿ ನಾಯಕರು ಫೋಟೋ ತೋರಿಸ್ತಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಯಾಕೆ ಹೋಗಿದ್ದರು ಅಲ್ಲಿ ಏನು ಹೇಳಿದರು ಎಂದು ಹೇಳುತ್ತಿಲ್ಲ. ಅವರ ಅರೆಸ್ಸೆಸ್ ಶಾಖೆಗೆ ಗೃಹ ಸಚಿವರಾಗಿ ಅಲ್ಲಿ ಹೋಗಿ ತಾಕೀತು ಮಾಡಿದ್ದರು. 'ಶಿವಾಜಿನಗರ ಸೆನ್ಸಿಟಿವ್ ಏರಿಯಾ, ಇಲ್ಲಿ ಬಾಲ ಬಿಚ್ಚಿದರೆ ಹುಷಾರ್' ಅಂತಾ ಮುಖದ ಮೇಲೆ ಉಗಿದಿದ್ದಾರೆ. ಆದರೆ ಅದನ್ನೆಲ್ಲ ಇವರು ಹೇಳಲ್ಲ. ಅಂದಿನ ಅಧಿಕಾರಿಗಳೊಂದಿಗೆ ಜೊತೆಗೆ ಹೋಗಿದ್ದರೆ ಹೊರತು ಶಾಖೆಗೆ ಹೋಗಿದ್ದಲ್ಲ' ಎಂದು ತಿರುಗೇಟು ನೀಡಿದರು.