ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಫೋಟಕ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಶ್ರೀರಾಮುಲು ಅವರ ಮೇಲಿನ ಪೂರ್ವನಿಯೋಜಿತ ದಾಳಿ ಎಂದು ಆರೋಪಿಸಿರುವ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. 

ಬಳ್ಳಾರಿ (ಜ.11): ಬಳ್ಳಾರಿಯ ಬ್ಯಾನರ್ ಗಲಾಟೆ ಮತ್ತು ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇಂದು ಸ್ಫೋಟಕ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸರ್ಕಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಗುಡುಗಿದ್ದಾರೆ.

'ಶ್ರೀರಾಮುಲು ಕೊಲ್ಲಿ' ಎಂದಿದ್ದಾರೆಯೇ ಸತೀಶ್ ರೆಡ್ಡಿ? ವಿಡಿಯೋ ಬಾಂಬ್ ಸಿಡಿಸಿದ ರೆಡ್ಡಿ

ಬಳ್ಳಾರಿಯ ಗ್ಲಾಸ್ ಹೌಸ್‌ನಲ್ಲಿ ಇಂದು ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, ಬ್ಯಾನರ್ ಗಲಾಟೆ ವೇಳೆ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. 'ಗಲಾಟೆ ನಡೆಯುವ ಮೊದಲು ಶ್ರೀರಾಮುಲು ಅವರು ಸತೀಶ್ ರೆಡ್ಡಿಗೆ ಇಲ್ಲಿಂದ ತೆರಳುವಂತೆ ಸೂಚಿಸಿದ್ದರು. ಆದರೆ ಸತೀಶ್ ರೆಡ್ಡಿ ಶ್ರೀರಾಮುಲು ಅವರ ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಶ್ರೀರಾಮುಲು ಅವರನ್ನು ಹೊಡೆಯಿರಿ, ಮುಗಿಸಿರಿ, ಸಾಯಿಸಿರಿ ಎಂದು ಕೆಟ್ಟ ಪದಗಳಿಂದ ಪ್ರಚೋದನೆ ನೀಡಿದ್ದಾರೆ' ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಇದು 'ಪ್ರಿ-ಪ್ಲಾನ್ಡ್' ದಾಳಿ: ಬ್ಯಾನರ್ ನೆಪ ಮಾತ್ರ!

ಈ ಗಲಾಟೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಬದಲಾಗಿ ವ್ಯವಸ್ಥಿತ ಸಂಚು ಎಂದು ಆರೋಪಿಸಿದ ಜನಾರ್ದನ ರೆಡ್ಡಿ ಅವರು, ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲೇ ಬ್ಯಾನರ್ ತೆಗೆಸಲಾಗಿತ್ತು. ಆದರೆ ರಾತ್ರಿ ಮತ್ತೆ ಬ್ಯಾನರ್ ಹಾಕಲು ಗನ್ ಮ್ಯಾನ್ ಕರೆದುಕೊಂಡು ಬಂದಿದ್ದಾರೆ ಎಂದರೆ ಇದರ ಉದ್ದೇಶವೇನು? ಶ್ರೀರಾಮುಲು ಮೇಲೆ ದಾಳಿ ಮಾಡಲು ಅವರು ಮೊದಲೇ ಪ್ಲಾನ್ ಮಾಡಿದ್ದರು. ಬ್ಯಾನರ್ ಹಾಕುವುದು ಒಂದು ನೆಪವಷ್ಟೇ. ಈ ವಿಡಿಯೋ ಸಾಕ್ಷಿಗಳನ್ನು ನೋಡಿದರೆ ಅವರ ಕ್ರಿಮಿನಲ್ ಸಂಚು ಬಯಲಾಗುತ್ತದೆ' ಎಂದು ಅವರು ವಿವರಿಸಿದರು.

ಸಿಐಡಿ ತನಿಖೆ ಕಣ್ಣೊರೆಸುವ ತಂತ್ರ: ಸಿಬಿಐಗೆ ಒಪ್ಪಿಸಲು ಆಗ್ರಹ

ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವ ಸರ್ಕಾರದ ನಡೆಯನ್ನು ಜನಾರ್ದನ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ. 'ಘಟನೆ ನಡೆದು ಹತ್ತು ದಿನಗಳಾದರೂ ಒಬ್ಬನೇ ಒಬ್ಬ ಆರೋಪಿಯ ಬಂಧನವಾಗಿಲ್ಲ. ಸಿಐಡಿ ಮತ್ತು ನಮ್ಮ ಪೊಲೀಸರ ನಡುವೆ ವ್ಯತ್ಯಾಸವಿಲ್ಲ, ಇದು ಕೇವಲ ಕಾಲಹರಣದ ತಂತ್ರ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಬಿಐ ತನಿಖೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿರಲಿಲ್ವೇ? ಈಗ ನಮಗೂ ನ್ಯಾಯ ಬೇಕು. ಹೈಕೋರ್ಟ್ ಮೂಲಕ ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಧೀಶರ ತನಿಖೆಗೆ ಒಪ್ಪಿಸಲು ನಾವು ರಿಟ್ ಅರ್ಜಿ ಸಲ್ಲಿಸುತ್ತೇವೆ' ಎಂದು ಅವರು ಎಚ್ಚರಿಕೆ ನೀಡಿದರು.

ಡಿಕೆಶಿ ವ್ಯಂಗ್ಯಕ್ಕೆ ತಿರುಗೇಟು: ಗುಂಡೇಟು ಬಿದ್ರೆ ಇವರು ಬಂದು ಕಾಪಾಡ್ತಾರಾ?

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳ ವಿರುದ್ಧ ಕಿಡಿಕಾರಿದ ರೆಡ್ಡಿ, 'ನನ್ನ ಮೇಲೆ ದಾಳಿಯಾದಾಗ 'ಅಮೆರಿಕದಿಂದ ಭದ್ರತೆ ತರಿಸಿಕೊಳ್ಳಿ' ಎಂದು ಡಿಕೆಶಿ ವ್ಯಂಗ್ಯವಾಡುತ್ತಾರೆ. ಗುಂಡು ಎಲ್ಲಿ ಬಿತ್ತು ಎಂದು ಹಗುರವಾಗಿ ಮಾತನಾಡುತ್ತಾರೆ. ಸರ್ಕಾರವೇ ಆರೋಪಿ ಶಾಸಕ ಭರತ್ ರೆಡ್ಡಿ ಬೆನ್ನಿಗೆ ನಿಂತಾಗ ಸಿಐಡಿ ತನಿಖೆಯಿಂದ ನ್ಯಾಯ ಸಿಗುತ್ತದೆಯೇ? ಪೊಲೀಸರ ಮೇಲೆ ವಿಶ್ವಾಸ ಹೇಗೆ ಮೂಡುತ್ತದೆ? ಎಎಸ್ಪಿ ರವಿಕುಮಾರ್ ಮತ್ತು ಡಿವೈಎಸ್ಪಿ ನಂದಾರೆಡ್ಡಿ ವಿರುದ್ಧವೂ ನಾವು ಕಾನೂನು ಹೋರಾಟ ಮಾಡುತ್ತೇವೆ. ಈ ಸಂಚಿನಲ್ಲಿ ಅವರ ಪಾತ್ರವೂ ಇದೆ ಎಂದರು.

ಜನವರಿ 17ಕ್ಕೆ ಬೃಹತ್ ಪ್ರತಿಭಟನೆ: ರಾಜ್ಯಾದ್ಯಂತ ಹೋರಾಟದ ಕಿಚ್ಚು

ಬಳ್ಳಾರಿಯ ಘಟನೆಯನ್ನು ಖಂಡಿಸಿ ಜನವರಿ 17 ರಂದು ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ರೆಡ್ಡಿ ಘೋಷಿಸಿದ್ದಾರೆ. 'ಶ್ರೀರಾಮುಲು ಅವರ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಹೊಡಿರಿ, ಕೊಲ್ಲಿರಿ ಎನ್ನಲಾಗಿದೆ. ಶ್ರೀರಾಮುಲು ಅವರು ಕೇವಲ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ, ಅವರು ಇಡೀ ರಾಜ್ಯದ ನಾಯಕರು. ಅವರನ್ನು ಮುಗಿಸಲು ಹೊರಟಿರುವ ಸಂಸ್ಕೃತಿ ವಿರುದ್ಧ ಇಡೀ ಕರ್ನಾಟಕವೇ ಧ್ವನಿ ಎತ್ತಲಿದೆ. ಪ್ರತಿಭಟನೆಯ ರೂಪರೇಷೆಗಳನ್ನು ಪಕ್ಷದ ಕೋರ್ ಕಮಿಟಿ ನಾಳೆ ಅಧಿಕೃತವಾಗಿ ಪ್ರಕಟಿಸಲಿದೆ. ಪಾದಯಾತ್ರೆ ನಡೆಸುವ ಬಗ್ಗೆಯೂ ಚರ್ಚೆಯಲ್ಲಿದೆ" ಎಂದು ಮಾಹಿತಿ ನೀಡಿದರು.